veena patil

ಬನ್ನಿ ಹಾಸನಾಂಬ ದೇವಿಯ ದರ್ಶನಕ್ಕೆ : ವೀಣಾ ಪಾಟೀಲ್

ಕರುನಾಡ ಬೆಳಗು ಸುದ್ದಿ

ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ ತೆಗೆಯುವ ಹಾಸನ ಭಾಗದಲ್ಲಿರುವ ಅತಿ ದೊಡ್ಡ ಈ ದೇಗುಲಕ್ಕೆ ಪ್ರತಿ ವರ್ಷ ಲಕ್ಷಾಂತರ ಜನರು ಭೇಟಿ ನೀಡಿ ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಹಾಸನಾಂಬ ದೇವಸ್ಥಾನದ ಕುರಿತು ಪತ್ರಿಕೆಗಳಲ್ಲಿ ಓದಿ, ದೃಶ್ಯಮಾಧ್ಯಮಗಳಲ್ಲಿ ನೋಡಿ, ಕೇಳಿ ತುಸು ಹೆಚ್ಛೇ ಈ ದೇವಾಲಯದ ಬಗ್ಗೆ ಕುತೂಹಲವಿತ್ತು.

ವರ್ಷದ ಕೆಲವೇ ದಿನಗಳಲ್ಲಿ ತೆಗೆಯುವ ಈ ದೇವಾಲಯದಲ್ಲಿ ಕೊನೆಯ ದಿನದ ಸಾಂಪ್ರದಾಯಿಕ ಪೂಜೆಯ ನಂತರ ನೀರು, ಹೂವುಗಳು,ಎರಡು ಚೀಲ ಅಕ್ಕಿ ಮತ್ತು ತುಪ್ಪದ ನಂದಾದೀಪವನ್ನು ಹಚ್ಚಿ ದೇವಾಲಯದ ಗರ್ಭಗುಡಿಯನ್ನು ಮುಚ್ಚುತ್ತಾರೆ. ಮುಂದಿನ 12 ತಿಂಗಳುಗಳ ನಂತರ ಮರುದೀಪಾವಳಿಯ ಸಮಯದಲ್ಲಿ ಸರ್ವರ ಸಮ್ಮುಖದಲ್ಲಿ ದೇವಾಲಯದ ಗರ್ಭಗುಡಿಯ ಬಾಗಿಲನ್ನು ತೆರೆದಾಗ ನಂದಾದೀಪವು ಅಷ್ಟೇ ಪ್ರಕಾಶಮಾನವಾಗಿ ಉರಿಯುತ್ತಿದ್ದು ನಂದಾದೀಪದಲ್ಲಿ ಹಾಕಿದ ತುಪ್ಪದ ಪ್ರಮಾಣ ಕೊಂಚವೂ ಇಳಿಮುಖವಾಗಿರುವುದಿಲ್ಲ ಎಂಬುದು ಒಂದು ವಿಶೇಷವಾದರೆ ದೇವಿಗೆ ನೈವೇದ್ಯವಾಗಿ ಇಟ್ಟ ಅಕ್ಕಿಯು ಅನ್ನದ ರೂಪದಲ್ಲಿ ಪರಿವರ್ತನೆಯಾಗಿದ್ದು ಕೆಡದೆ ಉಳಿದಿರುತ್ತದೆ ಎಂಬುದು ಈ ದೇಗುಲದ ಧಾರ್ಮಿಕ ವಿಶೇಷವಾಗಿದೆ.
.
‘ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆ’ಗೆ ಹೆಸರಾದ ಹಾಸನಂಬ ದೇವಿಯು ತನ್ನ ಭಕ್ತರಿಗೆ ಅಭಯಪ್ರದಳು ಮತ್ತು ತನ್ನ ಭಕ್ತರಿಗೆ ತೊಂದರೆ ನೀಡುವ ದುಷ್ಟರನ್ನು ಶಿಕ್ಷಿಸುತ್ತಾಳೆ ಎಂಬ ಪ್ರತೀತಿ ಇದೆ.

ಪೌರಾಣಿಕ ಹಿನ್ನೆಲೆಯ ಪ್ರಕಾರ ಒಮ್ಮೆ ಸಪ್ತ ಮಾತೃಕೆಯರಾದ ಬ್ರಾಹ್ಮಿ, ವೈಷ್ಣವಿ, ಮಾಹೇಶ್ವರಿ, ವಾರುಣಿ, ಕೌಮಾರಿ, ವಾರಾಹಿ ಮತ್ತು ಇಂದ್ರಾಣಿಯರು ವಿಹಾರಕ್ಕೆಂದು ಈ ಭಾಗಕ್ಕೆ ಬಂದು ಇಲ್ಲಿಯ ಪ್ರಾಕೃತಿಕ ಸೌಂದರ್ಯವನ್ನು ಕಂಡು ಇಲ್ಲಿಯೇ ನೆಲೆಸಲು ನಿರ್ಧರಿಸಿದರು. ಮಹೇಶ್ವರಿ ಕೌಮಾರಿ ಮತ್ತು ವೈಷ್ಣವಿಯರು ಇಲ್ಲಿಯ ಗರ್ಭಗುಡಿಯ ಇರುವೆ ಗುಡ್ಡದಲ್ಲಿ ನೆಲೆಸಿದರೆ, ಬ್ರಾಹ್ಮಿಯು ಕೆಂಚಮ್ಮನ ಹೊಸಕೋಟೆಯಲ್ಲಿ ವಾರಾಹಿ, ಇಂದ್ರಾಣಿ ಮತ್ತು ವಾರುಣಿಯರು ದೇವಿಗೆರೆಯ ಹೊಂಡದ ಮೂರು ಬಾವಿಗಳಲ್ಲಿ ನೆಲೆಸಿದ್ದಾರೆ ಎಂದು ಪ್ರತೀತಿ ಇದೆ. ಮಹೇಶ್ವರಿ, ಕೌಮಾರಿ ಮತ್ತು ವೈಷ್ಣವಿ ದೇವಿಯರ ತ್ರಿಮೂರ್ತಿ ರೂಪವನ್ನು ಅಂಬಾ (ಮಾತಾ) ಎಂದೂ ಸುಂದರವಾದ ನಗುವನ್ನು ಹೊಂದಿದ್ದು ಭಕ್ತರಿಗೆ ಅಭಯ ನೀಡುವ ಸ್ಮಿತವದನವನ್ನು ಕಂಡು ಆಕೆಯನ್ನು ಹಾಸನಾಂಬಾ ದೇವಿ ಎಂದು ಕರೆದಿದ್ದು ಆಕೆ ನೆಲೆಸಿರುವ ಪಟ್ಟಣವನ್ನು ಹಾಸನ ಎಂದು ಕರೆಯಲಾಗಿದೆ.

ಪುರಾತನ ಶಾಸ್ತ್ರಜ್ಞರ ಪ್ರಕಾರ ಹಾಸನವನ್ನು ಆಳಿದ ವಿವಿಧ ರಾಜವಂಶಗಳಲ್ಲಿ ಪ್ರಮುಖವಾಗಿ ಹೊಯ್ಸಳರು 11ನೇ ಶತಮಾನದ ಉತ್ತರ ಭಾಗದಲ್ಲಿ ಈ ದೇವಾಲಯವನ್ನು ಕಟ್ಟಿದ್ದಾರೆ, ಮುಂದೆ ಜೈನ ಧರ್ಮದತ್ತ ಒಲವು ತೋರಿ ಮತಾಂತರಗೊಂಡ ಹೊಯ್ಸಳ ರಾಜ ಬಿಟ್ಟಿದೇವನು ಈ ದೇವಾಲಯವನ್ನು ಕಟ್ಟಿರಬಹುದು ಎಂಬುದನ್ನು ಹಾಸನದ ಸುತ್ತಮುತ್ತಣ ವಿವಿಧ ದೇವಾಲಯಗಳ ವಾಸ್ತುಶಿಲ್ಪಗಳನ್ನು ಗಮನಿಸಿದಾಗ ನಮ್ಮ ಅರಿವಿಗೆ ಬರುತ್ತದೆ.

ದೇವಾಲಯದ ಗರ್ಭಗುಡಿಯಲ್ಲಿ ಇರುವೆ ಗುಡ್ಡವಿದ್ದು ಇಲ್ಲಿಯೇ ದೇವಿ ಹಾಸನಾಂಬೆಯ ರೂಪದಲ್ಲಿ ನೆಲೆಸಿದ್ದಾಳೆ. ಗರ್ಭಗುಡಿಯ ಇನ್ನೊಂದು ಭಾಗದಲ್ಲಿ ಈಶ್ವರ ರೂಪದ ಶಿವನು ಇದ್ದು ಸಿದ್ಧೇಶ್ವರ ಎಂಬ ಹೆಸರಿನಲ್ಲಿ ಪೂಜಿಸಲ್ಪಡುತ್ತಾನೆ. ಸಿದ್ದೇಶ್ವರಸ್ವಾಮಿಯು ಲಿಂಗ ರೂಪದಲ್ಲಿ ಇಲ್ಲ ಎಂಬುದು ಈ ದೇಗುಲದ ವಿಶೇಷಗಳಲ್ಲಿ ಒಂದು.

ಗರ್ಭಗುಡಿಯ ಹೊರ ಆವರಣದಲ್ಲಿ ದುಷ್ಟ ರಕ್ಕಸನಾದ ದಶಕಂಠ ರಾವಣನು 9 ತಲೆಯ ರಾವಣನಾಗಿ ಪ್ರಕಟಗೊಂಡಿದ್ದು ರುದ್ರ ವೀಣೆಯನ್ನು ನುಡಿಸುತ್ತಿರುವ ಚಿತ್ರ ಅಲ್ಲಿದೆ.

ಹೀಗೆ ಹಲವಾರು ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಂಡಿರುವ ಹಾಸನಾಂಬ ದೇವಿಯ ದರ್ಶನಕ್ಕೆ ಜನರು ಮುಗಿಬಿದ್ದು ಬರುವ ಕಾರಣ ಉಂಟಾಗುವ ಜನದಟ್ಟಣೆಯನ್ನು ತಡೆಯಲು ಸರಕಾರದ ಇಲಾಖೆಗಳು ಹಲವಾರು ಕ್ರಮಗಳನ್ನು ಕೈಗೊಂಡರೂ ದೇಗುಲದ ಗರ್ಭಗುಡಿಯ ಬಾಗಿಲು ತೆಗೆದಿರುವ ಆ ಕೆಲ ದಿನಗಳಲ್ಲಿ ವಾಹನಗಳನ್ನು ಮತ್ತು ಭಕ್ತರನ್ನು ನಿಯಂತ್ರಿಸುವುದು ಸವಾಲಿನ ಕೆಲಸವೇ ಸರಿ.

ಬನ್ನಿ….ಮೊನ್ನೆ ಶುಕ್ರವಾರ ದಿನ ಹಾಸನಾಂಬಾ ದೇವಿಯ ಗರ್ಭಗುಡಿಯ ಬಾಗಿಲು ತೆರೆಯುವ ಶುಭ ಗಳಿಗೆಯಾಗಿದ್ದು ಆ ದಿನ ನಿಗದಿತ ಸಮಯದಲ್ಲಿ ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳ ನಂತರ ದೇವಿಯ ಗರ್ಭಗುಡಿಯ ಬಾಗಿಲನ್ನು ತೆರೆದು ದೇವಿಯ ಷೋಡಶೋಪಚಾರ ಪೂಜೆ ಮಾಡಲಾಗಿದೆ. ಎಲ್ಲರೂ ಭಕ್ತಿಯ ಜೊತೆಗೆ ಶಿಸ್ತನ್ನು ಮೇಳವಿಸಿಕೊಂಡು ಹಾಸನಾಂಬಾ ದೇವಿಯನ್ನು ದರ್ಶಿಸಿ ಆಕೆಯ ಕೃಪೆಗೆ ಪಾತ್ರರಾಗೋಣ.

ವೀಣಾ ಹೇಮಂತಗೌಡ ಪಾಟೀಲ್

ಮುಂಡರಗಿ ಗದಗ್

Leave a Reply

Your email address will not be published. Required fields are marked *

error: Content is protected !!