9

100 ರಿಂದ 150 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ
ಸಾರ್ವಜನಿಕರ ಆರೋಗ್ಯಕ್ಕೆ ನಮ್ಮ ಆದ್ಯತೆ : ಸಚಿವ ದಿನೇಶ್ ಗುಂಡೂರಾವ್

ಕರುನಾಡ ಬೆಳಗು ಸುದ್ದಿ

ವಿಜಯನಗರ, 22- ಮನುಷ್ಯನ ಜೀವನದಲ್ಲಿ ಆರೋಗ್ಯ ಅತೀ ಮುಖ್ಯ. ಸಾರ್ವಜನಿಕರ ಆರೋಗ್ಯಕ್ಕೆ ನಮ್ಮ ಮೊದಲ ಆದ್ಯತೆಯಾಗಿದ್ದು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯನ್ನು ೧೫೦ ಹಾಸಿಗೆಗೆ ಮೇಲ್ದರ್ಜೆಗೇರಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಆರ್. ಗುಂಡೂರಾವ್ ಹೇಳಿದರು.

ಕೂಡ್ಲಿಗಿಯ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ತಾಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆ ಇದ್ದರೆ, ಸಾರ್ವಜನಿಕರು ಜಿಲ್ಲಾ ಆರೋಗ್ಯ ಕೇಂದ್ರಗಳಿಗೆ ಹೋಗುವ ಅವಶ್ಯಕತೆ ಇರುದಿಲ್ಲ. ಕೂಡ್ಲಿಗಿ ಪಟ್ಟಣದಲ್ಲಿ ಒಂದು ಉತ್ತಮ ಗುಣ ಮಟ್ಡದ ಆಸ್ಪತ್ರೆ ಮಾಡಲು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಜನರಿಗೆ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಪರಿಕರಗಳನ್ನು ಕಲ್ಪಿಸಲಾಗುತ್ತದೆ. ವೈದ್ಯರು ಸೇವೆ ಮಾಡುವ ಬದ್ದತೆ ಇರಬೇಕು. ಬಹುತೇಕ ಚಿಕಿತ್ಸೆಗಳು ತಾಲ್ಲೂಕು ಮತ್ತು ಸಮುದಾಯ ಆಸ್ಪತ್ರೆಯಲ್ಲಿ ಸಿಗಬೇಕಾಗಿದೆ. ಬೇರೆಡೆಯಿಂದ ಬರುವ ವೈದ್ಯರು ಸ್ಥಳೀಯವಾಗಿ ಕೆಲಸ ಮಾಡಲು ಅನುಕೂಲ ಆಗುವ ರೀತಿಯಲ್ಲಿ ಅವರಿಗೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ, ತಾಲೂಕಿನಲ್ಲಿ ಆರೋಗ್ಯ ಕೇಂದ್ರಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗುಡೆಕೋಟೆ ಪಿಹೆಚ್‌ಸಿಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಬೇಡಿಕೆ ಇದ್ದು ಇದಕ್ಕೆ ಅನುದಾನದ ಕೊರತೆ ಇಲ್ಲ, ಸಿಬ್ಬಂದಿಯ ಮಂಜೂರಾತಿಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು ಮಂಜೂರಾತಿ ನೀಡಲಾಗುತ್ತದೆ ಎಂದು ಹೇಳಿದರು.

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಎನ್.ಟಿ.ಶ್ರಿನೀವಾಸ್ ಮಾತನಾಡಿ, ತಾಲೂಕಿನ ಜನರು ಆರೋಗ್ಯದ ವಿಚಾರವಾಗಿ ಯಾವುದೇ ಸೌಲಭ್ಯಗಳಿಂದ ವಂಚಿತರಾಗಬಾರದು. ಪ್ಯಾರಮೆಡಿಕಲ್, ನರ್ಸಿಂಗ್ ವಿದ್ಯಾಭ್ಯಾಸ ಮಾಡಿದ ನಿರುದ್ಯೋಗಿಗಳು ತಾಲೂಕಿನಲ್ಲಿ ಹೆಚ್ಚಿದ್ದು ಅವರಿಗೆ ಉದ್ಯೋಗವಕಾಶ ಕಲ್ಪಿಸಿಕೊಡಲಾಗುವುದು ಹಾಗೂ ತಾಲೂಕು ಮಟ್ಟದಲ್ಲಿಯೇ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ತಾಲ್ಲೂಕಿನ ಸಾರ್ವಜನಿಕರು ಗಂಭೀರ ಪರಿಸ್ಥಿಗಳಗಳಲ್ಲಿ ಮಾತ್ರ ಜಿಲ್ಲಾ ಮಟ್ಟದ ಅಥವಾ ಉನ್ನತ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸುವಂತಾಗಬೇಕು ಎಂದು ಹೇಳಿದರು.

ವಿವಿಧ ಕಾಮಗಾರಿಗಳಿಗೆ ಚಾಲನೆ : ಒಟ್ಟು ೮ ಕೋಟಿ ಅನುದಾನದಲ್ಲಿ ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಸತಿ ಗೃಹಗಳ ದುರಸ್ತಿ ಹಾಗೂ ನವೀಕರಣ ಕಾಮಗಾರಿ, ಹುಡೇಂ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಸತಿ ಗೃಹಗಳ ದುರಸ್ತಿ ಹಾಗೂ ನವೀಕರಣ ಕಾಮಗಾರಿ, ಕೂಡ್ಲಿಗಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ನೂತನ ಡಯಾಲಿಸಿಸ್ (ರಕ್ತ ಶುದ್ದೀಕರಣ) ಯಂತ್ರ, ಅಮ್ಮನಕೇರಿ, ರಾಮದುರ್, ಸುಂಕದಕಲ್ಲು, ಹಾರಕನಾಳು, ಬಯಲು ತುಂಬರ, ಕಾಳಾಪುರ, ಸಿಡೇಗಲ್ಲು, ಜಮ್ಮುಬನಹಳ್ಳಿ(ಕುಮತಿ, ಆರೋಗ್ಯ ಉಪಕೇಂದ್ರಗಳ ದುರಸ್ತಿ ಮತ್ತು ನವೀಕರಣ ಕಾಮಗಾರಿಗಳಿಗೆ ಇದೇ ವೇಳೆ ಸಚಿವರು ಚಾಲನೆ ನೀಡಿದರು.

ಆಸ್ಪತ್ರೆ ಸಿಬ್ಬಂದಿ ಜೊತೆ ಸಭೆ : ಸಚಿವರು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಜೊತೆ ಸಭೆ ನಡೆಸಿ ಅಹವಾಲುಗಳನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಲ್.ಶಂಕರ ನಾಯ್ಕ ಸೇರಿದಂತೆ ವಿವಿಧ ಅಧಿಕಾರಿಗಳು, ವೈದ್ಯರು ಮತ್ತು ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

error: Content is protected !!