
ಅಖಾಡದಲ್ಲಿ ಮೈ ನವಿರೇಳಿಸಿದ ಕುಸ್ತಿ ಸ್ಪರ್ಧೆ ಮದಗಜಗಳಂತೆ ಸೆಣೆಸಾಡಿದ ಜಗಜಟ್ಟಿಗಳು
ಕರುನಾಡ ಬೆಳಗು ಸುದ್ದಿ
ವಿಜಯನಗರ,3- ಹಂಪಿ ಉತ್ಸವದ ಅಂಗವಾಗಿ ಹೊಸಪೇಟೆ ತಾಲ್ಲೂಕಿನ ಮಲಪನಗುಡಿ ಗ್ರಾಮದ ಬಳಿ ನಿರ್ಮಿಸಲಾಗಿದ್ದ ಬೃಹತ್ ಕುಸ್ತಿ ಅಖಾಡದಲ್ಲಿ ಮದಗಜಗಳಂತೆ ಸೆಣೆಸಾಡಿದ ಕುಸ್ತಿಪಟುಗಳು. ಅಂತಿಮವಾಗಿ ಬೆಳಗಾವಿಯ ಮುಸ್ಲಿಕ್ ಆಲಂ ರಾಜಾಸಾಬ್ ಹಂಪಿ ಕೇಸರಿ ಪಟ್ಟವನ್ನು ತಮ್ಮದಾಗಿಸಿಕೊಂಡರು. ಮುಧೋಳಿನ ಸದಾಶಿವ ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಮದವೇರಿದ ಮದಗಜಗಳಂತಹ ಹುಮ್ಮಸ್ಸು, ಎದುರಾಳಿಯನ್ನು ಕೆಡವಿಹಾಕುವ ಕೆಚ್ಚು, ಭುಜತಟ್ಟಿಕೊಂಡು ಕೈ ಕೈ ಮಿಲಾಯಿಸಿ ಕುಸ್ತಿಪಟುಗಳು ಪ್ರತಿಸ್ಪರ್ಧಿಗಳನ್ನು ಮಣಿಸುವ ದೃಶ್ಯ ನೋಡುಗರಲ್ಲಿ ರೋಮಾಂಚನ, ನೆತ್ತಿಯ ಮೇಲೆ ಸೂರ್ಯ ಆಗಮಿಸಿದ್ದರಿಂದ ಮೇಲೆ ರಣರಣ ಬಿಸಿಲು, ಅಖಾಡದಲ್ಲಿ ಕುಸ್ತಿ ಪಂದ್ಯಾಟದ ಬಿಸಿ ನೆರೆದಿದ್ದ ಸಮೂಹ ದವರ ಬೆವರಿಳಿಸುತ್ತಿದ್ದರೆ, ಪೈಲ್ವಾನರು ಸಹ ತಮ್ಮ ಎದುರಾಳಿಗಳ ಬೆವರಿಳಿಸುವಲ್ಲಿ ನಿರತರಾಗಿದ್ದ ದೃಶ್ಯ ಎಂಥವರನ್ನೂ ಕುತೂಹಲದಿಂದ ನಿಂತು ವೀಕ್ಷಿಸುವಂತೆ ಮಾಡಿತ್ತು.
ಹೊಸಪೇಟೆ-ಹಂಪಿಯ ದಾರಿಯಲ್ಲಿನ ಮಲಪನಗುಡಿ ಗ್ರಾಮದ ಬಳಿಯ ನಿರ್ಮಿಸಲಾಗಿರುವ ಕುಸ್ತಿ ಅಖಾಡದಲ್ಲಿ ಹಂಪಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಬಯಲು ಕುಸ್ತಿ ಸ್ಪರ್ಧೆಗೆ ಹೊಸಪೇಟೆ ಶಾಸಕ ಹೆಚ್.ಆರ್. ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ದಿವಾಕರ್ ಅವರು ಮಣ್ಣಿನ ಪೂಜೆ ನೆರವೇರಿಸುವದೊಂದಿಗೆ ಚಾಲನೆ ನೀಡಿದರು.
ಶಾಸಕ ಗವಿಯಪ್ಪ ಅವರು 86 ಕೆ.ಜಿ. ವಿಭಾಗದಲ್ಲಿ ದಾವಣಗೆರೆಯ ಬಸವರಾಜ ಪಾಟೀಲ ಹಾಗೂ ಮರಿಯಮ್ಮನಹಳ್ಳಿಯ ಹನುಮಂತ ಸ್ಪರ್ಧಿಗಳ ನಡುವೆ ಹಸ್ತಲಾಘವ ಮಾಡಿಸಿ, ಕುಸ್ತಿಪಟುಗಳನ್ನು ಅಖಾಡಕ್ಕೆ ಧುಮಿಕಿಸಿದರು.
ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕುಸ್ತಿ ಪಟುಗಳು ಭಾಗವಹಿಸಿದ್ದರು. ಈ ಬಾರಿ ಮಹಿಳಾ ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಕೂಡ ವಿಶೇಷವಾಗಿತ್ತು.
ದಾವಣಗೆರೆಯ ಬಸವರಾಜ ಪಾಟೀಲ ಹಾಗೂ ಮರಿಯಮ್ಮನಹಳ್ಳಿಯ ಹನುಮಂತ ಅವರ ನಡುವೆ ನಡೆದ ಪ್ರಾರಂಭಿಕ ಕುಸ್ತಿ ಸ್ಪರ್ಧೆಯಲ್ಲಿ ಬಸವರಾಜ ಪಾಟೀಲ ಎದುರಾಳಿಯನ್ನು ಮಣಿಸಿ, ಗೆಲುವಿನ ನಗೆ ಬೀರಿದರು.
ಗದುಕಿನ ತೇಜಸ್ವಿನಿ ಹಾಗೂ ಗದುಗಿನ ಶ್ರೀದೇವಿ ಮಡಿವಾಳ ಹಾಗೂ ಗದುಗಿನ ತೇಜಸ್ವಿನಿ ಬಿಂಗಿ ಅವರ ನಡುವೆ ನಡೆದ ಪ್ರಾರಂಭಿಕ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ತೇಜಸ್ವಿನಿ ಅವರು ವಿಜಯ ಸಾಧಿಸಿದರು.
ಈ ಬಾರಿ ಒಟ್ಟು 15 ಮಹಿಳಾ ಕುಸ್ತಿ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಕುಸ್ತಿ ಪಂದ್ಯಗಳಲ್ಲಿ ಸೆಣೆಸಿದರು.
ವಿವಿಧೆಡೆಗಳಿಂದ ಆಗಮಿಸಿದ್ದ ಸಾರ್ವಜನಿಕರು ಕುತೂಹಲದಿಂದ ಕುಸ್ತಿ ಪಂದ್ಯಗಳನ್ನು ವೀಕ್ಷಿಸಿಲು ಅಖಾಡದ ಬಳಿ ನೆರೆದಿದ್ದರು.
ಕುಸ್ತಿ ಪೈಲ್ವಾನರು ಸೆಣೆಸಾಟದಲ್ಲಿ ತಮ್ಮ ಪಟ್ಟುಗಳನ್ನು ಹಾಕುತ್ತಿದ್ದರೆ, ಇತ್ತ ಪ್ರೇಕ್ಷಕರು ಸ್ಪರ್ಧಾಳುಗಳನ್ನು ಚಪ್ಪಾಳೆ ಹಾಗೂ ಸಿಳ್ಳು ಹಾಕುವ ಮುಖೇನ ಹುರಿದುಂಬಿಸುತ್ತಿದ್ದುದು ಕಂಡುಬಂದಿತು. ಸುಡುವ ಬಿಸಿಲನ್ನು ಲೆಕ್ಕಿಸದೆ ಕುಸ್ತಿ ಸ್ಪರ್ಧಾಳುಗಳು ಎದುರಾಳಿಗಳ ವಿರುದ್ಧ ಪಟ್ಟು ಹಾಕುವತ್ತ ಬೀಳಿಸಲು ಹಾತೊರೆಯುತ್ತಿದ್ದರು. ಒಟ್ಟಾರೆ ಕುಸ್ತಿ ಪಂದ್ಯಾವಳಿ ರೋಚಕತೆಯಿಂದ ಕೂಡಿತ್ತು.