
ನವಜಾತ ಶಿಶು ಪತ್ತೆ : ದತ್ತು ಸೇವಾ ಕೇಂದ್ರಕ್ಕೆ ದಾಖಲು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬನಹಟ್ಟಿ ಗ್ರಾಮದ ದೋಟಿಹಾಳ-ಮುದೇನೂರು ರಸ್ತೆಯ ಪಕ್ಕದಲ್ಲಿ ಯಾರೋ ಅಪರಿಚಿತರು ತೊರೆದು ಹೋಗಿದ್ದ ನವಜಾತ ಗಂಡು ಶಿಶುವನ್ನು ರಕ್ಷಿಸಿ, ಮಗುವಿನ ಆರೈಕೆ ಮತ್ತು ಪೋಷಣೆಗಾಗಿ ದತ್ತು ಸೇವಾ ಕೇಂದ್ರಕ್ಕೆ ದಾಖಲಿಸಲಾಗಿದೆ.
ಕುಷ್ಟಗಿ ತಾಲೂಕಿನ ಬನಹಟ್ಟಿ ಗ್ರಾಮದ ದೋಟಿಹಾಳ-ಮುದೇನೂರು ರಸ್ತೆಯ ಪಕ್ಕದಲ್ಲಿ ಅಪರಿಚಿತರು ಯಾರೋ ತೊರೆದು ಹೋಗಿದ್ದ ನವಜಾತ ಗಂಡು ಶಿಶುವನ್ನು ಮಗು ಅಳುತ್ತಿರುವ ಶಬ್ದವನ್ನು ಆಲಿಸಿ ಸಾರ್ವಜನಿಕರು ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಅವರಿಗೆ ಮಾಹಿತಿಯನ್ನು ನೀಡಿದ್ದು, ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಶುಶೂಷಕ ಅಧಿಕಾರಿ ಅನ್ನಪೂರ್ಣ ಅವರು ಮಗುವನ್ನು ರಕ್ಷಿಸಿ ಚಿಕಿತ್ಸೆಗಾಗಿ ಕುಷ್ಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿರುತ್ತಾರೆ.
ನಂತರ ಮಗುವನ್ನು ವಶಕ್ಕೆ ಪಡೆದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಮ್ಮ ಹಂಡಿ, ಕುಷ್ಟಗಿ ತಾಲೂಕು ಆಸ್ಪತ್ರೆ ಮುಖ್ಯ ಆಡಾಳಿತಾಧಿಕಾರಿ ಕೆ.ಎಸ್.ರೆಡ್ಡಿ, ಕುಷ್ಟಗಿ ತಾಲೂಕು ವೈದ್ಯಾಧಿಕಾರಿ ಆನಂದ ಗೋಟುರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೇವರಾಜ ಅವರು ಮಗುವನ್ನು ರಕ್ಷಿಸಿ ಮುಂದಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ (ಅಸಾಂಸ್ಥಿಕ) ರಕ್ಷಣಾಧಿಕಾರಿ ಪ್ರಶಾಂತರೆಡ್ಡಿ ಅವರು ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಪಡಿಸಿದ್ದು, ಸಮಿತಿಯು ಮಗುವನ್ನು ಮುಂದಿನ ಪೋಷಣೆ ಮತ್ತು ರಕ್ಷಣೆಗಾಗಿ ಕೊಪ್ಪಳದ ಅಮೂಲ್ಯ(ಪಿ) ದತ್ತು ಸೇವಾ ಕೇಂದ್ರಕ್ಕೆ ವರ್ಗಾಯಿಸಿದೆ.
ಯಾರೇ ವ್ಯಕ್ತಿ ಅಥವಾ ಮಗುವಿನ ಪೋಷಣೆಯ ಹೊಣೆಯಲ್ಲಿರುವ ಯಾರಾದರದರೂ ಈ ರೀತಿಯಲ್ಲಿ ಮಗುವನ್ನು ತೊರೆದು ಹೋದಲ್ಲಿ ಭಾರತೀಯ ನ್ಯಾಯ ಸಂಹಿತೆ 93ರನ್ವಯ 07 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ ಎಂದು ಈ ಮೂಲಕ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಯಾರೇ ಪಾಲಕರು ಅಥವಾ ಪೋಷಕರು ತಮಗೆ ಬೇಡವಾದ ಮಗುವನ್ನು ಎಲ್ಲೆಂದರಲ್ಲಿ ಬೀಸಾಡಿ, ಮಗುವಿನ ಜೀವಕ್ಕೆ ಎರವಾಗುವ ಮತ್ತು ಶಿಕ್ಷೆಗೆ ಗುರಿಯಾಗುವ ಬದಲಿಗೆ, ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಥವಾ ಹತ್ತಿರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ವಶಕ್ಕೆ ನೀಡಿದಲ್ಲಿ ಮಗುವಿನ ರಕ್ಷಣೆಯನ್ನು ಮಾಡಲಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.