
ಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ಪೂರ್ಣ ಪ್ರಮಾಣದಲ್ಲಿ ವ್ಯಯಿಸಲು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 19- ರಾಜ್ಯ ಮತ್ತು ಕೇಂದ್ರ ವಲಯ ವಿವಿಧ ಯೋಜನೆಗಳಡಿ ಪ್ರಸಕ್ತ ವರ್ಷಕ್ಕಾಗಿ ಹಂಚಿಕೆಯಾದ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನವನ್ನು ನಿಗದಿತ ಉದ್ದೇಶಕ್ಕಾಗಿಯೇ ಪೂರ್ಣ ಪ್ರಮಾಣದಲ್ಲಿ ವ್ಯಯಿಸಬೇಕು ಎಂದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜುಲೈ-2024ರ ಅಂತ್ಯದವರೆಗಿನ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಾರ್ಯಕ್ರಮಗಳ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಇಲಾಖೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನೊಳಗೊಂಡಂತೆ ಹಲವು ಇಲಾಖೆಗಳು ನಿಗದಿತ ಗುರಿ ಸಾಧನೆ ಮಾಡಬೇಕು. ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಲ್ಯಾಣ ಕಾರ್ಯಕ್ರಮಗಳಿಗೆ ನಿಗದಿಪಡಿಸಿರುವ ಅನುದಾನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಹಂಚಿಕೆ ಯೋಜನೆಗೆ ಸಂಬಂಧಿಸಿದಂತೆ, ವಿವಿಧ ಇಲಾಖಾವಾರು ಯೋಜನೆಗಳ ಕುರಿತು ಹೆಚ್ಚು ಪ್ರಚಾರ ನೀಡಬೇಕು. ಆಯಾ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಫಲಾನುಭವಿಗಳ ಆಯ್ಕೆ ತ್ವರಿತವಾಗಿ ನಡೆಯಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಶೀಘ್ರ ತಲುಪಿಸಲು ಕ್ರಮವಹಿಸಬೇಕು ಎಂದು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಅವರು ಮಾತನಾಡಿ, 2024-25ನೇ ಸಾಲಿನ ಪರಿಶಿಷ್ಟ ಜಾತಿ ಉಪ ಹಂಚಿಕೆ (ಎಸ್ಸಿಎಸ್ಪಿ) ಯೋಜನೆಯಡಿ ಜುಲೈ ಅಂತ್ಯದವರೆಗೆ ವಿವಿಧ ಇಲಾಖೆಗಳಡಿ ಒಟ್ಟಾರೆ ರೂ.7003.99 ಲಕ್ಷ ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ರೂ.5522.28 ಲಕ್ಷ ಖರ್ಚಾಗಿದ್ದು, ಶೇ.79ರಷ್ಟು ಪ್ರಗತಿಯಾಗಿದೆ ಎಂದು ಅವರು ತಿಳಿಸಿದರು.