ಸಿದ್ದರಾಮಯ್ಯ ಹೇಳಿದವರು ಸಿಎಂ
ನಾನೂ ಸಿಎಂ ಆಕಾಂಕ್ಷಿ- ರಾಯರೆಡ್ಡಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 09- ಸಂದರ್ಭ ಬಂದರೆ ಅವಕಾಶ ಸಿಕ್ಕರೆ ನಾನು ಸಿಎಂ ಆಕಾಂಕ್ಷಿ ಹಾಗೂ ಸಿದ್ದರಾಮಯ್ಯ ಹೇಳಿದವರು ಸಿಎಂ ಆಗುತ್ತಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ಸೋಮವಾರದಂದು ಕೊಪ್ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾತನಾಡಿದ ಅವರು, ಸಿಎಂ ಕುರ್ಚಿ ಖಾಲಿ ಎಲ್ಲಿದೆ. ನನ್ನ ಪ್ರಕಾರ ಸಿಎಂ ಸಿದ್ದರಾಮಯ್ಯ ಉಳಿದ ಅವಧಿಗೂ ಮುಂದುವರಿ ಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೈ.ಕ ಭಾಗಕ್ಕೆ ಸಿಎಂ ಸ್ಥಾನ ನೀಡುವುದಾದರೆ ಹಾಗೂ ಲಿಂಗಾಯತ ಸಮುದಾಯಕ್ಕೆ ನೀಡುವುದಾದರೆ ನಾನು ಆಕಾಂಕ್ಷಿಯಾಗಿದ್ದೇನೆ ಎಂದರು.
ಸಹಜವಾಗಿ ರಾಜ್ಯದಲ್ಲಿ ಸಿಎಂ ಆಗಲು ಕೆಲವರು ಆಸೆ ಪಡುತ್ತಿದ್ದಾರೆ. ಆಸೆ ಪಡುವುದರಲ್ಲಿ ತಪ್ಪಿಲ್ಲ. ನನಗೇನು ಸಿದ್ದರಾಮಯ್ಯ ಅವರಿಂದ ಆಗಬೇಕಾಗಿದ್ದೇನಿಲ್ಲ. ಅವರಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎನ್ನುವ ಕಾರಣಕ್ಕಾಗಿ ನಾನು ಸಿಎಂ ಪರ ಮಾತನಾಡುತ್ತಿರುವೆ ಎಂದರು.
ಸಿಎಂ ಸಿದ್ದರಾಮಯ್ಯನವರಿಗೆ ಆಡಳಿತದ ಅನುಭವ ಇದೆ. ಆದ್ದರಿಂದ ಅವರೇ ಸಿಎಂ ಆಗಿ ಮುಂದುವರಿಯಲಿ. ಅವರು ಸಿಎಂ ಕುರ್ಚಿಯಿಂದ ಕೆಳಗೆ ಇಳಿಯುತ್ತಾರೆ ಎಂದು ಯಾರು ಹೇಳಿದ್ದಾರೆ? ಅವರು ಸಿಎಂ ಸ್ಥಾನ ಕ್ಕೆ ರಾಜೀನಾಮೆ ಕೊಡಬಾರದು ಎಂಬುದು ನನ್ನ ಅಭಿಪ್ರಾಯ. ಅವರ ಮೇಲೆ ಯಾವುದೇ ಭ್ರಷ್ಟಾಚಾರ ದ ಆರೋಪವಿಲ್ಲ ಸಿಎಂ ಕುರ್ಚಿ ಖಾಲಿ ಇಲ್ಲ. ಯಾರೂ ಆಸೆ ಪಡುವ ಅವಶ್ಯಕತೆ ಇಲ್ಲ ಎಂದರು.
ಹಿರಿಯರಾದ ದೇಶಪಾಂಡೆ ಅವರು ಸಿಎಂ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಸಹಿತ ಸಿದ್ದರಾಮಯ್ಯ ಸಲಹೆ ನೀಡಿದರೆ ಸಿಎಂ ಆಗುವುದಾಗಿ ಹೇಳುದ್ದಾರೆ. ಅವರ ಹೇಳಿಕೆಯಲ್ಲಿ ತಪ್ಪಿಲ್ಲ. ಇನ್ನು ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್ ಹೇಳಿಕೆಯೂ ತಪ್ಪಿಲ್ಲ. ಯಾರೂ ಬೇಕಾದರೂ ಸಿಎಂ ಆಗಬಹುದು.
ಈಗ ನಾನು ಇದ್ದೇನೆ. ನಾನೇಕೆ ಸಿಎಂ ಆಗಬಾರದು. ನಾನು ಸಹಿತ 1985 ರಿಂದ ಶಾಸಕ ನಾಗಿದ್ದೇನೆ. ಲಿಂಗಾಯತ ಸಮುದಾಯದ ಹಿರಿಯ ನಾಯಕನಾಗಿದ್ದೇನೆ. ಬಿ.ಆರ್. ಪಾಟೀಲ್ ಹೊರತು ಪಡಿಸಿದರೆ ನಾನೇ ಸಮುದಾಯ ಹಿರಿಯ ಶಾಸಕ ನಾಗಿದ್ದೇನೆ. ನಾನು ಅತಿ ಹೆಚ್ಚು ಚುನಾವಣೆಯಲ್ಲಿ ಗೆದ್ದಿದ್ದೇನೆ. ನಾನು ಸಿಎಂ ಆಗಬಾರದು ಎಂದೇನಿಲ್ಲ ಹೈ.ಕ. ಭಾಗದಲ್ಲಿ ಹೆಚ್ಚು ಬಾರಿ ಗೆದ್ದಿರುವ ವ್ಯಕ್ತಿಯಾಗಿದ್ದೇನೆ. ಪಕ್ಷ ಒಂದು ವೇಳೆ ಜಾತಿವಾರು ಪರಿಗಣಿಸಿದರೆ ಅಥವಾ ಹಿರಿತನ ಪರಿಗಣಿಸಿದರೆ ನನ್ನನ್ನು ಸಿಎಂ ಅಭ್ಯರ್ಥಿ ಯಾಗಿ ಪರಿಗಣಿಸಿ ಎಂದು ಮನವಿ ಮಾಡುವೆ ಎಂದು ತಿಳಿಸಿದರು.
ಒಕ್ಕಲಿಗ ರಿಗೆ ಆದ್ಯತೆ ನೀಡಿದರೆ ಡಿ.ಕೆ.ಶಿವಕುಮಾರ್ ಹಾಗೂ ಜಯಚಂದ್ರ ಅವರು ಕೂಡ ಸಿಎಂ ರೇಸ್ ನಲ್ಲಿ ಇದ್ದಾರೆ. ಮುನ್ನಲೆಯ ನಾಯಕರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ನಾಯಕರಾಗಿದ್ದು, ಅವರು ಪ್ರಧಾನಮಂತ್ರಿ ಆಗಲಿ ಎಂಬುದು ನನ್ನ ಅಭಿಲಾಷೆ.
ಸಿದ್ದರಾಮಯ್ಯ ಮುಂದಿನ ಮೂರುವರೆ ವರ್ಷ ಸಿಎಂ ಆಗಿರುತ್ತಾರೆ. ಯಾವುದೇ ಕಾರಣಕ್ಕೂ ಬದಲಾವಣೆ ಆಗಲ್ಲ. ಒಂದು ವೇಳೆ ಪಕ್ಷ ತೀರ್ಮಾನಿಸಿದರೆ ನಾನು ಆಕಾಂಕ್ಷಿ. ನಾನು ಸಿಎಂ ಕುರ್ಚಿಗೆ ಆಸೆ ಪಡುತ್ತಿದ್ದೇನೆ. ಪಕ್ಷ ಹಾಗೂ ವರಿಷ್ಠರು ತೀರ್ಮಾನಿಸಿದರೆ ಜತೆಗೆ ಸಿದ್ದರಾಮಯ್ಯ ಆಶೀರ್ವಾದ ಮಾಡಿದರೆ ಸಿಎಂ ಆಗುವೆ. ಯಾವಾಗ ಯಾವ ಸಂದರ್ಭದಲ್ಲಿ ಹಾಗೂ ಪ್ರಜಾಪ್ರಭುತ್ವ ಯಾರಿಗೆ ಏನ್ ಲಕ್ ಬರುತ್ತದೆ ಎಂಬುದು ಗೊತ್ತಾಗುವುದಿಲ್ಲ ಎಂದರು
