ಕಾರ್ಖಾನೆಗಳಲ್ಲಿ ಎಲೆಕ್ಟ್ರಾನಿಕ್ ತೂಕ ಮಷಿನ್ ಅಳವಡಿಕೆ ಕಡ್ಡಾಯ

ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ

ಕರುನಾಡ ಬೆಳಗು ಸುದ್ದಿ
ಬಳ್ಳಾರಿ,೧೩- ರೈತರಿಗೆ ತೂಕದಲ್ಲಿ ಮೋಸ ಆಗದಂತೆ ತಡೆಯಲು ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಎಲೆಕ್ಟ್ರಾನಿಕ್ ಆಧಾರಿತ ತೂಕ ಮಷಿನ್ ಅಳವಡಿಸಲು ಕ್ರಮವಹಿಸಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಕಾನೂನು ಮಾಪನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದು, ಆಹಾರ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕಿನ ಆಯ್ದ 100 ಜನ ಅಂಗಡಿಕಾರರ ಕುಂದು ಕೊರತೆ ಆಲಿಸಿದ ಸಚಿವರು, ಸಾರ್ವಜನಿಕರ ದೂರು ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಪಡಿತರ ಅಕ್ಕಿ ಜೊತೆಗೆ, ಡಿಬಿಟಿ ಮೊತ್ತ ಫಲಾನುಭವಿಗಳಿಗೆ ನಿಯಮಾನುಸಾರ ಪ್ರತಿ ಮಾಹೆ ಜಮೆ ಮಾಡಿಸಬೇಕು. ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ಪಡಿತರ ಚೀಟಿ ಅನುಮೋದನೆ ಮಾಡಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಕ್ಕರೆ ಸಚಿವ ಶಿವಾನಂದ ಎಸ್.ಪಾಟೀಲ್, ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಶಾಸಕ ಲಕ್ಷಣ ಸವದಿ ಹಾಗೂ ಬೀಳಗಿ ಕ್ಷೇತ್ರದ ಶಾಸಕ ಜೆಟಿ ಪಾಟೀಲ್, ಆಹಾರ ಇಲಾಖೆಯ ಕಾರ್ಯದರ್ಶಿ, ಆಯುಕ್ತರು, ಕರ್ನಾಟಕ ಆಹಾರ ನಿಗಮ ವ್ಯವಸ್ಥಾಪಕ ನಿರ್ದೇಶಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ ನಿಯಂತ್ರಕರು, ಆಹಾರ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ, ವಿಶೇಷ ಅಧಿಕಾರಿಗಳು ಹಾಗೂ ಬೆಳಗಾವಿ, ಕಲಬುರ್ಗಿ ವಿಭಾಗದ ಆಹಾರ ಇಲಾಖೆಯ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ವ್ಯವಸ್ಥಾಪಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!