
ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವಿರಲಿ : ನ್ಯಾ ಹೇಮಲತಾ ಬಿ. ಹುಲ್ಲೂರು
ಕರುನಾಡ ಬೆಳಗು ಸುದ್ದಿ
ವಿಜಯನಗರ, 5- ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವಿದ್ದಲ್ಲಿ ಮುಂಬರುವ ದಿನಗಳಲ್ಲಿ ಅವರು ಉತ್ತಮ ಸಮಾಜ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ ಎಂದು ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಹೇಮಲತಾ ಬಿ. ಹುಲ್ಲೂರ ಅವರು ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹೊಸಪೇಟೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವನಿಕ ಸಂಪರ್ಕ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 5ರಂದು ಹೊಸಪೇಟೆಯ ಶ್ರೀ ಗುರು ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ-2012ರ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಅಧ್ಯಯನ ನಡೆಸಿ ಅರಿವು ಮೂಡಿಸಿಕೊಂಡು ಸಾರ್ವಜನಿಕರಿಗು ಸಹ ಕಾನೂನಿನ ಬಗ್ಗೆ ತಿಳಿ ಹೇಳಬೇಕು. ಗ್ರಾಮೀಣ ಭಾಗದಲ್ಲಿ ಅಕ್ಷರಸ್ಥರು ಕಡಿಮೆ ಇರುವುದರಿಂದ ಬಾಲ್ಯ ವಿವಾಹದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಈ ಕಾಯ್ದೆಯ ಬಗ್ಗೆ ಅರಿತು ಸುತ್ತಲಿನ ಜನರಿಗೆ ಜಾಗೃತಿ ಮೂಡಿಸಬೇಕು. ಹೆಣ್ಣು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೆ ತಂದೆ, ತಾಯಿ, ಪೋಷಕರಿಗೆ ಅಥವಾ ಶಿಕ್ಷಕರಿಗೆ ತಿಳಿಸಬೇಕು. ಬಾಲ್ಯ ವಿವಾಹದ ಬಗ್ಗೆ ಮಕ್ಕಳಿಗೆ ತಿಳಿದು ಬಂದರೆ ಅದನ್ನು ತಿಳಿಸುವ ಕೆಲಸ ಆಗಬೇಕು. ಬೇರೆಯವರಿಂದ ತೊಂದರೆಯಾದರೆ ಕಾನೂನಿನ ಸಹಾಯ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಗುರು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಮಂಜುನಾಥ ಆರ್ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ದಾಖಲಾಗುವರ ಪೈಕಿ ಶೇಕಡ 50ರಷ್ಟು ಹೆಣ್ಣು ಮಕ್ಕಳಿರುವುದು ಖುಷಿಯ ಸಂಗತಿ ಎಂದರು. ಮಕ್ಕಳು ಅಪರಿಚಿತರೊಂದಿಗೆ ಸಲಿಗೆಯಿಂದಿರಬಾರದು. ನಿಮ್ಮೊಂದಿಗೆ ಯಾರಾದರು ಅಸಭ್ಯವಾಗಿ ವರ್ತಿಸಿದರೆ ಮೊದಲು ಪೋಷಕರಿಗೆ ತಿಳಿಸಬೇಕು. ಮಕ್ಕಳು ಕಾನೂನಿನ ಬಗ್ಗೆ ತಿಳಿಯಲು ಇನ್ನಷ್ಟು ಪ್ರಯತ್ನ ಪಡಬೇಕು ಎಂದು ಹೇಳಿದರು.
ನಂತರ ವಕೀಲರ ಸಂಘದ ಅಧ್ಯಕ್ಷರಾದ ಕೆ. ಪ್ರಹ್ಲಾದ್ ಅವರು ಮಾತನಾಡಿ, ಪ್ರತಿಯೊಬ್ಬ ನಾಗರಿಕರಿಗೂ ಕಾನೂನಿನ ಬಗ್ಗೆ ಅರಿವು ಮೂಡಿಸಲು ತಾಲೂಕುವಾರು ಕಾನೂನು ಸೇವಾ ಸಮಿತಿಯನ್ನು ರಚಿಸಿ ಜನರಿಗೆ ಮತ್ತು ಮಕ್ಕಳಿಗೆ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ನ್ಯಾಯಾಂಗವು ಅತ್ಯಂತ ಶ್ರೇಷ್ಠವಾದುದಾಗಿದೆ. ಇದು ಮನುಷ್ಯರ ಜೀವನದಲ್ಲಿ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಪ್ರಶಾಂತ್ ನಾಗಲಾಪುರ್, ಗೌರವಾನ್ವಿತ ಅಪರ ಸಿವಿಲ್ ನ್ಯಾಯಾಧೀಶರಾದ ಅಶೋಕ ಆರ್.ಹೆಚ್., ಗೌರವಾನ್ವಿತ 2ನೇ ಅಪರ ಸಿವಿಲ್ ನ್ಯಾಯಾಧೀಶರಾದ ಸಂಜೀವ್ ಕುಮಾರ ಜಿ., ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪಿ. ಶ್ರೀನಿವಾಸಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ನಾಗರಾಜ್ ಹವಲ್ದಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಅಂಗಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿಗಳಾದ ಸುಭದ್ರಾ ದೇವಿ, ಡಿಸಿಪಿಒನ ಕಾನೂನು ಪರಿವೀಕ್ಷಣಾಧಿಕಾರಿಗಳಾದ ಶ್ರೀಕಾಂತ್, ಸಬ್ ಇನ್ಸ್ಪೆಕ್ಟರ್ ಜಯಲಕ್ಷ್ಮಿ, ನಿವೃತ್ತ ಪ್ರಾಚಾರ್ಯರಾದ ಡಾ.ಕಡ್ಲೆಬಾಳು ಪನ್ನಂಗಧರ ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.