9

ಅನ್ನಪೂರ್ಣ ಮತ್ತು ತುಕಾರಾಮ್ ಸಂಡೂರಿನ ಜೋಡೆತ್ತು
ಸೂರ್ಯ ಪೂರ್ವದಲ್ಲಿ ಹುಟ್ಟುವ ಸತ್ಯದಷ್ಟೇ ಅನ್ನಪೂರ್ಣ ಗೆಲುವು ಸತ್ಯ : ಸಿಎಂ ಸಿದ್ದರಾಮಯ್ಯ

ಕರುನಾಡ ಬೆಳಗು ಸುದ್ದಿ

ಸಂಡೂರು, 7- ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಈ ಬಾರಿ ಅನ್ನಪೂರ್ಣಮ್ಮ ಅವರು ಗೆಲ್ಲುವುದೂ ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಸಂಡೂರು ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರ ಪರವಾಗಿ ಕ್ಷೇತ್ರದ ಬಂಡ್ರಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ನಾವು ನುಡಿದಂತೆ ನಡೆದು, ಜನರ ಕೆಲಸ ಮಾಡಿ, ನಾವು ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇವೆ. ನಿಮ್ಮ ಮತವೇ ನನಗೆ ಕೊಡುವ ಕೂಲಿ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿಬಿಡಲಿ ಎಂದು ಬಿಜೆಪಿಯವರು ಕಾಯ್ತಾ ಇದ್ದಾರೆ. ನಮ್ಮ ಸರ್ಕಾರ ಇರುವವರೆಗೂ ಯಾವ ಗ್ಯಾರಂಟಿ ಯೋಜನೆಗಳನ್ನೂ ನಿಲ್ಲಿಸಲ್ಲ. ಇದಕ್ಕೆ ನಾನೇ ಗ್ಯಾರಂಟಿ ಎಂದರು.

ಸ0ಡೂರು ಉಪಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಬಗ್ಗೆ ಸಮೀಕ್ಷೆ ನಡೆಸಿದಾಗ ಅತಿ ಹೆಚ್ಚಿನ ಬೆಂಬಲ ಸಂಡೂರಿನ ಜನರಿಂದ ವ್ಯಕ್ತವಾಗಿದ್ದು ಅನ್ನಪೂರ್ಣ ಅವರ ಪರವಾಗಿ. ಆದ್ದರಿಂದ ಅವರನ್ನೇ ಅಭ್ಯರ್ಥಿ ಮಾಡಿದೆವು. ಹೀಗಾಗಿ ಇವರ ಗೆಲುವು ಖಚಿತ. ಆದರೆ, ತುಕಾರಾಮ್ ೩೫ ಸಾವಿರ ಅಂತರದಿ0ದ ಗೆದ್ದಿದ್ರು, ಈ ಬಾರಿ ಅನ್ನಪೂರ್ಣ ಅವರು ೫೦ ಸಾವಿರ ಮತಗಳ ಅಂತರದಿAದ ಗೆಲ್ಲಬೇಕು. ಇದಕ್ಕಾಗಿ ನಾವೆಲ್ಲ ಕೈ ಜೋಡಿಸೋಣ ಎಂದರು.

ಲೋಕಸಭಾ ಚುನಾವಣೆಯಲ್ಲೂ ಹೀಗೇ ಆಗಿತ್ತು. ಈ.ತುಕಾರಾಮ್ ಅವರು ಲೋಕಸಭೆಗೆ ಸ್ಪರ್ಧಿಸಲು ಸಿದ್ಧರಿರಲಿಲ್ಲ. ಆದರೆ, ನಾವು ನಡೆಸಿದ ಸಮೀಕ್ಷೆಯಲ್ಲಿ ತುಕಾರಾಮ್ ಅವರು ಸ್ಪರ್ಧಿಸಿದರೆ ಮಾತ್ರ ಗೆಲುವು ಖಚಿತ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಹೀಗಾಗಿ ನಾವು ಬಲವಂತವಾಗಿ ಒಪ್ಪಿಸಿ ಈ.ತುಕಾರಾಮ್ ಅವರನ್ನು ಕಣಕ್ಕೆ ಇಳಿಸಿದೆವು. ಅವರು ಗೆದ್ದು ಬಂದರು ಎಂದರು.

ಈಗ ಅನ್ನಪೂರ್ಣ ಮತ್ತು ತುಕಾರಾಮ್ ಅವರು ಜೋಡೆತ್ತಾಗಿ ಸಂಡೂರಿನ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸುತ್ತಾರೆ. ಅನ್ನಪೂರ್ಣಮ್ಮ ಗೆದ್ದರೆ ನಾನೇ ಗೆದ್ದಂತೆ. ನೀವು ಅನ್ನಪೂರ್ಣಮ್ಮ ಅವರಿಗೆ ಕೊಡುವ ಮತ ನನಗೇ ಕೊಟ್ಟಂತೆ ಎಂದರು.

ಸ0ತೋಷ್ ಲಾಡ್ ಅವರಿಗೆ ಅನ್ನಪೂರ್ಣ ಅವರನ್ನು ಗೆಲ್ಲಿಸಿಕೊಂಡೇ ಬರಬೇಕು ಎನ್ನುವ ಮಾತು ಹೇಳಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಅನ್ನಪೂರ್ಣಮ್ಮ ಅವರು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು.

“ನಾ ಖಾವೂಂಗಾ – ನಾ ಖಾನೆ ದೂಂಗಾ” ಎನ್ನುವ ಮೋದಿಯವರೇ ಜನಾರ್ಧನ ರೆಡ್ಡಿಯವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದು ಏಕೆ? ಇಡೀ ಜಿಲ್ಲೆಯ ಗಣಿಯನ್ನು ಲೂಟಿ ಮಾಡಿದ್ದ ರೆಡ್ಡಿ ನನಗೆ ಸವಾಲು ಹಾಕಿದ್ದರು. ನಾನು ಸವಾಲು ಸ್ವೀಕರಿಸಿ ಪಾದಯಾತ್ರೆ ನಡೆಸಿದ ಮೇಲೆ ರೆಡ್ಡಿ ಅವನತಿ ಶುರುವಾಯಿತು. ಈಗ ಬಿಜೆಪಿ ರೆಡ್ಡಿಯವರಿಗೆ ಸಂಡೂರಿನ ಜವಾಬ್ದಾರಿ ನೀಡಿದೆ. ಇಂಥಾ ರೆಡ್ಡಿಯ ಅಭ್ಯರ್ಥಿಗೆ ಮತ ಹಾಕ್ತೀರಾ? ಎಂದು ಪ್ರಶ್ನಿಸಿದರು.

ನಾವು ಜಾರಿ ಮಾಡಿದ ಭಾಗ್ಯಗಳು, ಗ್ಯಾರಂಟಿ ಯೋಜನೆಗಳ ಹಣ ನಿಮ್ಮದೇ. ನೀವೇ ಕಟ್ಟಿದ ತೆರಿಗೆ ಹಣ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ದುರ್ಬಲ ವರ್ಗಗಳಿಗೆ ಶಕ್ತಿ ನೀಡಲು ನಾವು ಈ ಯೋಜನೆಗಳನ್ನು ಜಾರಿ ಮಾಡಿದೆವು ಎಂದರು.

ಜನಾರ್ಧನ ರೆಡ್ಡಿ ಬಳ್ಳಾರಿಗೆ ಕಾಲಿಡದಂತೆ ನ್ಯಾಯಾಲಯ ನಿರ್ಬಂಧ ಹೇರಿತ್ತು. ಆದ್ರೆ ಯಾಕೋ ಈಗ ಅನುಮತಿ ಕೊಟ್ಟಿದ್ದಾರೆ. ಚುನಾವಣೆಯಲ್ಲಿ ದಯವಿಟ್ಟು ಅವರ ಮಾತು ಕೇಳಬೇಡಿ. ರೆಡ್ಡಿ, ಶ್ರೀರಾಮಾಲು ಸೇರಿ ಬಳ್ಳಾರಿ ಜಿಲ್ಲೆ ಹಾಳು ಮಾಡುತ್ತಾರೆ ಎಂದರು.

ಈ ವೇಳೆ ಸಂಸದ ಈ ತುಕಾರಾಮ್, ಸಚಿವರಾದ ಕೆ. ಎನ್ ರಾಜಣ್ಣ, ಸಂತೋಷ್ ಲಾಡ್ ರವರು, ಮಾಜಿ ಸಚಿವರಾದ ನಾಗೇಂದ್ರ ಹಾಗೂ ಪಿ.ಟಿ ಪರಮೇಶ್ವರ್ ನಾಯ್ಕರವರು, ಸೇರಿದಂತೆ ರಾಜ್ಯದ ನಾನಾ ಭಾಗದ ಶಾಸಕರು, ಕಾಂಗ್ರೆಸ್ ನಾಯಕರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!