ae5b3d20-7b4f-4d95-8e07-a78bae47b44e

ತುಂಗಭದ್ರಾ; ಇಂದಿನಿಂದ ನಾಲೆಗಳಿಗೆ

ನೀರು ಹರಿಸಲು ಸೂಚನೆ: ತಂಗಡಗಿ

ಕರುನಾಡ ಬೆಳಗು ಸುದ್ದಿ

ಬೆಂಗಳೂರು: ಜು.18 – ಉತ್ತಮ ಮಳೆಯಿಂದಾಗಿ ತುಂಗಾಭದ್ರಾ ಜಲಾಶಯಕ್ಕೆ ಹೆಚ್ಚಿನ‌ ಒಳ ಹರಿವು ಬರುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆಯಿಂದ ನಾಲೆಗಳಿಗೆ ನೀರು ಹರಿಸುವಂತೆ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಸಂಬಂಧ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಸಕ್ತ ಸಾಲಿನಲ್ಲಿ ಮುಂಗಾರು- ಹಂಗಾಮಿನ ಮಳೆ ಚೆನ್ನಾಗಿ ಆಗುತ್ತಿರುವುದರಿಂದ ಜಲಾನಯನ ಪ್ರದೇಶದಲ್ಲಿ‌ ಸಾಕಷ್ಟು ಒಳ ಹರಿವು ಪ್ರಾರಂಭವಾಗಿದೆ. ಜುಲೈ 18ರ ವೇಳೆಗೆ ಜಲಾಶಯದಲ್ಲಿ 46.802 ಟಿಎಂಸಿ ನೀರು ಸಂಗ್ರಹ ಇದ್ದು, ಒಳ ಹರಿವಿನ 104060 ಕ್ಯೂಸೆಕ್ಸ್ ಇದೆ.

ಇದೇ ಪ್ರಮಾಣದಲ್ಲಿ ಒಳ ಹರಿವು ಮುಂದುವರೆದಲ್ಲಿ ವಾರದಲ್ಲಿ ಜಲಾಶಯದ ಭರ್ತಿಯಾಗುವ ನಿರೀಕ್ಷೆ ಇದೆ. ಸದ್ಯಕ್ಕೆ ಒಳ ಹರಿವು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಸಭೆ ನಡೆಸದೇ ನಾಲೆಗಳಿಗೆ ನೀರು ಹರಿಸಲು ಸೂಚಿಸಲಾಗಿದ್ದು,‌ ಶೀಘ್ರದಲ್ಲೇ ಐಸಿಸಿ ಸಭೆಗೆ ದಿನಾಂಕ ನಿಗದಿಪಡಿಸಲಾಗುವುದು. ರೈತರ ಹಿತ ದೃಷ್ಟಿಯಿಂದ ಮುಂಗಡವಾಗಿ ನೀರು ಬಿಡುಗಡೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಡದಂಡೆ ಮುಖ್ಯ ಕಾಲುವೆಗೆ ಜುಲೈ 19ರಿಂದ 4100 ಕ್ಯೂಸೆಕ್ಸ್ ನಂತೆ, ಬಲದಂಡೆ ಕೆಳಮಟ್ಟದ ವಿತರಣಾ ಕಾಲುವೆಗೆ ಜು.19ರಿಂದ‌ 650 ಕ್ಯೂಸೆಕ್ಸ್ ನಂತೆ, ಬಲದಂಡೆ ಮೇಲ್ಮಟ್ಟದ ವಿತರಣಾ ಕಾಲುವೆಗೆ ಜು.19ರಿಂದ 1300 ಕ್ಯೂಸೆಕ್ ನಂತೆ ಹಾಗೂ ಕಾರ್ಖಾನೆಗಳಿಗೆ 60 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು. ಇನ್ನು ರಾಯಬಸವಣ್ಣ ಕಾಲುವೆಗೆ ಈಗಾಗಲೇ ಜೂ.1ರಿಂದ 180 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುತ್ತಿದೆ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಅವರು ಮಾಹಿತಿ ನೀಡಿದ್ದಾರೆ.

ತುಂಗಭದ್ರಾ ಜಲಾಶಯದ ನೀರಿನ ಮಟ್ಟ
ಡ್ಯಾಂ ಸಾಮರ್ಥ್ಯ- 105.788 ಟಿಎಂಸಿ
ಸದ್ಯದ ಸಂಗ್ರಹ – 46.802 ಟಿಎಂಸಿ
ಒಳ ಹರಿವು – 104060 ಕ್ಯೂಸೆಕ್ಸ್
ಹೊರ ಹರಿವು – 300 ಕ್ಯೂಸೆಕ್ಸ್
——-

ಕಳೆದ ವರ್ಷ ಇದೇ ಸಮಯಕ್ಕೆ
ಸಂಗ್ರಹ – 10.947 ಟಿಎಂಸಿ
ಒಳ ಹರಿವು – 11425 ಕ್ಯೂಸೆಕ್ಸ್
ಹೊರ ಹರಿವು – 262 ಕ್ಯೂಸೆಕ್ಸ್

Leave a Reply

Your email address will not be published. Required fields are marked *

error: Content is protected !!