
ಗೊಂಬೆಗಳಿಗೆ ಜೀವ ಭರಿಸುವುದೇ ಗೊಂಬೆಯಾಟ : ಸಂತೋಷ್ ಚೌಹಾಣ್
ಕರುನಾಟಡ ಬೆಳಗು ಸುದ್ದಿ
ಬಳ್ಳಾರಿ, 12- ಗೊಂಬೆಗಳಿಗೆ ಜೀವ ತುಂಬಿಸುವ ಕೆಲಸವೇ ಸೂತ್ರದ ಗೊಂಬೆ ಆಟ ಎಂದು ಎಸ್ ಪಿ ಆಫೀಸ್ ನ ಸೈಬರ್ ವಿಭಾಗದ ಡಿವೈಎಸ್ಪಿ ಸಂತೋಷ್ ಚೌಹಾನ್ ಅಭಿಪ್ರಾಯ ಪಟ್ಟರು.
ಡಾ. ಜೋಳದರಾಶಿ ದೊಡ್ಡನ ಗೌಡ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯಲ್ಲಿ ಟಿ ಹೆಚ್ ಎಂ ಸಾಂಸ್ಕೃತಿಕ ಕಲಾ ಟ್ರಸ್ಟ್ ಹಮ್ಮಿಕೊಂಡ `ಸಾಂಸ್ಕೃತಿಕ ಕಲರವ’ ಕಾರ್ಯಕ್ರಮವನ್ನು ಸಮಾಳ ಬಾರಿಸಿ ಉದ್ಘಾಟಿಸಿ ಮಾತನಾಡಿ, ಇದೊಂದು ವಿನೂತನ ಕಲೆ. ಪ್ರತಿಯೊಂದು ಪಾತ್ರಕ್ಕೆ ಮಾತುಗಳನ್ನು ಜೋಡಿಸಿ ಗೊಂಬೆಗಳನ್ನು ಆಡಿಸಿ ಪೌರಾಣಿಕ ಕಥಾ ಪ್ರಸಂಗಗಳನ್ನು ಪ್ರದರ್ಶಿಸುವುದು ಹೆಮ್ಮೆಯ ವಿಷಯ ಎಂದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಎಸ್ ಎನ್ ರುದ್ರೇಶ್ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಕಲಾವಿದರು ಕಳೆದ ಹಲವಾರು ದಶಕಗಳಿಂದ ಗೊಂಬೆಗಳಿಗೆ ಜೀವ ತುಂಬುತ್ತಿರುವುದು ಹೆಮ್ಮೆಯ ವಿಷಯ. ಟಿ ಹೆಚ್ ಎಂ ಕಲಾ ಟ್ರಸ್ಟ್ ನವರು ಇಂಥ ಕಲಾವಿದರನ್ನು ಕರೆಸಿ ಪ್ರೋತ್ಸಾಹಿಸುತ್ತಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.
ಜಿಲ್ಲಾ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಶಿವಾಜಿ ರಾವ್ ಘೋರ್ಪಡೆ, ಅಧ್ಯಕ್ಷತೆ ವಹಿಸಿದ್ದ ಐಜಿಪಿ ಆಫೀಸಿನ ಆಡಳಿತಾಧಿಕಾರಿ ಎಚ್ ಎಮ್ ಪಂಪಾಪತಿ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆ ಕಲೆಯ ತವರೂರು. ಇಲ್ಲಿ ಕಲಾವಿದರು ಕಲಾ ಪೋಷಕರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುತ್ತಿದೆ ಎಂದು ತಿಳಿಸಿದರು.
ನಾಟಕ ಅಕಾಡೆಮಿಯ ಸದಸ್ಯರಾದ ಶಿವನಾಯಕ ದೊರೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಾವಿದರಿಗೆಲ್ಲ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು. ನೂಪುರ ಲಲಿತಕಲಾ ಟ್ರಸ್ಟ್ ಅಧ್ಯಕ್ಷರಾದ ಡಾ. ವೀಣಾ ಮತ್ತು ತಂಡದವರಿAದ ನೃತ್ಯ ಪ್ರದರ್ಶನ ನಡೆದವು. ಪ್ರಕೃತಿ ಕಲಾ ಟ್ರಸ್ಟ್ ಅಧ್ಯಕ್ಷರಾದ ರೇಣುಕಾ ಅಭಿಲಾಷ್ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ನಡೆದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಶ್ರೀ ಮಾರುತಿ ಯಕ್ಷಗಾನ ಸೂತ್ರದ ಗೊಂಬೆ ಮತ್ತು ದೊಡ್ಡಾಟ ಮಂಡಳಿ ಹಲವಾಗಲೂ ಗ್ರಾಮ ಹರಪನಹಳ್ಳಿ ತಾಲೂಕು ಇವರಿಂದ `ಕರ್ಣ ಪರ್ವ’ ಎಂಬ ಪೌರಾಣಿಕ ಕಥಾ ಪ್ರಸಂಗ ಸೂತ್ರದ ಗೊಂಬೆ ಆಟ ನಡೆಯಿತು.
ಭಾಗವತರು ಎ ರಮೇಶ ಆಚಾರ್ ಮೃದಂಗ, ಕೆ ಶಂಭುಲಿಂಗ ಜಾರಿ ಹಾರ್ಮೋನಿಯಂ, ಮಲ್ಲಿಕಾರ್ಜುನ ಶಹನಾಯಿ, ಬಿದ್ದಪ್ಪ ಮೇಳ ಭಗವಂತನ ಗೌಡ್ರು ಸೋಮನಗೌಡ್ರು, ಗೊಂಬೆ ಕುಣಿಸುವವರು ಪುಟ್ಟಪ್ಪ, ಕೊಟ್ರೇಶಿ, ನಾಗರಾಜ, ಬಸವರಾಜ, ಷಣ್ಮುಖ, ಸಂತೋಷ, ಲೋಹಿತಾಚಾರ್ ಮತ್ತು ಸುರೇಶ ಆಚಾರ್ ಕಥಾನಕ ಪ್ರಸಂಗಕ್ಕೆ ಮೆರುಗು ತಂದರು.
ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಟಿ ಹೆಚ್ ಎಂ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷರಾದ ಟಿ ಹೆಚ್ ಎಂ ಬಸವರಾಜ್ ನಿರ್ವಹಿಸಿದರು. ವಂದನಾರ್ಪಣೆಯನ್ನು ಅಭಿನಯ ಕಲಾ ಕೇಂದ್ರದ ಅಧ್ಯಕ್ಷರಾದ ಕೆ ಜಗದೀಶ್ ಮಾಡಿದರು. ಅಮಾತಿ ಬಸವರಾಜ ನಿರೂಪಣೆ ಮಾಡಿದರು. ಬಳಿಕ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.