
ಮನದ ಕೊಳೆ ಕಳೆದ ಕ್ಷಣ : ವೀಣಾ ಪಾಟೀಲ್
ಕರುನಾಡ ಬೆಳಗು ಸುದ್ದಿ
ಗಂಗಾಧರನಿಗೆ ಕಳೆದ ಎಂಟು ದಿನಗಳಿಂದ ಆಸ್ಪತ್ರೆ ಮತ್ತು ಮನೆಗೆ ಓಡಾಡಿ ಸಾಕಾಗಿತ್ತು. ಕಾಲು ಜಾರಿ ಬಿದ್ದದ್ದು ಒಂದೇ ನೆಪವಾಗಿ ಪತ್ನಿ ಗಿರಿಜಾ ಅವರಿಗೆ ಕಾಲಿನ ಆಪರೇಷನ್ ಆಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರಿಂದ ಮನೆ, ಕೆಲಸ,ಆಫೀಸು ಕೆಲಸದ ಓಡಾಟಗಳಲ್ಲಿ ಗಂಗಾಧರ್ ಸುಸ್ತಾಗಿ ಹೋಗಿದ್ದರು.
ಇಂದು ಪತ್ನಿ ಗಿರಿಜಾ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆತಂದು ತಮ್ಮ ಕೋಣೆಯ ಹಾಸಿಗೆಯ ಮೇಲೆ ಮಲಗಿಸಿದ ಅವರು ತುಸು ನಿರಾಳ ಭಾವದಿಂದ ಸೋಫಾದ ಮೇಲೆ ಕುಳಿತರು.
ತಮ್ಮ ತಂದೆ ತಾಯಿಗೆ ಒಬ್ಬರೇ ಮಗನಾಗಿದ್ದ ಗಂಗಾಧರ್ ಮದುವೆಯಾಗಿದ್ದ ಗಿರಿಜಾ ಅವರು ಕೂಡ ಅವರ ಪಾಲಕರಿಗೆ ಒಬ್ಬಳೇ ಮಗಳು. ಗಿರಿಜಾ ಅವರಿಗೆ ಕಾಲುಮುರಿದಾಗ ಆಕೆಯ ತಂದೆ ತಾಯಿ ಇದೇ ಮೊದಲ ಬಾರಿಗೆ ತಮ್ಮ ಸ್ನೇಹಿತರೊಡಗೂಡಿ ಉತ್ತರ ಭಾರತ ಪ್ರವಾಸಕ್ಕೆ ಹಿಂದಿನ ದಿನ ತಾನೇ ಹೊರಟಿದ್ದರು.ಅವರಿಗೆ ವಿಷಯ ತಿಳಿಸಿ ಅವರು ಗಾಬರಿಯಿಂದ ಪ್ರವಾಸವನ್ನು ಮೊಟಕುಗೊಳಿಸಿ ಬರುವುದು ಬೇಡ ಎಂದು ಗಿರಿಜಾ ನೋವಿನಲ್ಲಿಯೂ ಬೇಡಿಕೊಂಡಾಗ ಗಂಗಾಧರ್ ಅರೆ ಮನಸ್ಸಿನಿಂದಲೇ ಒಪ್ಪಿದರು. ಇತ್ತ ಗಂಗಾಧರ್ ಅವರ ತಾಯಿ ಕೂಡ ತಮ್ಮ ಹೊಲದಲ್ಲಿ ಬಿತ್ತನೆ ಕಾರ್ಯಗಳು ಆರಂಭವಾಗಿರುವುದರಿಂದ ತನಗೆ ಬರಲಾಗುವುದಿಲ್ಲ ಎಂದೂ, ಬಿತ್ತನೆ ಕೆಲಸ ಮುಗಿದ ಕೂಡಲೇ ಬರುವುದಾಗಿ ಅಲ್ಲಿಯವರೆಗೂ ಸಂಭಾಳಿಸು ಎಂದು ತಮಗೆ ಕರೆ ಮಾಡಿದ ಮಗನಿಗೆ ಹೇಳಿದ್ದರು.
ಸೋಫಾದಲ್ಲಿ ಕುಳಿತ ಗಂಗಾಧರ್ ಮೆಲ್ಲನೆ ತಮ್ಮ ತಲೆಯನ್ನು ಸೋಫಾದ ಹಿಂಬದಿಗೆ ಆನಿಸಿ ಕಣ್ಣು ಮುಚ್ಚಿದರು… ಮನಃಪಟಲದಲ್ಲಿ ಕಳೆದ ದಿನಗಳ ನೆನಪು ಆವರಿಸಿತು.
ಸ್ವಭಾವತಃ ತುಸು ಶಿಸ್ತಿನ ಮನುಷ್ಯನಾದ ಗಂಗಾಧರ ಮನೆಯಲ್ಲಿ ಎಲ್ಲವೂ ವ್ಯವಸ್ಥಿತವಾಗಿರಲಿ ಎಂದು ಬಯಸುವ ವ್ಯಕ್ತಿ. ಆದರೆ ತಾನು ಇತ್ತಲಿದ್ದ ಒಂದು ಕಡ್ಡಿಯನ್ನು ಅತ್ತ ತೆಗೆದು ಇಡುತ್ತಿರಲಿಲ್ಲವಾದರೂ ಮನೆಯ ವಸ್ತುಗಳು ಚೂರು ಏರುಪೇರಾದರೂ ಹೆಂಡತಿ ಮಕ್ಕಳ ಮೇಲೆ ಎಗ್ಗಿಲ್ಲದೆ ರೇಗುವಾತ. ಪತ್ನಿ ಗಿರಿಜಾ ಗಂಡನಿಗೆ ಪ್ರತ್ಯುತ್ತರ ನೀಡದೆ ಎಲ್ಲವನ್ನು ಸಂಭಾಳಿಸಿಕೊಂಡು ಹೋಗುವ ಸಮಾಧಾನಿ.
ಮಕ್ಕಳು ಓದಲೆಂದು ಹೊರ ಊರಿಗೆ ಹೋದ ಮೇಲೆ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ. ಯಾವುದಕ್ಕೂ ವಾದ ಮಾಡದ ಪತ್ನಿ ಗಿರಿಜಾಳನ್ನು ಪದವೀಧರೆಯಾದರೂ ಹಳ್ಳಿ ಗುಗ್ಗು ಎಂಬಂತೆ ಗಂಗಾಧರ ವರ್ತಿಸುತ್ತಿದ್ದ. ಆರಂಕಿ ಸಂಬಳ ಪಡೆಯುತ್ತಿದ್ದ ಸಾಫ್ಟ್ವೇರ್ ಇಂಜಿನಿಯರ್ ಗಂಗಾಧರ್ ಮನೆಯ ಹೊರಗೆಲಸಗಳಾದ ಬಟ್ಟೆ, ಪಾತ್ರೆ, ಕಸ ಒರೆಸಲು ಕೂಡ ಆಳುಗಳನ್ನಿಡದೇ ಎಲ್ಲವೂ ಪತ್ನಿಯೇ ಮಾಡಲಿ ಎಂದು ಆಶಿಸುತ್ತಿದ್ದ. ಇದಕ್ಕೆ ಗಿರಿಜಾರ ಮೌನ ಸಮ್ಮತಿಯೂ ಇತ್ತು.
ಆದರೆ ಈಗ ಬಚ್ಚಲಿನಲ್ಲಿ ಜಾರಿ ಕಾಲು ಮುರಿದುಕೊಂಡ ಗಿರಿಜಾ ಕಳೆದ ಎಂಟು ದಿನಗಳಿಂದ ಆಸ್ಪತ್ರೆಯಲ್ಲಿ ಉಳಿದು ಹೋದಾಗ, ಶಿಸ್ತನ್ನು ಬಯಸುತ್ತಿದ್ದ ಗಂಗಾಧರ್ ಮನೆಯ ಎಲ್ಲ ಕೆಲಸಗಳನ್ನು ಮಾಡಿ ಮುಗಿಸುವಷ್ಟರಲ್ಲಿ ಸುಸ್ತಾಗಿ ಹೋಗುತ್ತಿದ್ದ. ಊಟವೇನೋ ಹತ್ತಿರದ ಮೆಸ್ ನಿಂದ ಬರುತ್ತಿತ್ತು ನಿಜ, ಆದರೆ ಅಷ್ಟೇನೂ ರುಚಿ ಅಲ್ಲದ, ಮನಸ್ಸಿಗೆ ಹಿತವೆನಿಸದ ಸಪ್ಪೆಯಾದ ಆಹಾರ ಗಂಟಲಲ್ಲಿಳಿಯಲು ಮುಷ್ಕರ ಹೂಡುತ್ತಿದ್ದರೂ ವಿಧಿ ಇಲ್ಲದೆ ಸೇವಿಸುತ್ತಿದ್ದ ಗಂಗಾಧರನ ಪಾಡು ಹೇಳತೀರದು.
ಬಚ್ಚಲು ಮನೆ ಲಕ ಲಕ ಹೊಳೆಯಬೇಕು ಎಂದು ಪತ್ನಿಯ ಮೇಲೆ ಹಾರಾಡುತ್ತಿದ್ದ ಗಂಗಾಧರ್ ಕಳೆದ ಎಂಟು ದಿನಗಳಿಂದ ಬಚ್ಚಲು ಮನೆಯನ್ನು ಸ್ವಚ್ಛ ಮಾಡುವ ಗೋಜಿಗೆ ಹೋಗಿರಲಿಲ್ಲ. ಆತ ಒಬ್ಬನೇ ಬಳಸಿದರೂ ಅಲ್ಲಲ್ಲಿ ಕಲೆಗಳಾಗಿ ಸೋಪಿನ ನೊರೆಗಟ್ಟಿದ ಬಚ್ಚಲು, ಹಳದಿಗಟ್ಟಿದ ಕಮೋಡ್ ಆತನನ್ನು ಕೆಣಕುತ್ತಿತ್ತು.ಇದೀಗ ಪತ್ನಿಯ ಅನಾರೋಗ್ಯದಿಂದ ಕೆಲಸಕ್ಕೆ ಆಳನ್ನು ಹುಡುಕಲಾರಂಭಿಸಿದ ಗಂಗಾಧರ್ ಗೆ ಇದುವರೆಗೂ ಆಳು ಸಿಕ್ಕದೆ ಹೋಗಿದ್ದು ಆತನ ಅಸಹನೆ ಮತ್ತಷ್ಟು ಹೆಚ್ಚಿತ್ತು.
ಔಷಧಿಯ ಪ್ರಭಾವಕ್ಕೆ ನಿದ್ದೆ ಹೋಗಿದ್ದಳು ಗಿರಿಜಾ. ಮುಂದಿನ ಕೆಲಸಗಳ ನೆನಪಾಗಿ ಅನಿವಾರ್ಯವಾಗಿ ಮೇಲೆದ್ದ ಗಂಗಾಧರ ಇಡೀ ಮನೆಯ ಕಸ ಗುಡಿಸಿ ನೆಲವನ್ನು ಮಾಪ್ನಿಂದ ಒರೆಸಿದ. ಅಡುಗೆ ಮನೆ ಬಚ್ಚಲಿನಲ್ಲಿದ್ದ ಒಂದೆರಡು ತಟ್ಟೆ, ಬಟ್ಟಲು, ಕಾಫಿಯ ಡಬರಿಗಳನ್ನು ತೊಳೆದು ಕಾಫಿ ಮಾಡಿಕೊಂಡು ಒಂದೆರಡು ಬಿಸ್ಕತ್ತಿನೊಂದಿಗೆ ಬಾಲ್ಕನಿಗೆ ಬಂದು ನಿಧಾನವಾಗಿ ಕಾಫಿಯನ್ನು ಹೀರಿದ ಆತನಿಗೆ ತಾಯಿ ಸದಾ ಹೇಳುತ್ತಿದ್ದ ಮಾತುಗಳು ನೆನಪಾದವು ” ಗಂಗೂ, ಗಿರಿಜಾ ಬಹಳ ಸಮಾಧಾನದ ಹುಡುಗಿ. ನಿನ್ನ ಎಲ್ಲಾ ಮುನಿಸು, ಮೊಂಡಾಟಗಳನ್ನು ಸಹಿಸಿಕೊಂಡು ಇಡೀ ಮನೆಯನ್ನು ತೂಗಿಸಿಕೊಂಡು ಹೋಗುವ ಮಹಾಲಕ್ಷ್ಮಿ. ನೀನಂತೂ ಆಕೆಗೆ ಯಾವ ಸಹಾಯವನ್ನು ಮಾಡುವುದಿಲ್ಲ, ಆಕೆಗೂ ಮೊದಲಿನಂತೆ ಎಲ್ಲ ಕೆಲಸಗಳು ನೀಗುವುದಿಲ್ಲ… ಈಗಲಾದರೂ ಕೆಲಸಕ್ಕೆ ಆಳುಗಳನ್ನು ಹೊಂದಿಸು, ಆಕೆಯೊಂದಿಗೆ ಪ್ರೀತಿಯಿಂದ ನಡೆದುಕೋ, ನಾಲ್ಕು ಜನರೊಂದಿಗೆ ಬೆರೆಯಲು ಬಿಡು, ರಜಾ ದಿನಗಳಲ್ಲಿ ಕರೆದು ಹೊರಗೆ ಕರೆದುಕೊಂಡು ಸುತ್ತಾಡು, ಆಕೆಗೂ ತನ್ನ ವೈಯುಕ್ತಿಕ ಹವ್ಯಾಸಗಳನ್ನು ಮುಂದುವರೆಸಲು ಅನುವು ಮಾಡಿಕೊಡು ಎಂದು ಸೊಸೆಯ ಮೌನದ ಹಿಂದಿನ ಭಾವವನ್ನು ಅರಿತ ಅನುಭವಸ್ಥ ತಾಯಿ ಹೇಳಿದಾಗ ತುಸು ತಾತ್ಸಾರದಿಂದಲೇ ತಲೆಯಾಡಿಸಿದ್ದು ನೆನಪಾಯಿತು.
ಹೌದಲ್ಲವೇ! ಮದುವೆಗೆ ಮುಂಚೆ ತುಂಬಾ ಭಾವಪೂರ್ಣವಾಗಿ ಹಾಡುತ್ತಿದ್ದ, ಸಣ್ಣ ಪುಟ್ಟ ಕಥೆ ಕವನಗಳನ್ನು ಬರೆಯುತ್ತಿದ್ದ ಪತ್ನಿ ಗಿರಿಜಾ ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆ ಪಾಸ್ ಆಗಿದ್ದಳು ಕೂಡ. ಆದರೆ ಮನೆ ಕೆಲಸಗಳ ಒತ್ತಡ, ಮಕ್ಕಳ ಬೆಳೆಸುವಿಕೆ, ತನ್ನ ವಿಪರೀತ ಶಿಸ್ತಿನ ಜೀವನ ಶೈಲಿಗಳ ನಡುವೆ ಬಳಲಿದ ಆಕೆ ಯಾವಾಗ ಮೌನದ ಮೊರೆ ಹೊಕ್ಕಳೋ ತಿಳಿಯದೆ ಹೋಯಿತು, ಮಕ್ಕಳಿದ್ದಾಗ ತುಸು ಗದ್ದಲ ಗಲಾಟೆಯಿಂದ ಕೂಡಿರುತ್ತಿದ್ದ ಮನೆ ಇದೀಗ ತನ್ನ ಬೇಕು ಬೇಡಗಳ ಕೇಳುವಿಕೆಗೆ ಮಾತ್ರ ಸೀಮಿತವಾಗಿದೆ. ಆಫೀಸ್ ನಿಂದ ಬಂದ ಮೇಲೂ ಕೂಡ ತಾನು ಮೊಬೈಲ್ನಲ್ಲಿ ಕಣ್ಣು ಕೀಲಿಸಿ ಕುಳಿತರೆ ಆಕೆಯಾದರೂ ಏನು ಮಾಡಿಯಾಳು? ಮುಚ್ಚಿದ ಕಣ್ಣ ಮುಂದೆ ಒಂದಾದ ಮೇಲೆ ಒಂದರಂತೆ ತಾನು ಮಾಡಿದ ತಪ್ಪುಗಳು ತೆರೆಯ ಮೇಲಿನ ದೃಶ್ಯಗಳಂತೆ ಹಾದುಹೋದವು…. ಕಣ್ಣಂಚಲ್ಲಿ ನೀರ ಹನಿ ಧಾರೆಯಾದರೆ, ಒಂದು ಮಾತು ತಿರುಗಿಯೂ ಹೇಳದೇ ತನ್ನೊಂದಿಗೆ ಇಷ್ಟು ವರ್ಷ ಸಂಸಾರ ಮಾಡಿದ ಹೆಂಡತಿಯ ಕುರಿತು ಅಭಿಮಾನ ಉಕ್ಕಿ ಬಂದಿತು.
ಏನಾದರಾಗಲಿ ಇಂದು ಬಚ್ಚಲು ಸ್ವಚ್ಛ ಮಾಡಿಯೇ ಬಿಡುವೆ ಎಂದು ಮನದಲ್ಲಿ ತೀರ್ಮಾನಿಸಿ ಎದ್ದು ಬಚ್ಚಲಿನತ್ತ ಹೊರಟ ಗಂಗಾಧರ ಕೋಣೆಯಲ್ಲಿ ಇಣುಕಿ ನೋಡಿದರೆ ಮಗ್ಗಲು ಬದಲಿಸಲು ಪರದಾಡುತ್ತಿದ್ದ ಪತ್ನಿಯನ್ನು ನೋಡಿ ನಿಧಾನವಾಗಿ ಆಕೆಯನ್ನು ಮತ್ತೊಂದು ಬದಿಗೆ ಹೊರಳಲು ಸಹಾಯ ಮಾಡಿ ಕುಡಿಯಲು ಏನಾದರೂ ಬೇಕೆ?
ಎಂದು ಕೇಳಿದರು. ನೀರನ್ನು ಕೇಳಿ ಪಡೆದ ಗಿರಿಜಾ ಮತ್ತೆ ನಿದ್ದೆಗೆ ಜಾರಿದರು.
ತೊಟ್ಟ ಬಟ್ಟೆಗಳನ್ನು ವಾಷಿಂಗ್ ಮಷೀನ್ ನಲ್ಲಿ ಹಾಕಿದ ಗಂಗಾಧರ್ ಬಚ್ಚಲಿನಲ್ಲಿರುವ ವಾಶ್ ಬೇಸಿನ್, ಕಮೋಡ್ ಮತ್ತು ಬಚ್ಚಲಿಗೆ ಸೋಪಿನ ಪುಡಿ ಮತ್ತು ಲೋಷನ್ ಹಾಕಿ ಕೈಯಾಡಿಸಿದರು. ಕೆಲ ನಿಮಿಷಗಳು ನೆನೆದ ನಂತರ ಒಂದೊಂದಾಗಿ ಬೇಸಿನ್, ಕಮೋಡ್ ಮತ್ತು ಬಚ್ಚಲುಗಳನ್ನು ಅಲ್ಲಿಯೇ ಇಟ್ಟಿದ್ದ ಬೇರೆ ಬೇರೆ ಬ್ರಷ್ಗಳಿಂದ ತಿಕ್ಕಿ ತಿಕ್ಕಿ ತೊಳೆದರು.
ಇದುವರೆಗೂ ತಾನು ಪತ್ನಿಯೊಂದಿಗೆ ನಡೆದುಕೊಂಡ ರೀತಿ, ಆಕೆಯನ್ನು ಮಾತು ಮಾತಿಗೂ ಹಂಗಿಸುತ್ತಿದ್ದ ಬಗೆ ಮುಂತಾದ ಎಲ್ಲ ವಿಷಯಗಳು ನೆನಪಾಗಿ ಇನ್ನು ಮುಂದೆ ಹಾಗೆ ವರ್ತಿಸದೆ ಪತ್ನಿಯೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವುದಾಗಿ ಮನ ತೀರ್ಮಾನಿಸಿದಾಗ ಇಡೀ ಬಚ್ಚಲನ್ನು ನೀರು ಹಾಕಿ ತೊಳೆದಂತೆ ತಮ್ಮ ಮನದ ಕಲ್ಮಶವನ್ನು ಕೂಡ ಸ್ವಚ್ಛವಾಗಿ ತೊಳೆದು ಚರಂಡಿಯತ್ತ ಹರಿಬಿಟ್ಟರು.
ಸ್ವಚ್ಛ ಶುಭ್ರವಾದ ಬಚ್ಚಲು ಪುರುಷಾಹಂಕಾರದ ಕೊಳೆಯನ್ನು ಕಳೆದುಕೊಂಡ ಗಂಗಾಧರರ ಮನಸ್ಥಿತಿಯನ್ನು ಬಿಂಬಿಸುತ್ತಿತ್ತು.
ಸ್ನಾನ ಮಾಡಿ ಹೊರಬಂದ ಗಂಗಾಧರ್ ಮುಖದಲ್ಲಿನ ಮಂದಹಾಸವನ್ನು ನೋಡಿದ ಪತ್ನಿ ಗಿರಿಜಾ ಬೆರಗಾದರು. ಔಷಧಿಯ ಪ್ರಭಾವದ ಮಬ್ಬನ್ನು ಕಳೆದುಕೊಂಡ ಗಿರಿಜಾ, ಮೇಲ್ ಇಗೋ ಕಳೆದುಕೊಂಡ ಗಂಗಾಧರ ಪರಸ್ಪರ ದಿಟ್ಟಿಸಿ ನೋಡಿದರು.
ಮುಂದಿನ 15 ದಿನಗಳ ಕಾಲ ವರ್ಕ್ ಫ್ರಮ್ ಹೋಂ ತೆಗೆದುಕೊಂಡ ಗಂಗಾಧರ ಗೆ ಮನೆ ಕೆಲಸಕ್ಕೆ,ಅಡುಗೆ ಕೆಲಸಕ್ಕೆ ಕೂಡ ಸಹಾಯಕರು ದೊರೆತರು. ಆದರೂ ಇಷ್ಟು ವರ್ಷಗಳ ಕಾಲ ತಾನು ಮಾಡಿದ ತಪ್ಪಿಗೆ ಪಶ್ಚಾತಾಪದ ರೂಪದಲ್ಲಿ ಪತ್ನಿಯ ಎಲ್ಲಾ ಕೆಲಸ ಕಾರ್ಯಗಳನ್ನು ತಾವೇ ಮಾಡುತ್ತಿದ್ದರು. ನಗುನಗುತ್ತಾ ಮುಂಜಾನೆಯ ಚಹಾ ಮಾಡಿ ಹೆಂಡತಿಗೆ ತಂದುಕೊಡುತ್ತಿದ್ದ ಗಂಗಾಧರ್ ಕೆಲಸದ ನಡುವೆ ಬಿಡುವು ಮಾಡಿಕೊಂಡು ಹೆಂಡತಿಯನ್ನು ಮಾತನಾಡಿಸುತ್ತಾ, ಆಕೆಯ ಬೇಕು ಬೇಡಗಳಿಗೆ ಸ್ಪಂದಿಸುತ್ತಿದ್ದರು. ಗಂಡನ ಬದಲಾದ ಮನಸ್ಥಿತಿಯನ್ನು ನೋಡಿ ಸಮಾಧಾನಗೊಂಡ ಗಿರಿಜಾ ಇದೀಗ ಮೆಲ್ಲನೆ ಮನ ಬಿಚ್ಚಿ ಮಾತನಾಡತೊಡಗಿದಳು.
ಮುಂದಿನ ಬೆಳವಣಿಗೆಯಲ್ಲಿ ಅಪಾರ್ಟ್ಮೆಂಟ್ ನಲ್ಲಿ ನಡೆಯುವ ಹೊಸ ವರ್ಷದ ಕಾರ್ಯಕ್ರಮದಲ್ಲಿ ಭರತನಾಟ್ಯದ ಉಡುಪು ತೊಟ್ಟು ಗಿರಿಜಾ ಪ್ರದರ್ಶನ ನೀಡಿದಾಗ ಪ್ರೇಕ್ಷಕರ ಮಧ್ಯ ಕುಳಿತ ಗಂಗಾಧರ್ ಅವರ ತಾಯಿ ತಂದೆ, ಗಿರಿಜಾ ಅವರ ಅಪ್ಪ ಅಮ್ಮ, ಅವರಿಬ್ಬರ ಪ್ರೀತಿಯ ಮಕ್ಕಳು ಖುಷಿಯಿಂದ ಚಪ್ಪಾಳೆ ತಟ್ಟಿದರೆ ಗಂಗಾಧರ ಮನದುಂಬಿ ಹರ್ಷಿಸಿದರು.
ಇಬ್ಬರ ಮುಂದಿನ ಜೀವನ, ಆಯಿತು ಸುಖದ ಸೋಪಾನ.