
21 ರಿಂದ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ವಿಜಯನಗರ, 19- ಕೇಂದ್ರ ಸರ್ಕಾರದ ೨೦೨೪-೨೫ ನೇ ಸಾಲಿನ “ಕಾಲು ಬಾಯಿ ಜ್ವರ ರೋಗ” ತಡೆಗೆ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ೬ನೇ ಸುತ್ತಿನ ಕಾಲುಬಾಯಿ ಜ್ವರ ರೋಗದ ವಿರುದ್ದ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಗ್ರಾಮ, ಪಟ್ಟಣ ಮತ್ತು ನಗರಗಳಲ್ಲಿ ರೈತರ ಮತ್ತು ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಅಕ್ಟೋಬರ್ ೨೧ ರಿಂದ ನವೆಂಬರ್ ೨೦ ರ ವರೆಗೆ ನಿರಂತರವಾಗಿ ಹಾಕಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಾಗೂ ಅವರ ಅಧ್ಯಕ್ಷತೆಯಲ್ಲಿ ನಡೆದ ೬ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು. ಜಾನುವಾರುಗಳಲ್ಲಿ ಕಾಲು ಬಾಯಿ ಜ್ವರವು ಎಲ್ಲಾ ಸೀಳು ಗೊರಸುಳ್ಳ ಪ್ರಾಣಿಗಳಲ್ಲಿ ವೈರಾಣುವಿನಿಂದ ಬರುವ ಖಾಯಿಲೆಯಾಗಿದ್ದು ಈ ರೋಗವು ಸಾಂಕ್ರಾಮಿಕ ರೋಗವಾಗಿದ್ದು ಗಾಳಿ ಮೂಲಕ ಹರಡುತ್ತದೆ. ಈ ರೋಗದಿಂದ ದನ ಹಾಗೂ ಎಮ್ಮೆಗಳಲ್ಲಿ ಕಾಲು ಮತ್ತು ಬಾಯಿಗಳಲ್ಲಿ ಗಾಯವಾಗಿ ಅಪಾರವಾಗಿ ಬಳಲುವಿಕೆ, ನಿಶ್ಯಕ್ತಿ, ಕಡಿಮೆ ಹಾಲಿನ ಇಳುವರಿ ಮೂಲಕ ರೈತರ ಆರ್ಥಿಕ ಹಾನಿಗೆ ಕಾರಣವಾಗುತ್ತದೆ. ಇದರ ವಿರುದ್ದವಾಗಿ ಈಗಾಗಲೇ ೨೦೨೪ ರ ಏಪ್ರಿಲ್ ನಲ್ಲಿ ೫ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸುಮಾರು ೨,೭೯,೦೦೦ ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ ಹಾಕಲಾಗಿರುತ್ತದೆ.
ಈಗ ೬ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಜಿಲ್ಲೆಯಲ್ಲಿನ ೨,೮೪,೦೦೦ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ನಿಗಧಿಯಾಗಿದ್ದು ಈಗಾಗಲೇ ಸರ್ಕಾರದಿಂದ ಲಸಿಕೆ ಸ್ವೀಕರಿಸಲಾಗಿರುತ್ತದೆ. ಈ ಲಸಿಕಾ ಕಾರ್ಯಕ್ರಮವು ಜಿಲ್ಲೆಯ ಎಲ್ಲಾ ೯೧ ಇಲಾಖಾ ಸಂಸ್ಥೆಗಳಲ್ಲಿ ಏಕ ಕಾಲದಲ್ಲಿ ಪ್ರಾರಂಭವಾಗಲಿದ್ದು ೪೫ ಪಶುವೈದ್ಯಾಧಿಕಾರಿಗಳು ಮತ್ತು ೯ ಗುತ್ತಿಗೆ ಆಧಾರಿತ ಪಶುವೈದ್ಯಾಧಿಕಾರಿಗಳು, ೧೫೯ ಇಲಾಖಾ ಸಿಬ್ಬಂದಿಯೊAದಿಗೆ ೮೩ ಜನ ಹೊರಗುತ್ತಿಗೆ ಹಾಗೂ ಮೈತ್ರಿ ಕಾರ್ಯಕರ್ತರು ಸೇರಿದಂತೆ ಒಟ್ಟು ೨೪೨ ಲಸಿಕೆದಾರರು ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜಿಲ್ಲೆಯ ೬ ತಾಲ್ಲೂಕುಗಳಲ್ಲಿ ಲಸಿಕೆ ಸಂಗ್ರಹಣೆ ಮಾಡಿಕೊಳ್ಳಲಾಗಿದ್ದು ಲಸಿಕೆ ಶೀತಲ ಸರಪಳಿಗೆ ಯಾವುದೇ ತೊಂದರೆ ಇರುವುದಿಲ್ಲ. ಆಯಾ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು (ಅಡಳಿತ) ಇವರು ಸಾರ್ವಜನಿಕರಿಗೆ ಕಾರ್ಯಕ್ರಮದ ಪ್ರಚಾರವನ್ನು ಬ್ಯಾನರ್, ಪೋಸ್ಟರ್‌ಗಳ ಮೂಲಕ ಪ್ರಚಾರ ಜಾರಿಯಲ್ಲಿರುತ್ತದೆ. ಸದರಿ ಲಸಿಕಾ ಕಾರ್ಯಕ್ರಮವು ಇಲಾಖೆ ಮತ್ತು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಬಳ್ಳಾರಿ, ವಿಜಯನಗರ ಇವರ ಸಹಯೋಗದಲ್ಲಿ ನಡೆಯಲಿದ್ದು ರೈತರು ಹಾಗೂ ಸಾರ್ವಜನಿಕರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳುವಲ್ಲಿ ಸಹಕರಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.