IMG-20240712-WA0014

ರಾಜ್ಯ ಸರ್ಕಾರದಿಂದ ಅಧಿಕಾರಿಗಳ ವರ್ಗಾವಣೆ ದಂದೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 15- ಸರ್ಕಾರಿ ಅಧಿಕಾರಿಗಳ ವರ್ಗಾವಣೆಗಾಗಿ ಭ್ರಷ್ಟಾಚಾರ ನಡೆಯುತ್ತಿರುವುದು ಸರ್ವೇಸಾಮಾನ್ಯವಾದ ಸಂಗತಿ ಎಂದು ಯಾವುದೇ ನಾಚಿಕೆ ಇಲ್ಲದೆ ಒಪ್ಪಿಕೊಂಡಿರುವ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಕೂಡಲೇ ಕರ್ನಾಟಕದ ಜನತೆಯ ಕ್ಷಮೆಯಾಚಿಸಬೇಕು- ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಶರಣಪ್ಪ ಸಜ್ಜಿಹೊಲ ಅವರು ಆಗ್ರಹಿಸಿದ್ದಾರೆ.

ಇಂಥವರು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವುದು ಕನ್ನಡ ನಾಡಿನ ದೌರ್ಭಾಗ್ಯವೇ ಸರಿ. ಚುನಾವಣಾ ಸಮಯದಲ್ಲಿ ನೀಡಿದ ಭರವಸೆಯಂತೆ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡುತ್ತೇವೆ ಎಂಬ ಕಾಂಗ್ರೆಸ್ ಸರ್ಕಾರದ ಭರವಸೆ ಈಗ ಹುಸಿ ಯಾಗಿರುವುದು ಈ ಮಾತಿನಿಂದ ಸ್ಪಷ್ಟವಾಗುತ್ತಿದೆ.

ಸಂವಿಧಾನಿಕ ಮಹತ್ವದ ಹುದ್ದೆಯಲ್ಲಿರುವ ಮತ್ತು ಜನರಿಂದ ನೇರವಾಗಿ ಆಯ್ಕೆ ಆಗಿರುವ ಒಬ್ಬ ಶಾಸಕರು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬಗ್ಗೆ ಮಾತನಾಡದೆ ಭ್ರಷ್ಟಾಚಾರವನ್ನು ಪುಷ್ಟೀಕರಿಸಿ ಮಾತನಾಡಿರುವುದು ಸಂವಿಧಾನಕ್ಕೆ ಬಗೆದ ಮಹಾ ಅಪಚಾರವಾಗಿದೆ.

ಭ್ರಷ್ಟಾಚಾರದ ವಿವಿಧ ಆರೋಪಗಳು ರಾಜ್ಯ ಸರ್ಕಾರದ ಮೇಲೆ ಕೇಳಿ ಬರುತ್ತಿರುವ ಈ ಸಮಯದಲ್ಲಿ ಸ್ವತಹ ಅದೇ ಪಕ್ಷದ ಶಾಸಕರು ಒಬ್ಬರು ಮತ್ತು ಮಾನ್ಯ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ಸರ್ಕಾರದ ಹತ್ತಿರದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಭ್ರಷ್ಟಾಚಾರವನ್ನು ಇಷ್ಟು ಹಗುರವಾಗಿ ಪರಿಗಣಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ವರ್ಗಾವಣೆ ಸಮಯದಲ್ಲಿ ಅಥವಾ ಇತರೆ ಯಾವುದೇ ಸರ್ಕಾರಿ ಕೆಲಸಗಳಲ್ಲಿ ಭ್ರಷ್ಟಾಚಾರ ಆಗದಂತೆ ತಡೆಯುವುದು ಸರ್ಕಾರದ ಜವಾಬ್ದಾರಿ ಆಗಿರುತ್ತದೆ ಅದನ್ನು ಬಿಟ್ಟು ಆಡಳಿತ ಪಕ್ಷದ ಶಾಸಕರೊಬ್ಬರು ಭ್ರಷ್ಟಾಚಾರವನ್ನು ಪುಷ್ಟೀಕರಿಸಿ ಮಾತನಾಡಿರುವುದು ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದಕ್ಕೆ ಕೈಗನ್ನಡಿ ಹಿಡಿದಂತಾಗಿದೆ.

ಶಾಸಕರು ಇಂತಹ ಹೊಣೆಗೇಡಿತನದ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಮತ್ತು ಕರ್ನಾಟಕದ ಮಹಾಜನತೆಯ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!