
ಅಯೋಡಿನ್ ಕೊರತೆಯ ನ್ಯೂನತೆ ನಿಯಂತ್ರಣ ಸಪ್ತಾಹ ಅರಿವು ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟಿಯ ಅಯೋಡಿನ್ ಕೊರತೆಯ ನ್ಯೂನತೆ ನಿಯಂತ್ರಣ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಅರಿವು ಮೂಡಿಸುವ ಕಾರ್ಯಕ್ರಮವು ಬೇವೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೆಡೆಯಿತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ ಅವರು ಮಾತನಾಡಿ, ಪ್ರತಿ ವರ್ಷ ಅಕ್ಟೋಬರ್೨೧ ರಿಂದ ೨೭ ರವರೆಗೆ ರಾಷ್ಟಿçÃಯ ಅಯೋಡಿನ್ ಕೊರತೆಯ ನ್ಯೂನತೆ ನಿಯಂತ್ರಣ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತದೆ. ಮನುಷ್ಯನಿಗೆ ಬದುಕಲು ಮುಖ್ಯವಾಗಿ ನೀರು, ಗಾಳಿ ಹಾಗೂ ಆಹಾರ ಅತ್ಯಂತ ಅವಶ್ಯಕವಾಗಿ ಬೇಕಾಗುತ್ತದೆ. ಅದರಂತೆ ಪೌಷ್ಠಿಕ ಆಹಾರ ಸೇವಿಸುವುದರ ಜೊತೆಗೆ ಆಯೋಡಿನ್ ಅಂಶವಿರುವ ಉಪ್ಪನ್ನೇ ಬಳಸಬೇಕು.
ಇದು ಮನುಷ್ಯನ ದೈಹಿಕ, ಮಾನಸಿಕ, ಬೆಳವಣಿಗೆ ಅತಿ ಅವಶ್ಯಕವಾಗಿದೆ. ಈ ಅಯೋಡಿನ್ ಅಂಶ ಮುಖ್ಯವಾಗಿ ಗಜ್ಜರಿ, ಮೀನು, ಸಮುದ್ರಕಳೆ, ಸಿಗಡಿಮೀನು ಇವುಗಳಲ್ಲಿ ಹೆಚ್ಚಾಗಿ ದೊರೆಯುತ್ತದೆ. ಪ್ರತಿಯೋಬ್ಬರು ತಮ್ಮ ದಿನನಿತ್ಯದ ಆಹಾರದಲ್ಲಿ ಅಯೋಡಿನ್ ಅಂಶವಿರುವ ಉಪ್ಪನ್ನೇ ಬಳಸಬೇಕು. ಇದು ಮನುಷ್ಯನ ಬುದ್ದಿಮಟ್ಟ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ ಗರ್ಭೀಣಿಯರು, ಹಾಲುಣಿಸುವ ತಾಯೆಂದಿರು, ಮಕ್ಕಳು ಹಾಗೂ ಹದಿ-ಹರೆಯದವರು ಕಡ್ಡಾಯವಾಗಿ ಅಯೋಡಿನ್ ಉಪ್ಪನ್ನೇ ಉಪಯೋಗಿಸಬೇಕು ಎಂದು ಹೇಳಿದರು.
ಅಯೋಡಿನ್ ಅಂಶವಿರುವ ಉಪ್ಪನ್ನು ಬಳಸದಿದ್ದರೆ ಗರ್ಭೀಣಿಯರಲ್ಲಿ ಪದೇ ಪದೇ ಗರ್ಭಪಾತ, ಸತ್ತು ಹುಟ್ಟುವ ಮಕ್ಕಳು, ಸಂತಾನೋತ್ಪಿಯಲ್ಲಿ ತೊಂದರೆ, ದೈಹಿಕ ಬೆಳವಣಿಗೆ ಕುಂಠಿತ, ವಯಸ್ಕರಲ್ಲಿ ನಿಶಕ್ತಿ, ಕಾರ್ಯನಿರ್ವಹಣೆಯಲ್ಲಿ ವೈಪಲ್ಯತೆ, ಗಳಗಂಡರೋಗ ಉಂಟಾಗುತ್ತದೆ. ಮಕ್ಕಳಲ್ಲಿ ಬುದ್ದಿಮ್ಯಾಂದತೆ, ಕಲಿಕೆಯಲ್ಲಿ ಹಿಂದುಳಿವಿಕೆ, ಸರಿಪಡಿಸಲಾಗದ ದೈಹಿಕ ಮತ್ತು ಮಾನಸಿಕ ವಿಕಲತೆ, ಕುಂಟಿತ ಬೆಳವಣಿಗೆ, ಕಿವುಡ ಹಾಗೂ ಮೂಕತನ, ಮೆಳ್ಳೆಗಣ್ಣು, ಕುಬ್ಜತನ ಉಂಟಾಗುತ್ತದೆ. ಆದ್ದರಿಂದ ಎಲ್ಲಾ ಗುಂಪಿನವರು ಕಡ್ಡಾಯವಾಗಿ ಅಯೋಡಿನ್ ಉಪ್ಪನ್ನೇ ಬಳಸಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ. ಪ್ರವೀಣ ಸಮುದಾಯ ಆರೋಗ್ಯಾಧಿಕಾರಿಗಳಾದ ಯಮನೂರಪ್ಪ, ಮಂಜುಳಾ ರಾಠೋಡ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಉಮಾ, ರತ್ನಾ, ಆಶಾ ಸುಗಮಕಾರರಾದ ಲಲಿತಾ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.