1

ವಿಮ್ಸ್ ಆಸ್ಪತ್ರೆಗೆ ಶಾಸಕ ನಾರಾ ಭರತ್ ರೆಡ್ಡಿ ಭೇಟಿ ವೈದ್ಯರು : ಸಿಬ್ಬಂದಿಗಳ ಅಮಾನತಿಗೆ ಸೂಚನೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 15- ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಆಸ್ಪತ್ರೆಯ ಚೀಫ್ ಫಾರ್ಮಾಸಿಸ್ಟ್ ಕೊಟ್ರೇಶ್ ಸೇರಿದಂತೆ ಕರ್ತವ್ಯ ಲೋಪ ಎಸಗಿದ ಹಲವು ವೈದ್ಯರು ಹಾಗೂ ಸಿಬ್ಬಂದಿಗಳ ಅಮಾನತು ಮಾಡುವಂತೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಬಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಅವರಿಗೆ ಸೂಚನೆ ನೀಡಿದರು.

ಶುಕ್ರವಾರ ಬೆಳಿಗ್ಗೆ ಬಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ನಾರಾ ಭರತ್ ರೆಡ್ಡಿ, ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗಕ್ಕೆ ಭೇಟಿ ನೀಡಿ ಬಹಳಷ್ಟು ಜನ ಒಳರೋಗಿಗಳನ್ನು, ಬಾಣಂತಿಯರನ್ನು ವಿಚಾರಿಸಿ, ಖುದ್ದು ಅವ್ಯವಸ್ಥೆಯನ್ನು ಕಂಡು ಕ್ರಮಕ್ಕೆ ಸೂಚನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಭರ್ತಿಯಾಗಿ ವಿವಿಧ ಖಾಯಿಲೆಗಳಿಗೆ ತುತ್ತಾಗಿ, ತದ ನಂತರ ಬಿಮ್ಸ್ ಅಸ್ಪತ್ರೆಗೆ ದಾಖಲಾಗಿದ್ದ ಐವರು ಬಾಣಂತಿಯರ ಪೈಕಿ ಮೂವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ, ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಸರ್ಜನ್ ಅವರಿಗೆ ಸೂಚನೆ ನೀಡಿರುವೆ, ವರದಿ ಬಂದ ನಂತರ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ನಾನು ಈ ಹಿಂದೆಯೇ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರ ಗಮನಕ್ಕೆ ತಂದಿದ್ದೆ, ಆದಾಗ್ಯೂ ಇಲ್ಲಿನ ಅವ್ಯವಸ್ಥೆ ಬದಲಾಗಿಲ್ಲ ಎಂದು ಶಾಸಕ ನಾರಾ ಭರತ್ ರೆಡ್ಡಿಯವರು ತಿಳಿಸಿದರು.

ಔಷಧಿಗಳು ಲಭ್ಯ ಇದ್ದರೂ ಹೊರಗಡೆಯಿಂದ ತರಲು ಚೀಟಿ ಬರೆಯುತ್ತಿದ್ದಾರೆ, ಮಾತ್ರವಲ್ಲ ರಕ್ತ ಪರೀಕ್ಷೆಯನ್ನು ಕೂಡ ನಿರ್ದಿಷ್ಟ ಖಾಸಗಿ ಲ್ಯಾಬ್’ಗೆ ಬರೆದು ಕಳಿಸಲಾಗುತ್ತಿದ್ದು, ಈ ಬಗ್ಗೆ ತನಿಖೆ ಮಾಡಿಸಲಾಗುವುದು ಎಂದು ತಿಳಿಸಿದರು.

ಭೇಟಿ ವೇಳೆ ವೇಳೆ ರೋಗಿಗಳು ಬಿಮ್ಸ್ ಅವ್ಯವಸ್ಥೆ ಕುರಿತು ಶಾಸಕ ನಾರಾ ಭರತ್ ರೆಡ್ಡಿಯವರಿಗೆ ವಿವರವಾಗಿ ತಿಳಿಸಿದರು. ಬಿಮ್ಸ್ ವೈದ್ಯರು ಮಾತ್ರೆಗಳನ್ನು ಪೂರೈಸದೇ ಹೊರಗಡೆಯಿಂದ ತರುವಂತೆ ಚೀಟಿ ಬರೆಯುತ್ತಿರುವ ಬಗ್ಗೆ ಬಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ, ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥ ಡಾ.ವೀರೇಂದ್ರಕುಮಾರ್, ಡಾ.ವಿಜಯಲಕ್ಷ್ಮೀ, ಚೀಫ್ ಫಾರ್ಮಾಸಿಸ್ಟ್ ಕೊಟ್ರೇಶ್ ಅವರನ್ನು ಶಾಸಕ ನಾರಾ ಭರತ್ ರೆಡ್ಡಿಯವರು ತರಾಟೆಗೆ ತೆಗೆದುಕೊಂಡರಲ್ಲದೇ, ಕೊಟ್ರೇಶ್ ಅವರನ್ನು ತಕ್ಷಣ ಅಮಾನತು ಮಾಡುವಂತೆ ಸೂಚಿಸಿದರು.

ಪ್ರಸವ ಪೂರ್ವ ವಿಭಾಗ, ಪ್ರಸವ ನಂತರದ ಬಾಣಂತಿಗಳ ವಿಭಾಗಕ್ಕೆ ಭೇಟಿ ನೀಡಿ ಬಾಣಂತಿಯರ ಕ್ಷೇಮ ವಿಚಾರಿಸಿದರು. ಬಾಣಂತಿಯರ ವಾರ್ಡಿನ ಸ್ನಾನಗೃಹ ಶೌಚಾಲಯಗಳ ನೈರ್ಮಲ್ಯ ಶುಚಿತ್ವವನ್ನು ಪರಿಶೀಲನೆ ನಡೆಸಿದರು.

ಇದೇ ಸಂದರ್ಭ ಬಿಮ್ಸ್ ಅಸ್ಪತ್ರೆಯ ಹೊರ ಗುತ್ತಿಗೆ ಕಾರ್ಮಿಕರ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ, ಕಾರ್ಮಿಕರಿಂದ ಸರಿಯಾಗಿ ಕೆಲಸ ಮಾಡಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಡೆಂಗ್ಯೂ ಪೀಡಿತ ಗರ್ಭಿಣಿಯ ಸಂಬ0ಧಿಗಳು ವೈದ್ಯರ ವಿರುದ್ಧ ದೂರು ಹೇಳಿದರು.

ಬಿಳಿ ರಕ್ತ ಕಣಗಳನ್ನು ಖಾಸಗಿ ರಕ್ತ ಭಂಡಾರದಿ0ದ ತರಿಸಲಾಗಿದ್ದು, ಅಪಾರ ಪ್ರಮಾಣದ ದುಡ್ಡು ಖರ್ಚಾಗಿದೆ ಎಂದು ತಿಳಿಸಿದರು.

ಔಷಧಗಳ ಉಪ ಉಗ್ರಾಣಕ್ಕೆ ಭೇಟಿ ನೀಡಿ ಔಷಧಗಳ ಆವಕ ಜಾವಕ ಪರಿಶೀಲಿಸಿದರು.

ಈ ವೇಳೆ ಸಮರ್ಪಕ ಉತ್ತರ ನೀಡದ ಚೀಫ್ ಫಾರ್ಮಾಸಿಸ್ಟ್ ಕೊಟ್ರೇಶ್ ಹಾಗೂ ಪ್ರಸೂತಿ ವಿಭಾಗದ ಹಲವು ವೈದ್ಯರು-ಸಿಬ್ಬಂದಿಗಳನ್ನು ಅಮಾನತು ಮಾಡುವಂತೆ ಶಾಸಕ ನಾರಾ ಭರತ್ ರೆಡ್ಡಿ ಸೂಚಿಸಿದರು.

ಖಡಾಖಂಡಿತವಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ಈ ಬಗ್ಗೆ ಸಮಗ್ರವಾಗಿ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!