ಸರ್ಕಾರದ ಗ್ಯಾರಂಟಿ
ಯೋಜನೆಯಿಂದ ಆರ್ಥಿಕ ಹೊರೆ ಬದಲಾವಣೆ ಅನಿವಾರ್ಯ
: ರಾಯರೆಡ್ಡಿ ಕಳವಳ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೭- ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರೆಯಿದ್ದು ಬದಲಾವಣೆ ಮಾಡಬೇಕಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಈ ಯೋಜನೆಗೆ ವಾರ್ಷಿಕ 56 ಸಾವಿರ ಕೋಟಿ ಬಳಕೆ ಆಗುತ್ತಿದೆ. ಈ ಹಿನ್ನೆಲೆ ಆರ್ಥಿಕ ಸುಧಾರಣೆಗೆ ಚರ್ಚೆ ನಡೆಸಲಾಗುವುದು ಎನ್ನುವ ಮೂಲಕ ಗ್ಯಾರಂಟಿ ಯೋಜನೆಯ ಸ್ವರೂಪ ಬದಲಾಗುವ ಮುನ್ಸೂಚನೆ ನೀಡಿದ್ದಾರೆ. ರಾಮಮಂದಿರ ಉದ್ಘಾಟನೆಗೆ ಹೋಗುವುದು, ಬಿಡುವುದು ಸಿಎಂಗೆ ಬಿಟ್ಟ ವಿಚಾರ. ಆಹ್ವಾನ ಬಂದಿಲ್ಲದಿದ್ದರೂ ಹೋದರೆ ತಪ್ಪೇನಿದೆ? ಆಹ್ವಾನ ಬಂದಿಲ್ಲ ಎಂದು ಸಿದ್ದರಾಮಯ್ಯ ತೆಲೆ ಕೆಡಿಸಿಕೊಳ್ಳಬೇಕಿಲ್ಲ. ಇದನ್ನ ಅನಾವಶ್ಯಕ ದೊಡ್ಡದು ಮಾಡುವುದು ಬೇಡ ಎಂದು ಸಲಹೆ ನೀಡಿದರು.
ಸಿದ್ದರಾಮಯ್ಯ ಕಾಂಗ್ರೆಸ್ ನ ಕೊನೆ ಸಿಎಂ ಎಂಬ ಎಚ್. ಡಿ.ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜಕೀಯವಾಗಿ ಯಾರು ಏನಾದರೂ ಮಾತನಾಡಬಹುದು. ಕಾಂಗ್ರೆಸ್ ಮುಗಿಯಿತು ಎಂದು ಹೇಳುತ್ತಿದ್ದರು. ಕರ್ನಾಟಕ, ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದಿಲ್ಲವೆ? ಯಾರೂ ಯಾರನ್ನೂ ಮುಗಿಸಲು ಆಗಲ್ಲ. ಸರಕಾರ ಪಥನ ಆಗುವ ಮಾತು ಅತಿಶಯೋಕ್ತಿ. ಕಾಂಗ್ರೆಸ್ ನ 95 ಜನ ಶಾಸಕರು ಬಿಟ್ಟು ಹೋಗಬೇಕು. ಇವೆಲ್ಲ ಆಗದ ಮಾತು. ಸುಮ್ಮನೇ ರಾಜಕೀಯ ಮಾತನಾಡುತ್ತಾರೆ. ಸರಕಾರ ಬಿಳಲು ಸಾಧ್ಯವಿಲ್ಲ ಎಂದರು.
ಡಿಸಿಎಂ ಸಾಂವಿಧಾನಿಕ ಹುದ್ದೆ ಅಲ್ಲ. ರಾಜ್ಯದಲ್ಲಿ ಇನ್ನೂ 4 ಡಿಸಿಎಂ ಹುದ್ದೆ ಸೃಷ್ಠಿ ಮಾಡಿದರೂ ತಪ್ಪಿಲ್ಲ ಡಿಸಿಎಂ ಹುದ್ದೆ ಸೃಷ್ಠಿ ಕುರಿತು ಸತೀಶ ಜಾರಕಿಹೋಳಿ ಮತ್ತು ಇತರರು ಹೇಳಿದ್ದರಲ್ಲಿ ತಪ್ಪೇನಿಲ್ಲ. ಈ ಹಿಂದೆ ಬಿಜೆಪಿಗರು ಮೂವರನ್ನು ಡಿಸಿಎಂ ಮಾಡಿದ್ದರು. ಡಿಸಿಎಂ ಹುದ್ದೆ ಕೇವಲ ಗೌರವಾನ್ವಿತ ಹುದ್ದೆ. ಇದನ್ನು ಇಷ್ಟೊಂದು ದೊಡ್ಡದು ಮಾಡೋದು ಅಗತ್ಯ. ಕೊನೆಯಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಸಿಎಂ ಹಾಗೂ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ, ಮಂತ್ರಿ ಆಗಲು ಯಾವುದೇ ಮಾನದಂಡ ಇಲ್ಲಾ. ರಾಜಕೀಯದಲ್ಲಿ ಸಿನಿಯಾರಿಟಿ, ಜ್ಯೂನಿಯಾರಿಟಿ ಇಲ್ಲ. ರಾಜಕೀಯದಲ್ಲಿ ಭರವಸೆ ಮೇಲೆ ಬದುಕಬೇಕು. ಸಮಯ ಎಲ್ಲವನ್ನೂ ನಿರ್ಧಾರ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
