24 ರಂದು ‘ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೋತ್ಸವ’ : ಡಾ. ಪುರುಷೋತ್ತಮ ಬಿಳಿಮಲೆ ಕೊಪ್ಪಳಕ್ಕೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 22- ಕವಿ ಗವಿಸಿದ್ಧ ಎನ್. ಬಳ್ಳಾರಿ ಸ್ಮರಣೆಯ ೬ ನೇ ‘ಸಾಹಿತ್ಯೋತ್ಸವ’ ಕಾರ್ಯಕ್ರಮವನ್ನು ಇದೇ ನವಂಬರ್ ೨೪, ರವಿವಾರ ಸರಕಾರಿ ನೌಕರರ ಸಾಂಸ್ಕೃತಿಕ ಭವನ, ಕೊಪ್ಪಳದಲ್ಲಿ ಮುಂಜಾನೆ ೧೦.೧೫ ಕ್ಕೆ ಜರುಗಲಿದೆ.

ಕೊಪ್ಪಳ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಬಿ.ಕೆ. ರವಿ ‘ಸಾಹಿತ್ಯೋತ್ಸವ’ವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಆಗಮಿಸಲಿದ್ದಾರೆ.

ಗವಿಸಿದ್ಧ ಎನ್. ಬಳ್ಳಾರಿ ಬದುಕು ಮತ್ತು ಕಾವ್ಯದ ಕುರಿತು ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ ಮಾತನಾಡಲಿದ್ದಾರೆ. ಅತಿಥಿಗಳಾಗಿ ಬಸವ ಸಮಿತಿ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ, ಲಯನ್ಸ್ ಧುರೀಣರಾದ ಶ್ರೀನಿವಾಸ ಗುಪ್ತಾ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಭಾಗವಹಿಸಲಿದ್ದಾರೆ. ವೇದಿಕೆಯ ಪರವಾಗಿ ಹಿರಿಯ ಸಾಹಿತಿಗಳಾದ ಎಚ್.ಎಸ್. ಪಾಟೀಲ ಮತ್ತು ಅಲ್ಲಮಪ್ರಭು ಬೆಟ್ಟದೂರು ಉಪಸ್ಥಿತರಿರಲಿದ್ದಾರೆ.

ಚನ್ನಪ್ಪ ಅಂಗಡಿಯವರ ‘ಇನ್ನು ಕೊಟ್ಟೆನಾದೊಡೆ’, ನಾಗೇಶ್ ನಾಯಕ್‌ರ ‘ಮನುಷ್ಯರಿಲ್ಲದ ನೆಲ’, ನಾಗಭೂಷಣ ಅರಳಿಯವರ ‘ನೂರೆಂಟು ಹೆಜ್ಜೆಗಳು’ ಕೃತಿಗಳು ‘ಸಾಹಿತ್ಯೋತ್ಸವ’ವದಲ್ಲಿ ಲೋಕಾರ್ಪಣೆಯಾಗಲಿವೆ.
ಇದೇ ಸಂದರ್ಭದಲ್ಲಿ ‘ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ -೨೦೨೪’ ರ ವಿಜೇತರಾದ ಚನ್ನಪ್ಪ ಅಂಗಡಿ ಮತ್ತು ರವೀ ಹಂಪಿ ಇವರಿಗೆ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ರೂ. ೬,೦೦೦ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.

ಡಾ. ಶಿವಕುಮಾರ ಮಾಲಿಪಾಟೀಲ, ಸಣ್ಣೆಪ್ಪ ಯಮನಪ್ಪ ಹಕಾರಿ, ಮಾಬುಸಾಬ ಕಿಲ್ಲೇದಾರ, ಬಾಲನಾಗಮ್ಮ ಚೆನ್ನದಾಸರ, ದೇವಕೀಬಾಯಿ ಶಿಲ್ಪಿ ಮತ್ತು ರಮ್ಯಾ ಕಾರಟಗಿ ಇವರಿಗೆ ಸಮಾಜಮುಖಿ ಗೌರವ ಪ್ರಶಸ್ತಿಯನ್ನು, ಅಲ್ಲಮಪ್ರಭು ಬೆಟ್ಟದೂರು, ಅಮರಗುಂಡಪ್ಪ ಕಾರಟಗಿ, ಡಾ. ಬಿ.ವಿ. ಶಿರೂರು, ಡಾ. ಜಿ. ಚಂದ್ರಪ್ಪ, ರುಕ್ಮಿಣಿಬಾಯಿ ಚಿತ್ರಗಾರ ಮತ್ತು ಶರಣಪ್ಪ ಹ್ಯಾಟಿ ಇವರಿಗೆ ಅಭಿನಂದನಾ ಗೌರವ ನಡೆಯಲಿದೆ.

ಜನಪದ ಅಕಾಡೆಮಿಯ ಸದಸ್ಯರಾದ ಮಹೆಬೂಬ ಕಿಲ್ಲೇದಾರ ಮತ್ತು ಮರಿಯಪ್ಪ ಚಾಮಲಾಪುರ ಇವರಿಂದ ಗೀತಗಾಯನವಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ‘ಸಾಹಿತ್ಯೋತ್ಸವ’ ದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ‘ಸಾಹಿತ್ಯೋತ್ಸವ’ ಸಮಿತಿಯ ಸಂಚಾಲಕ ಮಹೇಶ ಬಳ್ಳಾರಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!