
ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಶುಲ್ಕ ಪಡೆಯುವುದರಲ್ಲಿ ಪಾರದರ್ಶಕತೆ ತೋರಲಿ : ಎಂ.ಎಸ್.ದಿವಾಕರ
ಕರುನಾಡ ಬೆಳಗು ಸುದ್ದಿ
ವಿಜಯನಗರ, 11- ವಿದ್ಯಾರ್ಥಿಗಳ ಪಾಲಕರಿಗೆ ಉತ್ತಮ ಸಂದೇಶ ಹೋಗುವಂತೆ ಶುಲ್ಕ ಪಡೆಯುವುದರಲ್ಲಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಪಾರದರ್ಶಕತೆ ತೋರಬೇಕು ಎಂದು ಡೇರಾ (ಡಿಸ್ಟಿಕ್ಟ್ ಲೇವೆಲ್ ಎಜ್ಯುಕೇಷನ್ ರೆಗ್ಯಲೇಟಿಂಗ್ ಅಥಾರಿಟಿ) ಕಮಿಟಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಹೇಳಿದರು.
ವಿಜಯನಗರ ಜಿಲ್ಲೆಯ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಪಡೆಯುವ ಶುಲ್ಕ ನಿಗಧಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೆಪ್ಟೆಂಬರ್ 11ರಂದು ನಡೆದ ಜಿಲ್ಲೆಯ ಎಲ್ಲ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಆಯಾ ಶಾಲೆಗಳ ಮುಖ್ಯಾಧ್ಯಾಪಕರೊಂದಿಗೆ ಸಭೆ ನಡೆಸಿ ಮಾತನಾಡಿದರು.
ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಪ್ರತಿ ಕ್ಯಾಲೆಂಡರ್ ವರ್ಷದ ಡಿಸೆಂಬರ್ 31ರೊಳಗೆ ಮುಂದಿನ ಕ್ಯಾಲೆಂಡರ್ ವರ್ಷದಿಂದ ಪ್ರಾರಂಭವಾಗುವ ಮುಂಬರುವ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಸಂಗ್ರಹಿಸಬೇಕಾದ ಶುಲ್ಕಗಳ ಸ್ವರೂಪವನ್ನು ಮತ್ತು 31ನೇ ಮಾರ್ಚರಂದು ಅಂತ್ಯಗೊಳ್ಳುವ ಹಿಂದಿನ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನಾ ವರದಿಗಳನ್ನು ಕೂಡಲೇ ಸಲ್ಲಿಸಬೇಕು ಎಂದು 2019ರಲ್ಲಿಯೇ ಅಧಿಸೂಚನೆ ಹೊರಡಿಸಿ ತಿಳಿಸಲಾಗಿರುತ್ತದೆ. ಈ ನಿಯಮ ಪಾಲನೆಯಾಗಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿನ ಎಲ್ಲ ಅನುದಾನ ರಹಿತ ಖಾಸಗಿ ಶಾಲೆಗಳು ಡಿಕ್ಲೇರ್ ಮಾಡಿದ ಶುಲ್ಕದ ಸ್ವರೂಪವನ್ನು ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತದೆ. ಜೊತೆಗೆ ಇನ್ನೀತರ ಕಡೆಗಳಲ್ಲಿ ಸಹ ಪ್ರಚುರಪಡಿಸುತ್ತೇವೆ. ಅದರಂತೆ ಆಯಾ ಶಾಲೆಗಳಲ್ಲಿ ಸಹ ಇಂತಿಷ್ಟು ಶುಲ್ಕ ನಿಗದಿಪಡಿಸಿದ್ದೇವೆ ಎಂಬುದನ್ನು ಎಲ್ಲರಿಗೂ ಕಾಣುವ ಸ್ಥಳದಲ್ಲಿ ಹಾಕಬೇಕು. ಇದನ್ನು ಪಾಲನೆ ಮಾಡದ ಶಾಲೆಗಳಿಗೆ ನೊಟೀಸ್ ನೀಡಲಾಗುವುದು ಎಂದು ತಿಳಿಸಿದರು. ಇದುವರೆಗೆ ಶುಲ್ಕದ ಸ್ವರೂಪವನ್ನು ಘೋಷಿಸದ ಶಾಲೆಗಳ ಸಿಆರ್‌ಸಿ ಚೆಕ್ ಮಾಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
31ನೇ ಮಾರ್ಚರಂದು ಅಂತ್ಯಗೊಳ್ಳುವ ಹಿಂದಿನ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನಾ ವರದಿಗಳನ್ನು ಸಲ್ಲಿಸಬೇಕು ಎನ್ನುವ ವಿಷಯದಲ್ಲಿ ಸಹ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸಿಎ ಅವರಿಂದ ಒಂದಕ್ಕಿಂತ ಹೆಚ್ಚು ಲೆಕ್ಕ ಪರಿಶೋಧನಾ ವರದಿ ನೀಡುವುದು, ನಿಯಮಬಾಹೀರವಾಗಿ ಲೆಕ್ಕ ಪರಿಶೋಧನಾ ವರದಿ ಸಿದ್ಧಪಡಿಸಿ ಸಲ್ಲಿಸುವುದು ಸಹ ಕಂಡು ಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ಪಡೆಯುವುದರ ಬಗ್ಗೆ ಯಾರಿಂದಲೂ ದೂರುಗಳು ಬರಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಈ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಲು ಜಿಲ್ಲೆಯ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಖಾಸಗಿ ಶಾಲೆಗಳಲ್ಲಿನ ಶಿಕ್ಷಣ ವ್ಯವಸ್ಥೆ ಹಾಗೂ ಅಲ್ಲಿನ ಶಿಕ್ಷಕರ ಬಗ್ಗೆ ನಮಗೆ ಗೌರವ ಭಾವನೆ ಇದೆ. ಆ ಗೌರವ ನಿರಂತರವಾಗಿ ಉಳಿಯಬೇಕು ಎಂದು ನಾವು ಶುಲ್ಕದ ಸ್ವರೂಪಕ್ಕೆ ಸಂಬಂಧಿಸಿದಂತೆ ಆಗಾಗ ಸಲಹೆ ನೀಡುತ್ತೇವೆ. ಆದಾಗ್ಯೂ ಸಹ ನಿಯಮ ಪಾಲನೆ ಮಾಡದೇ ಇರುವುದು ಕಂಡುಬಂದಲ್ಲಿ ನಿಯಮಾನುಸಾರ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಿಗದಿಪಡಿಸಿದಕ್ಕಿಂತ ಹೆಚ್ಚಿಗೆ ಶುಲ್ಕ ಪಡೆಯಬಾರದು. ಜಾಸ್ತಿ ಪಡೆದುಕೊಳ್ಳುತ್ತಿರುವುದರ ಬಗ್ಗೆ ಲಿಖಿತ ದೂರುಗಳು ಬಂದಲ್ಲಿ ಕ್ರಮ ಜರುಗಿಸಲು ನಮಗೆ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದರು.
ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಪಡೆಯುವ ಶುಲ್ಕವನ್ನು ಇಲಾಖಾ ವೆಬ್‌ಸೈಟನಲ್ಲಿ ಪ್ರಕಟಿಸುವಂತೆ 2019ರಲ್ಲಿನ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದಾಗ್ಯೂ ಶಿಕ್ಷಣ ಸಂಸ್ಥೆಗಳು ಶುಲ್ಕದ ವಿವರವನ್ನು ಪ್ರಕಟಿಸದೇ ಇರುವುದು ಕಂಡು ಬಂದಲ್ಲಿ ನಿಯಮಾನುಸಾರ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಶಾಲಾ ವಾಹನಗಳು ಸುಸ್ಥಿತಿಯಲ್ಲಿರಲಿ : ಎಲ್ಲ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ನಿಯಮಗಳನ್ನು ಪಾಲನೆ ಮಾಡಬೇಕು. ಜಿಲ್ಲೆಯಲ್ಲಿ ಖಾಸಗಿ ಶಾಲೆಗೆ ಸೇರಿದ
195ಬಸ್ಸುಗಳಿವೆ ಎಂದು ಮಾಹಿತಿ ಇದೆ. ದುರಸ್ತಿಗೆ ಬಂದಿರುವ, ಟೈಯರ್ ಕಿತ್ತು ಹೋದ ಬಸ್‌ಗಳನ್ನು ಬಳಸಬಾರದು. ಲೇಸೆನ್ಸ್ ಇಲ್ಲದವರ ಕೈಗೆ ಶಾಲಾ ವಾಹನ ನೀಡಬಾರದು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿ ಶಾಲಾ ವಾಹನಗಳು ಅಪಘಾತಕ್ಕೀಡಾಗುವುದು ಕಂಡು ಬಂದಲ್ಲಿ ಅಂತಹ ಖಾಸಗಿ ಶಾಲೆಗಳ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಮೂಲಭೂತ ಸೌಕರ್ಯಕ್ಕೆ ಗಮನಕೊಡಿ : ಮಕ್ಕಳಿಗೆ ಆಟೋಟ ಗಳನ್ನು ಆಡಿಸಿ, ಕ್ವಾಲಿಟಿ ಶಿಕ್ಷಣ ಕೊಡಿ, ಜಿಲ್ಲೆಯಲ್ಲಿ ಬಹುತೇಕ ಬಡವರಿದ್ದಾರೆ ಅವರಿಗೆ ಒಳ್ಳೆ ಶಿಕ್ಷಣ ಕೊಡಿ. ವಿಜಯನಗರ ಜಿಲ್ಲೆಯ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಸಂಖ್ಯೆಗಣುಗುಣವಾಗಿ ಶೌಚಾಲಯಗಳ ಮತ್ತು ನೀರಿನ ವ್ಯವಸ್ಥೆ ಇರಬೇಕು. ಶೌಚಕ್ಕೆ ಹೋಗಬೇಕಾಗುತ್ತದೆ ಎಂದು ನೀರು ಕುಡಿಯದೇ ಬಾಲಕಿಯರು ಕಾಯಿಲೆಗಳಿಗೆ ಬೀಳುವ ದುಸ್ಥಿತಿಯಿದೆ. ಉತ್ತಮ ಸ್ಥಿತಿಯ ಶೌಚಾಲಯಗಳಿದ್ದರೆ ಈ ಸ್ಥಿತಿ ಬರದು ಎಂದು ಮನವರಿಕೆ ಮಾಡಿದರು.
ವಿದ್ಯಾರ್ಥಿ-ಪಾಲಕರಿಗೆ ಒತ್ತಡ ಹಾಕಕೂಡದು : ಹೆಚ್ಚಿನ ಮೊತ್ತದಲ್ಲಿ ಶಾಲಾ ಸಮವಸ್ತ್ರ,ಶ್ಯೂ ಮತ್ತು ಇನ್ನೀತರ ವಸ್ತುಗಳನ್ನು ಇಂತಹದ್ದೇ ಅಂಗಡಿಯಲ್ಲಿ ಖರೀದಿಸಬೇಕು ಎಂಬುದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ಅವರ ಪಾಲಕರಿಗೆ ಅನಗತ್ಯ ಒತ್ತಡ ಹಾಕುವುದು ಕಂಡುಬಂದಲ್ಲಿ ಸಹ ಮುಲಾಜಿಲ್ಲದೇ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಜೊತೆ ಇರಲಿದೆ : ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಸಹ ಪ್ರಮುಖವಾಗಿದೆ. ಇದು ಜಿಲ್ಲಾಡಳಿತದ ಗಮನಕ್ಕಿದೆ. ಹಿಂದಿನ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕುಸಿತವಾಗಿದೆ. ಇನ್ಮುಂದೆ ಫಲಿತಾಂಶ ಸುಧಾರಣೆಯಾಗಲೇಬೇಕು. ವಿಜಯನಗರ ಜಿಲ್ಲೆಯಲ್ಲಿ ಕಡು ಬಡವರು, ಹಿಂದುಳಿದ ವರ್ಗದವರ ಸಂಖ್ಯೆ ಹೆಚ್ಚಿದ್ದು, ಈ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಉನ್ನತ ಶಿಕ್ಷಣಕ್ಕೆ ಹೋಗಲು ತಮ್ಮೆಲ್ಲರ ಸಹಕಾರ ಬೇಕು ಎಂದು ಜಿಲ್ಲಾಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮನವಿ ಮಾಡಿದರು. ಶುಲ್ಕ ಸ್ವರೂಪದ ಬಗ್ಗೆ ಚರ್ಚಿಸುವುದಕ್ಕಾಗಿಯೇ ಡೇರಾ ಸಮಿತಿ ಇರುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಏನಾದರು ಕುಂದುಕೊರತೆಗಳಿದ್ದರೆ ಅದನ್ನು ಸಹ ಚರ್ಚಿಸಿ ಸರಿಪಡಿಸಬಹುದಾಗಿದೆ ಎಂದ ಜಿಲ್ಲಾಧಿಕಾರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳಿರುವ ಬಗ್ಗೆ ತಿಳಿಸಿದಲ್ಲಿ ಜಿಲ್ಲಾಡಳಿತ ಜೊತೆಯಿರಲಿದೆ ಎಂದರು.
ಸಭೆಯಲ್ಲಿ ಡಿಡಿಪಿಐ ಹನುಮಕ್ಕ, ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಬೇರೆ ಬೇರೆ ಶಾಲೆಗಳ ಮುಖ್ಯಾಧ್ಯಾಪಕರು ಇದ್ದರು.