WhatsApp Image 2024-07-25 at 3.56.28 PM

ಸ್ವ-ಉದ್ಯೋಗಕ್ಕೆ ಸೃಜನಾತ್ಮಕ ಕೌಶಲ ಅಗತ್ಯ : ಪ್ರಮೋದ್.ಪಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 25- ಸ್ವ-ಉದ್ಯೋಗ ಕೈಗೊಳ್ಳಲು ಸೃಜನಾತ್ಮಕವಾಗಿ ಹೊಸ ವಿಧದ ಕೌಶಲ್ಯ ತರಬೇತಿ ಹೊಂದಬೇಕು ಎಂದು ಜಿಲ್ಲಾ ಪಂಚಾಯತ್‌ನ ಯೋಜನಾಧಿಕಾರಿ ಪ್ರಮೋದ.ಪಿ ಅವರು ಹೇಳಿದರು.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ೩೦ ದಿನಗಳ ಬ್ಯೂಟಿ ಪಾರ್ಲರ್ ತರಬೇತಿ ಮತ್ತು ೧೦ ದಿನಗಳ ಕುರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತದಲ್ಲಿ ಮಹಿಳೆಯರು ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುವರಿಂದ, ಬ್ಯೂಟಿ ಪಾರ್ಲರ್‌ನಲ್ಲಿ ವಿಧದ ಮೇಕಪ್ ಕೌಶಲ್ಯವನ್ನು ಬೆಳಸಿಕೊಳ್ಳಬೇಕು. ಅದೇರೀತಿಯಾಗಿ ಕುರಿ ಸಾಕಾಣಿಕೆಯು ವ್ಯವಸಾಯದ ಜೊತೆಗೆ ಪೂರಕವಾಗಿದ್ದು, ಕುರಿಗಳಿಗೆ ತುಂಬಾ ಬೇಡಿಕೆ ಇದೆ. ಕುರಿ ಸಾಕಾಣಿಕೆ ತರಬೇತಿಯ ಸದುಪಯೋಗ ಪಡಿಸಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಇಂತಹ ತರಬೇತಿಗಳು ಸಹಕಾರಿಯಾಗಲಿ ಎಂದು ಅವರು ಹಾರೈಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಅಜೀತ್ ನಾಯ್ಕ ಅವರು ಮಾತನಾಡಿ, ಮಹಿಳೆಯರು ಮನೆಯಲ್ಲಿ ಕುಳಿತು ಬ್ಯೂಟಿ ಪಾರ್ಲರ್ ಮಾಡುವದರಿಂದ ಕೌಟುಂಬಿಕ ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಬಹುದು ಎಂದು ತಿಳಿಸಿದರು.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ರಾಜೇಸಾಬ್.ಎಚ್ ಎರಿಮನಿ ಅವರು ಮಾತನಾಡಿ, ಕೌಶಲ್ಯದ ಜೊತೆಗೆ ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಸನದ ಮಾಹಿತಿ ನೀಡಲಾಗುತ್ತಿದ್ದು, ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿಪಂನ ಎನ್‌ಆರ್‌ಎಲ್‌ಎಂ ನ ರಘುವರ್ಮಾ, ತರಬೇತಿ ಕಾರ್ಯಕ್ರಮ ಸಂಯೋಜಕರಾದ ಜಡೆಪ್ಪ, ಸಿದ್ದಲಿಂಗಮ್ಮ, ಸಂತೋಷ ಕುಮಾರ್, ಕಿರಣ ಕುಮಾರ ಸೇರಿದಂತೆ ೬೦ ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!