
ಕಾರ್ಪೊರೇಟ್ ಪರ, ರೈತ ವಿರೋಧಿ ಕೃಷಿ ನೀತಿಗಳನ್ನು ಕೈ ಬಿಡಲು ಒತ್ತಾಯಿಸಿ ಮನವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 19- ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ದೇಶಾದ್ಯಂತ ನಡೆಯುತ್ತಿರುವ ರೈತರ ಹೋರಾಟದ ಕುರಿತು ಪ್ರತಿಭಟಿಸಿ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಸಂದರ್ಭದಲ್ಲಿ AIKKMS ನ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ರಾಜ್ಯದ ಎಲ್ಲಾ ಬಗರು ಹುಕುಂ ಸಾಗುವಳಿ ದಾರರಿಗೆ ಕೂಡಲೇ ಹಕ್ಕು ಪತ್ರಗಳನ್ನು ನೀಡಲು ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳಿ, ರೈತರ ಮೇಲೆ ಅನವಶ್ಯಕ ಕೇಸ್‌ಗಳನ್ನು ಹಿಂಪಡೆಯಿರಿ, ಬಳ್ಳಾರಿ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಗೆ ನಷ್ಟವಾದ ಬೆಳೆಗೆ ಪರಿಹಾರ ನೀಡಿ, ಭತ್ತಕ್ಕೆ ೩೫೦೦ ರೂ., ಮೆಣಸಿನಕಾಯಿ ಬೆಳೆಗೆ ೨೫,೦೦೦ ರೂ. ಸೇರಿದಂತೆ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ, ಭತ್ತ ಖರೀದಿಯನ್ನು ಜನವರಿಗೆ ಎಂಬ ನಿರ್ಧಾರವನ್ನು ಕೈ ಬಿಟ್ಟು ಇದೇ ತಿಂಗಳು ೨೫ ರಿಂದ ಖರೀದಿಸಲು ಪ್ರಾರಂಭಿಸಿ, ಬೆಳೆ ಖರೀದಿಸಲು ಇರುವ ಮಿತಿಯನ್ನು ತೆಗೆದು ಹಾಕಿ ಸಂಪೂರ್ಣ ಬೆಳೆ ಖರೀದಿಸಿ, ಖರೀದಿ ಹಣವನ್ನು ಕೂಡಲೇ ಪಾವತಿಸಿ, ಅವಶ್ಯಕತೆ ವಸ್ತುಗಳ ಸಂಪೂರ್ಣ ಸರ್ಕಾರಿ ವ್ಯಾಪಾರವನ್ನು ಜಾರಿಗೊಳಿಸಿ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ಧಗೊಳಿಸಿ ಎಂದು ಅಗ್ರಹಿಸಿದರು.
ಇದೇ ಸಂದರ್ಭದಲ್ಲಿ AIKKMS ನ ಜಿಲ್ಲಾ ಕಾರ್ಯದರ್ಶಿ, ಗುರಳ್ಳಿ ರಾಜ, ಕೃಷಿ ಕಾರ್ಮಿಕರಿಗೆ ವರ್ಷಪೂರ್ತಿ ಉದ್ಯೋಗ ಮತ್ತು ಸಮರ್ಪಕ ವೇತನಗಳನ್ನು ಕೊಡಬೇಕು, ವಿದ್ಯುತ್ ಕಾಯ್ದೆ ೨೦೨೩ ರನ್ನು ವಾಪಸ್ ತೆಗೆದುಕೊಳ್ಳಬೇಕು ಮತ್ತು ರೈತರ ಪಂಪ್ಸೆಟ್ಟುಗಳಿಗೆ ಸ್ಮಾರ್ಟ್ ಮೀಟರ್ ಹಾಕುವುದು ನಿಲ್ಲಿಸಿ, ಕೂಡಲೇ ರೈತರ ಕೃಷಿ ಸಾಲಗಳನ್ನು ಮನ್ನಾ ಮಾಡಿ, ೬೦ ವರ್ಷಗಳನ್ನು ದಾಟಿದ ರೈತರಿಗೆ ಮಾಸಿಕ ೧೦,೦೦೦ ಪಿಂಚಣಿಯನ್ನು ಕೊಟ್ಟು, ಬಳ್ಳಾರಿಯಲಿ ಮೆಣಸಿನಕಾಯಿ ಮಾರುಕಟ್ಟೆಯನ್ನು ಸ್ಥಾಪಿಸಿ ಸರ್ಕಾರವೇ ಬೆಳೆಯನ್ನು ಖರೀದಿಸಬೇಕೆಂದು ಒತ್ತಾಯಿಸಿ ಕಾರ್ಪೊರೇಟರ್ ಪರ ರೈತ ವಿರೋಧಿ ಕೃಷಿ ನೀತಿಗಳನ್ನು ಕೈಬಿಡಲು ಮತ್ತೊಮ್ಮೆ ನುಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ವಿದ್ಯಾವತಿ, ರೈತರದ ಎತ್ತಿನ ಬೂದಿಹಾಳ ಗ್ರಾಮದ ಹನುಮಂತಪ್ಪ, ಹನುಮಪ್ಪ, ಹುಲುಗಪ್ಪ, ಮಹಾಲಿಂಗಪ್ಪ, ಎಲ್ಲಪ್ಪ, ಶಿವಪ್ಪ ಸೇರಿದಂತೆ ಅನೇಕರು ಮನವಿ ಪತ್ರ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.