
ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ
ಕರುನಾಡ ಬೆಳಗು ಸುದ್ದಿ
ವಿಜಯನಗರ, 2- ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ 2025-26 ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಅಕ್ಟೋಬರ್ 02 ರಿಂದ “ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯತ್,ಹೊಸಪೇಟೆ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀ ಕಾಂತ ಡಿ ಅವರು ತಿಳಿಸಿದ್ದಾರೆ.
ಹೊಸಪೇಟೆ ತಾಲೂಕಿ 14 ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ – ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2025-26ನೇ ಸಾಲಿನ ಕಾರ್ಮಿಕ ಆಯವ್ಯಯದ ತಯಾರಿಸಲು “ಉದ್ಯೋಗ ಖಾತರಿ ನೆಡಿಗೆ – ಸಬಲತೆಯಡೆಗೆ” ಅಭಿಯಾನವನ್ನು ಅ.02 ರಿಂದ ಒಂದು ತಿಂಗಳ ಕಾಲ ಅಭಿಯಾನ ವನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ ಕೆಲಸ ಖಾತರಿ, ಗಂಡು ಹೆಣ್ಣಿಗೆ ಸಮಾನ ಕೂಲಿ ಪ್ರತಿ ದಿನಕ್ಕೆ ರೂ.349 ನೀಡಲಾಗುವುದು. ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರೀಕರಿಗೆ ಮತ್ತು ವಿಶೇಷ ಚೇತನರಿಗೆ ಶೇ.50 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅಕುಶಲ ಮಹಿಳೆಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರುಗಳಿಗೆ ನಿರ್ವಹಿಸುವ ಕೂಲಿ ಕೆಲಸಕ್ಕೆ ಅಥವಾ ಕೂಲಿ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಶೇ.10ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಇದೆ.
ಗ್ರಾಮ ಪಂಚಾಯತಿಯಿಂದ ತೆಗೆದು ಕೊಳ್ಳಬಹುದಾದ ವೈಯಕ್ತಿಕ ಕಾಮಗಾರಿಗಳು :
ದನದ ಕೊಟ್ಟಿಗೆ, ಕುರಿ ಕೊಟ್ಟಿಗೆ, ಕೋಳಿ ಶೆಡ್, ಎರೆಹುಳ ತೊಟ್ಟಿ, ಸೋಕ್ ಪಿಟ್, ಕೃಷಿ ಹೊಂಡ, ಬದು ನಿರ್ಮಾಣ, ವೈಯಕ್ತಿಕ ಕೊಳವೆ ಬಾವಿ ಮರುಪೂರಣ ಘಟಕ, ಅಜೋಲಾ ಘಟಕ,
ಮೀನು ಕೃಷಿ ಕೊಳ. ತೋಟಗಾರಿಕೆ ಇಲಾಖೆಯಿಂದ ತೆಗೆದು ಕೊಳ್ಳಬಹುದಾದ ವೈಯಕ್ತಿಕ ಬಹು ವಾರ್ಷಿಕ ಬೆಳೆಗಳು:
ದಾಳಿಂಬೆ, ತೆಂಗು, ಮಾವು/ಸಪೋಟ, ಸೀಬೆ, ನುಗ್ಗೆ, ಅಂಜೂರ, ಕರಿಬೇವು, ಗುಲಾಬಿ, ಮಲ್ಲಿಗೆ, ಹಿಪುನೇರಳೆ ಹಾಗೂ ವೈಯಕ್ತಿಕ ಪೌಷ್ಟಿಕ ಕೈ ತೋಟಿ. ಈ ಎಲ್ಲಾ ವೈಯಕ್ತಿಕ ಕಾಮಗಾರಿಗಳಿಗೆ ಬೆಂದು ಕುಟುಂಬಕ್ಕೆ ಜೀವಿತಾವಧಿವರೆಗೆ ರೂ.5ಲಕ್ಷ ಮೀರದಂತೆ ಕಾಮಗಾರಿ ಬೇಡಿಕೆಯನ್ನು ನಿಮ್ಮ ಗ್ರಾಮ ಪಂಚಾಯತಿ ಕಚೇರಿಗೆ ಸಲ್ಲಿಸಬಹುದು.
ನಿಮ್ಮ ಗ್ರಾಮಗಳಲ್ಲಿ ನಡೆಯುವ ವಾರ್ಡ್ ಸಭೆ ಮತ್ತು ಗ್ರಾಮಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಯೋಜನೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಪಡೆಯಬಹುದು ಹಾಗೂ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.