a9adc1f3-5c95-4460-b2c6-12fb60610763

                               ತೊಗಲುಗೊಂಬೆ ಕಲೆ ಪುರಾತನವಾದದ್ದು-ಟಿ.ನಾಗಭೂಷಣ್

ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೨೨- ಜಗತ್ತಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಮಾನವ ಕುಲಕೋಟಿಯ ಬದುಕಿನ ಭಾಷ್ಯ ಬರೆದ ರಾಮಾಯಣ ಮತ್ತು ಮಹಾಭಾರತದ ಕಥಾನಕಗಳನ್ನು ಪುರಾಣ ಕಾಲದಿಂದ ಇಂದಿನ ತನಕ ಜತನದಿಂದ ಕಾಪಾಡಿಕೊಂಡು ಬಂದಿರುವುದು ತೊಗಲುಬೊಂಬೆ ಕಲಾವಿದರು. ಈ ತೊಗಲುಗೊಂಬೆ ಕಲಾವಿದರು ಯಕ್ಷ ಕಿನ್ನರರ ಸ್ವರೂಪದಲ್ಲಿದ್ದು ಇಂದಿಗೂ ಸನಾತನ ಭಾರತದ ಸಂಸ್ಕøತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಬರುವಲ್ಲಿ ಅವರ ಪಾತ್ರ ಬಹುಮುಖ್ಯವಾಗಿದೆ ಎಂದು ಈನಾಡು ಪತ್ರಿಕೆಯ ಹಿರಿಯ ಪತ್ರಕರ್ತರಾದ ಟಿ.ನಾಗಭೂಷಣ್ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ರಾಮ ಸಂಗೀತ ಕಲಾ ಟ್ರಸ್ಟ್ ಇವರ ಪ್ರಯೋಜನ ಅಡಿಯಲ್ಲಿ ಹುಲಿಕುಂಟೆ ತೊಗಲುಗೊಂಬೆ ಕಲಾ ತಂಡ, ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ಸ್ಥಳೀಯ ಬಸವೇಶ್ವರ ನಗರದ ಶ್ರೀ ಸಂಗಮೇಶ್ವರ ದೇವಸ್ಥಾನದ ಬಯಲು ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ತೊಗಲುಗೊಂಬೆ ಮತ್ತು ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತ, ಇಡೀ ವಿಶ್ವಕ್ಕೆ ರಾಮಾಯಣ ಮತ್ತು ಮಹಾಭಾರತ ಕಥನಗಳು ಜ್ಞಾನ ಮತ್ತು ಜೀವನದ ಜೀವಂತಿಕೆಯನ್ನು ನಿತ್ಯನಿರಂತರವಾಗಿ ನೀಡುತ್ತಿವೆ. ತೊಗಲುಗೊಂಬೆ ಕಲಾವಿದರು ತಮ್ಮ ಕೈಚಳಕದಿಂದ ಪಾತ್ರಗಳನ್ನು ಸೃಷ್ಟಿಸಿ, ಭಾರತೀಯ ಸೊಗಡಿನ ಸುಂದರ ಅನುಭೂತಿಯನ್ನು ವೈವಿಧ್ಯಮಯವಾಗಿ ಪ್ರದರ್ಶನ ಮಾಡುವ ಮೂಲಕ ಪ್ರತಿಯೊಬ್ಬರಿಗೂ ಜೀವನೋತ್ಸಾಹ ತುಂಬುತ್ತಿದ್ದಾರೆ. ಇಂತಹ ಕಲೆ ಮತ್ತು ಕಲಾವಿದರನ್ನು ಸಮಾಜದ ಎಲ್ಲ ಸ್ತರದಲ್ಲಿರುವ ಜನರು, ಸಂಘಟನೆಗಳು ಗೌರವಿಸಿ ಪುರಸ್ಕರಿಸುವ ಕೆಲಸವಾಗಬೇಕು. ಸರ್ಕಾರವೂ ಕೂಡ ಈ ಕಲೆಗೆ ಅತ್ಯುನ್ನತ ಮಟ್ಟದಲ್ಲಿ ಪ್ರೋತ್ಸಾಹ ನೀಡಿ, ಕಲೆ ಮತ್ತು ಕಲಾವಿದರನ್ನು ಪೋಷಣೆ ಮಾಡಬೇಕೆಂದು ಹೇಳಿದರು.
ಸಾಹಿತಿ ಮತ್ತು ರಂಗಭೂಮಿ ನಿರ್ದೇಶಕರಾದ ಕೆ.ಜಗಧೀಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವುದು ಪ್ರಸ್ತುತ ಸಂದರ್ಭದಲ್ಲಿ ಅತ್ಯಗತ್ಯ. ಜಾನಪದ ಕಲೆ, ನಾಟಕ ರಂಗದಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಕಲಾವಿದರ ಆರ್ಥಿಕ ಪರಿಸ್ಥಿತಿ ಇಂದು ತುಂಬಾ ದಯನೀಯವಾಗಿದೆ. ಕುಟುಂಬ ನಿರ್ವಹಣೆ, ಮಕ್ಕಳಿಗೆ ಶಿಕ್ಷಣಕ್ಕೂ ತತ್ವಾರ ಎದುರಿಸುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧಿಕಾರಿಗಳು ಇಂತಹ ಕಲಾವಿದರನ್ನು ಗುರುತಿಸಬೇಕು. ಕೃಷ್ಣನ ಲೆಕ್ಕಾಚಾರಕ್ಕೆ ಅಂಟಿಕೊಳ್ಳದೇ ರಾಮನಂತೆ, ಹನುಮನಂತೆ ಸರ್ಕಾರದ ಪ್ರಾಯೋಜಕತ್ವದಲ್ಲಿ ಅರ್ಹ ಕಲಾವಿದರಿಗೆ ಅವಕಾಶ ನೀಡಬೇಕು. ಅಂಥವರನ್ನು ಬೆಳೆಸಬೇಕು. ಆರ್ಥಿಕವಾಗಿ ಎಲ್ಲ ರೀತಿಯ ನೆರವು ನೀಡಬೇಕು. ಕಲಾವಿದರನ್ನು ಶೋಷಣೆ ಮಾಡಿದರೆ ಶಾಪ ತಟ್ಟದೇ ಇರದು ಎಂದರು.
ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕøತ ಚಾ.ಮ.ಗಂಗಾಧರಯ್ಯ ಅವರು ಹುಲಿಕುಂಟೆ ತೊಗಲುಗೊಂಬೆ ಕಲಾ ತಂಡ ಮತ್ತು ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ಇವರು ಕೊಡಮಾಡಿದ `ಹುಲಿಕುಂಟೆಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತ, ತೊಗಲುಗೊಂಬೆ ಕಲೆ ಪುರಾತನವಾದದ್ದು. ಹಿಂದೆ ಬರಗಾಲ ಇದ್ದರೆ ತೊಗಲುಗೊಂಬೆ ಆಡಿಸುವ ಪದ್ಧತಿ ಹಳ್ಳಿಗಳಲ್ಲಿ ಇತ್ತು. ಆಗ ಮಳೆ ಬೆಳೆ ಸಮೃದ್ಧವಾಗಿ ಬರುತ್ತಿತ್ತು. ಈ ನಂಬಿಕೆ ಇಂದಿಗೂ ಗ್ರಾಮಾಂತರ ಪ್ರದೇಶದಲ್ಲಿದೆ. ಬೆಳಗಲ್ಲು ವೀರಣ್ಣನವರು ಈ ಕಲೆಯನ್ನು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಗೊಳಿಸಿದ್ದಾರೆ. ವಿವಿಧ ರಂಗ ಕಲೆಯಲ್ಲೂ ಬಳ್ಳಾರಿ ರಾಘವ, ಸುಭದ್ರಮ್ಮ ಮನ್ಸೂರು, ಮದಿರೆ ಮರಿಸ್ವಾಮಿ, ಜೋಳದರಾಶಿ ದೊಡ್ಡನಗೌಡ, ನಾಗನಗೌಡ ಅಂಥವರು ಮೇರು ಕಲಾವಿದರಾಗಿದ್ದಾರೆ. ತಮ್ಮ ಅಸಾಧಾರಣ ಕಲೆಯ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ. ಆ ಮೂಲಕ ಬಳ್ಳಾರಿ ಜಿಲ್ಲೆಯ ಘನತೆಯನ್ನು ಇಮ್ಮಡಿಗೊಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಕವಿ, ಸಾಹಿತಿ ಮತ್ತು ಕಲಾವಿದರ ತವರೂರು ಎನ್ನಲು ಹೆಮ್ಮೆ ಎನಿಸುತ್ತದೆ ಎಂದರು.
ಸಂಗಮೇಶ್ವರ ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ರೈತ ಸಂಘದ ಉಪಾಧ್ಯಕ್ಷರಾದ ದಿವಾಕರ್, ಸಂಗಮೇಶ್ವರ ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಎಂ.ವಾಮದೇವ ಇನ್ನಿತರರು ಇದ್ದ ಈ ಕಾರ್ಯಕ್ರಮದಲ್ಲಿ ಲಕ್ಷ್ಮೀದೇವಿ ಮತ್ತು ತಂಡದವರು `ಬಸವ ಬೆಳೆ’ ತೊಗಲುಗೊಂಬೆ ಪ್ರದರ್ಶಿಸಿದರು. ದಿವ್ಯ ಮತ್ತು ತಂಡದವರು ನಾಟಕ ಪ್ರದರ್ಶಿಸಿದರು.
ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ಟ್ರಸ್ಟ್ ಮತ್ತು ಶ್ರೀ ರಾಮ ಸಂಗೀತ ಕಲಾ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು ಮತ್ತು ಕಲಾಪೋಷಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕಾರ್ತೀಕ ಮಾಸದ ಈ ಶುಭ ಸಂದರ್ಭದಲ್ಲಿ ಜರುಗಿದ `ಬಸವ ಬೆಳೆ’ ತೊಗಲುಗೊಂಬೆ ಪ್ರದರ್ಶನ ಸ್ಥಳೀಯರ ಮನಸ್ಸನ್ನು ಗೆದ್ದಿತು.

Leave a Reply

Your email address will not be published. Required fields are marked *

error: Content is protected !!