
ಗವಿಸಿದ್ದೇಶ್ವರ ಶ್ರೀಗಳ ಪ್ರವಚನ ಭಾಗ-೩
ಸಾರ್ಥಕ ಬದುಕಿಗೆ ಕಸಿಯದ ಸಂಪತ್ತು ಗಳಿಕೆ ಅವಶ್ಯ
ಕರುನಾಡ ಬೆಳಗು ಸುದ್ದಿ
ಗದಗ, ೨೮ – ಸಾವು ನಮ್ಮಿಂದ ಕಸಿಯದಂತಹ ಸಂಪತ್ತನ್ನು ಗಳಿಸಿದಾಗಲೇ ಬದುಕು ಸಾರ್ಥಕತೆ ಕಾಣಲಿದೆ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ಅವರು ಮಂಗಳವಾರ ಸಂಜೆ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಆಯೋಜಿಸಲಾದ ಅಧ್ಯಾತ್ಮ ಪ್ರವಚನದಲ್ಲಿ ಪ್ರವಚನ ನೀಡಿ ಮಾತನಾಡಿದರು. ಹುಟ್ಟು ಮತ್ತು ಸಾವುಗಳ ಬೆಸುಗೆಯೇ ಜೀವನವಾಗಿದ್ದು ಮಾನವ ದೇಹ ಸಂಪತ್ತು, ಅಧಿಕಾರ, ಆಸ್ತಿ, ಪಾಸ್ತಿ, ನನ್ನದು ಎಂದು ಭಾವಿಸಿದ ಕಾರಣವೇ ಸಾವಿಗೆ ಅಂಜಿ ನಡೆಯುತ್ತಿದ್ದಾನೆ. ಸಾವು ನಮ್ಮೊಂದಿಗಿದೆ ಎನ್ನುವುದನ್ನು ಅರಿತಿದ್ದರೂ ಸಹ ಮಾನವ ಲೌಕಿಕತೆಯತ್ತ ಆಕರ್ಷಿತನಾಗುತ್ತಿದ್ದಾನೆ.
ನನ್ನದು ಎಂದು ಯಾವುದನ್ನು ಬಲವಾಗಿ ನಂಬಿದ್ದೇವೆಯೋ, ಅದುನು ಸಾವು ಅಳಿಸಿ ಹಾಕುತ್ತದೆ ಜೀವನದಲ್ಲಿ ನಾವು ಮಾಡಿದ ಪುಣ್ಯ ಮಾತ್ರ ಸಾವಿನಿಂದ ಕಸಿಯಲಾಗದ ಸಂಪತ್ತು ಎನ್ನುವುದನ್ನು ಅರಿಯಬೇಕಿದೆ. ಜೀವಿತ ಹಾಗೂ ನಂತರದ ಬದುಕಿನಲ್ಲಿಯೂ ಸಹ ಪುಣ್ಯದ ನಾಣ್ಯ ಮಾತ್ರ ಚಲಾವಣೆಯಲ್ಲಿರಲಿದೆ. ಸಂಗ್ರಹದಿAದ ಜೀವನವಲ್ಲ ಪುಣ್ಯದಿಂದ ಜೀವನ ಎನ್ನುವುದು ಅರಿತು ಬದುಕಬೇಕಾಗಿದೆ, ದೇಹ, ಮನಸ್ಸು, ಆತ್ಮ ಸರಿಯಾಗಿ ಬಳಸುವ ಕಲೆ ಮಾನವರು ಅರಿಯಬೇಕಿದೆ.
ಪರಧನ ಪರದ್ರವ್ಯದ ಆಸೆಯಿಂದ ಮುಕ್ತವಾಗಬೇಕಿದೆ. ಮಾತಿನ ಸಾಮರ್ಥ್ಯ ಬೆಳೆಸಿಕೊಂಡಾಗ ಸಂತಸ ಮತ್ತು ನೆಮ್ಮದಿಯ ಬದುಕು ಸಾಧ್ಯವಾಗಲಿದೆ. ಕರ್ಮಗಳಿಂದ ನಮ್ಮ ಭವಿಷ್ಯ ನಿರ್ಮಾಣವಾಗಲಿದೆ ಎನ್ನುವುದು ಗಮನಿಸಿಬೇಕಿದೆ ನಾವು ಮಾಡಿದ ಸತ್ಕಾರ್ಯಗಳೇ ನಮ್ಮ ಭವಿಷ್ಯರೂಪ ಗೊಳಿಸಲಿವೆ ನಿಸರ್ಗದಿಂದ ಎಲ್ಲ ಪಡೆದ ನಾವು ನಿಸರ್ಗಕ್ಕೆ ಈ ಭೂಮಿಗೆ ಏನು ಕೊಡುಗೆ ನೀಡಿದ್ದೇವೆ ಎನ್ನುವುದನ್ನು ಅರಿತು ಬಾಳಬೇಕಿದೆ. ಮನುಷ್ಯ ಈ ಭೂಮಿಯ ಮೇಲೆ ಬಾಡಿಗೆದಾರನಾಗಿದ್ದು ಬದುಕಿನಲ್ಲಿ ನಾವು ಪುಣ್ಯ ಮಾಡಿದರೆ ಸುಖ ಪಾಪ ಮಾಡಿದರೆ ದುಃಖ ಎನ್ನುವುದು ಜಗತ್ತಿನ ನಿಯಮ ಅರಿಯಬೇಕಿದೆ ಎಂದರು.