9

40ರ ನಂತರವಾದರೂ ಯೋಗ ಕಡ್ಡಾಯ ಬೇಕು : ಡಾ.ಶಿಲ್ಪಾ ಎಸ್

ಕರುನಾಡ ಬೆಳಗು ಸುದ್ದಿ

ವಿಜಯನಗರ, 25- ಮಹಿಳೆಯರಿಗೆ ಮಾಸಿಕ ಋತುಚಕ್ರ ನಿಲ್ಲುವ ಸಮಯದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ, ಇದರಿಂದ ಪಾರಾಗಬೇಕಿದ್ದರೆ ೪೦ರ ನಂತರ ಯೋಗವನ್ನು ಕಡ್ಡಾಯವಾಗಿ ಮಾಡಬೇಕು ಎಂದು ಟಿಎಂಎಇಎಸ್ ಆಯುರ್ವೇದ ಕಾಲೇಜಿನ ಪ್ರಸೂತಿ, ಸ್ತ್ರೀರೋಗ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಶಿಲ್ಪಾ ಎಸ್.ತೆಗ್ಗಿ ಹೇಳಿದರು.

ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ಇಲ್ಲಿನ ಫ್ರೀಡಂ ಪಾರ್ಕ್ನಲ್ಲಿ ಪತಂಜಲಿ ಯೋಗ ಸಮಿತಿಯು ಟಿಎಂಎಇಎಸ್ ಆಯುರ್ವೇದ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘೪೦ರ ನಂತರ ಮಹಿಳೆಯರ ಯೋಗಕ್ಷೇಮ’ ಎಂಬ ವಿಷಯದ ಮೇಲೆ ಅವರು ಮಾತನಾಡಿದರು.

ಯೋಗಾಸನದಿಂದ ಇಂದ್ರಿಯ ನಿಗ್ರಹ ಸುಲಭವಾಗುತ್ತದೆ, ೪೦ರ ನಂತರ ಇದು ಬಹಳ ಅಗತ್ಯವಾಗುತ್ತದೆ. ಹೀಗಾಗಿ ಮಹಿಳೆಯರು ೪೦ರ ನಂತರ ಯೋಗವನ್ನು ಕಡ್ಡಾಯವಾಗಿ ಮಾಡಬೇಕು. ಮುಟ್ಟು ನಿಲ್ಲುವ ಸಮಯದ ಯಾತನೆಗಳನ್ನು, ಕಷ್ಟಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು’ ಎಂದು ಅವರು ತಿಳಿಸಿದರು.

ಮುಟ್ಟು ನಿಲ್ಲುವ ಸಮಯದಲ್ಲಿ ಹಾರ್ಮೋನ್‌ಗಳು ಏರುಪೇರಾಗುತ್ತವೆ. ಈಸ್ಟ್ರೋಜನ್ ಹಾರ್ಮೋನ್ ಕೊರತೆಯೇ ಬಹುಮಂದಿಗೆ ಕಾಡುವ ಸಮಸ್ಯೆ ಆಗಿರುತ್ತದೆ. ಆಗ ದೇಹದಲ್ಲಿ ಹಲವು ತೊಂದರೆಗಳೂ ಕಾಣಿಸುತ್ತವೆ. ವಾತ ಪ್ರಕೃತಿಯವರಿಗೆ ಈ ವಿಚಾರದಲ್ಲಿ ಹೆಚ್ಚು ತೊಂದರೆ ಉಂಟಾಗುತ್ತದೆ. ಹೀಗಾಗಿ ದೇಹ ಪ್ರಕೃತಿಗೆ ಅನುಗುಣವಾಗಿ ಆಹಾರ ಸೇವನೆಯ ಜತೆಗೆ, ವರ್ಷಕ್ಕೆ ಎರಡು ಬಾರಿ ವೈದ್ಯರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಆಹಾರ, ಜೀವನ ಶೈಲಿ ಸರಿಪಡಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು’ ಎಂದರು.

ಪ್ರಕೃತಿಗೆ ಅನುಗುಣವಾಗಿಯೇ ನಮ್ಮ ಆಹಾರವೂ ಇರಬೇಕು. ಎಲ್ಲಾ ತರಹದ ಬೇಳೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೈಟೋ ಈಸ್ಟ್ರೋಜನ್ ಹಾರ್ಮೋನ್ ಉತ್ಪತ್ತಿ ಮಾಡುವ ಸತ್ವ ಇರುತ್ತದೆ. ಹೀಗಾಗಿ ಬೇಳೆ ಬಳಕೆ ಹಚ್ಚಿಸಬೇಕು. ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿ ಇರುವ ತರಕಾರಿ, ಹಣ್ಣು ಸೇವಿಸಬೇಕು. ಅಮೃತಬಳ್ಳಿ, ನೆಲ್ಲಿಯನ್ನು ನೆಚ್ಚಿಕೊಳ್ಳಬೇಕು. ಆಹಾರ ಸೇವನೆಯಲ್ಲಿ ಸಮಯ ಪಾಲನೆ ಕಡ್ಡಾಯ. ಬೆಳಿಗ್ಗೆಯ ಉಪಾಹಾರವನ್ನು ತಪ್ಪಿಸಿಕೊಳ್ಳಬಾರದು. ಜತೆಗೆ ದಿನ ೭ರಿಂದ ೯ ತಾಸು ನಿದ್ದೆ ಮಾಡಬೇಕು’ ಎಂದು ಡಾ.ಶಿಲ್ಪಾ ಸಲಹೆ ನೀಡಿದರು.

ಒಣಹಣ್ಣುಗಳನ್ನು ನೇರವಾಗಿ ತಿನ್ನದೆ, ನೀರಲ್ಲಿ ನೆನೆಸಿಟ್ಟು ತಿನ್ನಬೇಕು’ ಎಂದ ಅವರು, ಋತುಮಾನಕ್ಕೆ ತಕ್ಕಂತೆ ಬೆಳೆಯುವ ಹಣ್ಣುಗಳನ್ನೇ ನಾವೂ ಸೇವಿಸಬೇಕು, ಫ್ರಿಜ್‌ನಲ್ಲಿಟ್ಟ, ಪ್ಯಾಕ್ ಮಾಡಿದ ಹಣ್ಣುಗಳನ್ನು ಸೇವಿಸಬಾರದು’ ಎಂದರು.
ಆಸ್ಪತ್ರೆಯ ವೈದ್ಯ ಡಾ.ಸಂಪತ್, ಪತಂಜಲಿ ಯುವ ಭಾರತ ರಾಜ್ಯ ಪ್ರಭಾರಿ ಕಿರಣ್ ಕುಮಾರ್, ಹಿರಿಯ ಯೋಗ ಸಾಧಕರಾದ ಮಂಗಳಮ್ಮ, ಅನಂತ ಜೋಷಿ, ಶ್ರೀರಾಮ, ಅಶೋಕ ಚಿತ್ರಗಾರ, ಶಿವಮೂರ್ತಿ, ಚಂದ್ರಿಕಾ ಶ್ರೀರಾಮ ಇತರರು ಇದ್ದರು.

ಆರಂಭದಲ್ಲಿ ಸಾಮೂಹಿಕ ಯೋಗಾಭ್ಯಾಸ ನಡೆಸಿದ ಬಳಿಕ ಮಹಿಳೆಯರ ಆಪ್ತ ಸಮಾಲೋಚನೆಯ ಕಾರಣಕ್ಕೆ ಮಹಿಳೆಯರಿಗೆ ಮಾತ್ರ ಈ ಶಿಬಿರವನ್ನು ನಡೆಸಿಕೊಡಲಾಯಿತು. ಪುರುಷರಿಗೆ ಪ್ರತ್ಯೇಕ ಸ್ಥಳದಲ್ಲಿ ಯೋಗಾಭ್ಯಾಸದ ವ್ಯವಸ್ಥೆ ಕಲ್ಪಿಸಲಾಯಿತು.

Leave a Reply

Your email address will not be published. Required fields are marked *

error: Content is protected !!