
ಜಂತುಹುಳು ನಿವಾರಣಾ ಮಾತ್ರೆಗಳ ಸೇವನೆ ಮಕ್ಕಳಲ್ಲಿ ಆರೋಗ್ಯದ ಬೆಳವಣಿಗೆಗೆ ಸಹಕಾರಿ
ಕುಷ್ಟಗಿ, 10- ಜಂತುಹುಳು ನಿವಾರಣಾ (ಅಲಬೆಂಡೊಜೋಲ್) ಮಾತ್ರೆಗಳ ಸೇವನೆ ಮಕ್ಕಳಲ್ಲಿ ಆರೋಗ್ಯ, ವಿದ್ಯಾಭ್ಯಾಸ ಫಲಿತಾಂಶದಲ್ಲಿ ಏರುಮುಖದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಆರೋಗ್ಯ ಮೇಲ್ವಿಚಾರಕ ರವೀಂದ್ರ ನಂದಿಹಾಳ ಅವರು ಹೇಳಿದರು.
ತಾಲೂಕಿನ ದೋಟಿಹಾಳದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಂತುಹುಳುಗಳು ಮಕ್ಕಳ ಆರೋಗ್ಯವನ್ನು ಬಹಳ ಹಾಳು ಮಾಡುತ್ತವೆ ಅದರಿಂದಾಗಿ ಮಕ್ಕಳು ಓದಿನಲ್ಲಿ ಏಕಾಗ್ರತೆ ರಕ್ತಹೀನತೆ, ನೆನಪಿನ ಶಕ್ತಿ, ಶಾಲೆಯಲ್ಲಿ ಕಲಿಕೆಯ ಸಾಮರ್ಥ್ಯ ಕುಗ್ಗಿಸುತ್ತವೆ, ಮಕ್ಕಳ ದೇಹದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ಆದ ಕಾರಣ ಜಂತುಹುಳು ನಿವಾರಣಾ (ಅಲಬೆಂಡೊಜೋಲ್) ಮಾತ್ರೆಯನ್ನು ಮಕ್ಕಳು ಸೇವಿಸುವುದರಿಂದ ಆರೋಗ್ಯ, ವಿದ್ಯಾಭ್ಯಾಸ ಫಲಿತಾಂಶದಲ್ಲಿ ಏರುಮುಖದ ಬೆಳವಣಿಗೆಯನ್ನು ನೀಡುತ್ತದೆ. 1ರಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ಸರ್ಕಾರಿ ಮತ್ತು ಅನುದಾನಿತ ಎಲ್ಲಾ ಅಂಗನವಾಡಿ, ಶಾಲಾ, ಕಾಲೇಜುಗಳಲ್ಲಿ ಉಚಿತವಾಗಿ ನೀಡಲಾಗುವುದು. ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಸಿದ್ರಾಮಪ್ಪ ಅಮರಾವತಿ, ರಹೀನಾ ಕಂದಕೂರು, ಎಸ್ಡಿಎಮ್ಸಿ ಅಧ್ಯಕ್ಷ ಪರಸಪ್ಪ ಸರೂರು, ಕಾಶೀಮಲಿ ನಡುವಲಮನಿ, ಪ್ರಸನ್ನಕುಮಾರ ಅರಳಿಕಟ್ಟಿ, ಶ್ರೀನಿವಾಸ ಕಂಟ್ಲಿ, ಪೂರ್ಣಿಮಾ ದೇವಾಂಗಮಠ, ದೊಡ್ಡಬಸವ ಪಾಟೀಲ ವಿದ್ಯಾರ್ಥಿಗಳು ಹಾಜರಿದ್ದರು.