ಗಾಂಧಿ ಗ್ರಾಮ ಪ್ರಶಸ್ತಿ ಪಡೆದ ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಇದೆಂತಾ ದುಸ್ಥಿತಿ
ಹಳ್ಳ ಹಿಡಿದ ಲಕ್ಷಾಂತರ ರೂ. ವೆಚ್ಚದ ತ್ಯಾಜ್ಯ ವಿಲೇವಾರಿ ಘಟಕ
ಕರುನಾಡ ಬೆಳಗು ಸುದ್ದಿ
ರಾಯಚೂರು,21- ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿ ಒಂದಿಲ್ಲೊಂದು ಸಮಸ್ಯೆಗಳ ವಿಷಯದಲ್ಲಿ ಸದಾಕಾಲವೂ ಸುದ್ದಿಯಲ್ಲಿರುವ ಗ್ರಾಮ ಪಂಚಾಯತಿ ಆಗಿದ್ದು, ಇದೇ ಗ್ರಾಮ ಪಂಚಾಯತಿಗೆ ಕಳೆದ ಕೆಲ ತಿಂಗಳುಗಳ ಹಿಂದೆ ಗಾಂಧಿ ಗ್ರಾಮ ಪ್ರಶಸ್ತಿಯನ್ನು ನೀಡಲಾಗಿತ್ತು.
ಗಾಂಧಿ ಗ್ರಾಮ ಪ್ರಶಸ್ತಿ ಪಡೆದುಕೊಂಡಿರುವ ಗ್ರಾಮ ಪಂಚಾಯತಿಯಲ್ಲಿ ಯಾವ ಕೆಲಸವು ಕೂಡ ಸರಿಯಾಗಿ ಆಗುತ್ತಿಲ್ಲ. ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದ್ದು, ಪಂಚಾಯತಿಯಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ಪ್ರತಿನಿತ್ಯ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆ.
ಗ್ರಾಮ ಪಂಚಾಯತಿಯಲ್ಲಿನ ಸಮಸ್ಯೆಗಳ ಬಗ್ಗೆ ದಿನನಿತ್ಯ ಸುದ್ದಿಗಳಾದರೂ ಕೂಡ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಯಾಕೆಂದರೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ಅನೇಕ ಸಂಘಟನೆಗಳ ಮುಖಂಡರು ಪಾಮನಕಲ್ಲೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದಾರೆಯಾದರೂ ಅವರುಗಳು ಮನವಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಸಂಘಟನೆಗಳ ಮುಖಂಡರುಗಳ ಆರೋಪವಾಗಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಪಾಮನಕಲ್ಲೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದೆ. ಪಾಮನಕಲ್ಲೂರು ಗ್ರಾಮದ ಒಂದು ಮತ್ತು ಎರಡನೇ ವಾರ್ಡ್ ನಲ್ಲಿ ಕುಡಿಯುವ ಹಾಗೂ ಬಳಕೆಯ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಒದಗಿಸಿಕೊಡುವ ಕೆಲಸವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡಿಲ್ಲ ಎಂಬ ಗಂಭೀರ ಆರೋಪವು ಕೇಳಿ ಬರುತ್ತಿದೆ.
ಕುಡಿಯುವ ನೀರಿಗಾಗಿ ಹಾಹಾಕಾರ : ಪಾಮನಕಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಗ್ರಾಮ ಪಂಚಾಯತಿ ಆಡಳಿತದ ವಿರುದ್ಧ ಜನರು ದಿನನಿತ್ಯ ಹಿಡಿ ಶಾಪ ಹಾಕುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಪರಿಹಾರ ಹುಡುಕುವ ಕೆಲಸವಂತು ಬಿರುಸಾಗಿ ನಡೆಯುತ್ತಿಲ್ಲ ಎನ್ನುತ್ತಿದ್ದಾರೆ ಕರವೇ ಮುಖಂಡರು, ಗ್ರಾಮಸ್ಥರು.
ಕೊಳೆತು ನಾರುತ್ತಿರುವ ಚರಂಡಿಗಳು, ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು : ಪಾಮನಕಲ್ಲೂರು ಗ್ರಾಮದಲ್ಲಿನ ಮುಖ್ಯ ರಸ್ತೆಯ ಹತ್ತಿರದ ಚರಂಡಿಗಳು ಕೊಳೆತು ನಾರುತ್ತಿವೆ. ಅಲ್ಲಿನ ಅಂಗಡಿ ಮುಂಗಟ್ಟುಗಳ ಜನರು ಚರಂಡಿಯ ಗಬ್ಬು ನಾತದಿಂದ ಸಮಸ್ಯೆಗೆ ಸಿಲುಕಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪಿಡಿಒ ಹಾಗೂ ಮೇಲಾಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ಆದರೇ ಅದಕ್ಕೆ ಪರಿಹಾರ ನೀಡಿಲ್ಲ ಎಂದು ಕರವೇ ಮುಖಂಡರಾದ ರಮೇಶ ಗಂಟ್ಲಿ, ಲಕ್ಷ್ಮಣ ಚೌಡ್ಲಿ, ಗ್ರಾಮಸ್ಥರಾದ ಬಜೇಂದ್ರ ಪಾಮನಕಲ್ಲೂರು ಆರೋಪಿಸಿದ್ದಾರೆ.
ಹಳ್ಳ ಹಿಡಿದ ಲಕ್ಷಾಂತರ ರೂ. ವೆಚ್ಚದ ತ್ಯಾಜ್ಯ ವಿಲೇವಾರಿ ಘಟಕ : ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿ ಸುಮಾರು ಐವತ್ತು ಲಕ್ಷ ರೂ.ಗಳನ್ನು ಖರ್ಚು ಮಾಡಿ ನಿರ್ಮಾಣ ಮಾಡಲಾಗಿರುವ ತ್ಯಾಜ್ಯ ವಿಲೇವಾರಿ ಘಟಕ ಹಳ್ಳ ಹಿಡಿದಿದೆ. ತ್ಯಾಜ್ಯ ವಿಲೇವಾರಿ ಘಟಕವನ್ನು ಅಂದಾಜು ಪತ್ರಿಕೆಯ (ಎಸ್ಟಿಮೆಂಟ್) ಪ್ರಕಾರ ನಿರ್ಮಾಣ ಮಾಡಿರುವುದರ ಬಗ್ಗೆ ಕರವೇ ಮುಖಂಡರು ಸೇರಿದಂತೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅದರ ಎಸ್ಟಿಮೆಂಟ್ ಕಾಪಿ ಕೂಡ ಲಭ್ಯವಾಗಿಲ್ಲ ಎಂಬ ಆರೋಪಗಳು ಸಹ ಕೇಳಿ ಬಂದಿವೆ.
ತ್ಯಾಜ್ಯ ವಿಲೇವಾರಿ ಘಟಕವನ್ನು ಇದುವರೆಗೂ ಉಪಯೋಗಿಸಿಲ್ಲ. ಅದರ ಬಾಗಿಲು ಕೂಡ ಜಾಮ್ ಆಗಿದ್ದು, ಮುಚ್ಚಲು, ತೆಗೆಯಲು ಬಾರದಂತಾಗಿದೆ. ಘಟಕದ ಹೊರವಲಯದಲ್ಲೇ ತ್ಯಾಜ್ಯವನ್ನು ತಂದು ಹಾಕಲಾಗಿದ್ದು, ಅದರಿಂದ ಹತ್ತಿರದಲ್ಲಿರುವ ವಸತಿ ನಿಲಯ ಹಾಗೂ ಶಾಲೆಯ ಮಕ್ಕಳು ಕಿರಿಕಿರಿ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಷ್ಟೇ ಅಲ್ಲದೇ ತ್ಯಾಜ್ಯ ವಿಲೇವಾರಿ ಘಟಕದ ಮುಂಭಾಗದಲ್ಲಿ ಸಮತಟ್ಟು ಮಾಡಿಲ್ಲ. ಅದಕ್ಕೆ ತೆರಳುವ ರಸ್ತೆಯೂ ಸರಿಯಾಗಿಲ್ಲ. ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಿಬ್ಬಂದಿಗಳಿಗೆ ಯಾವುದೇ ವ್ಯವಸ್ಥೆ ಕೂಡ ಕಲ್ಪಿಸಿಲ್ಲ. ಅವುಗಳಿಗೆ ಸಂಬಂಧಿಸಿದ ನಾಮ ಫಲಕಗಳು ಕೂಡ ಇಲ್ಲ. ಆದರೇ ಸಮತಟ್ಟು, ಮೆಟಲಿಂಗ್ ರಸ್ತೆ, ತ್ಯಾಜ್ಯ ವಿಲೇವಾರಿ ಘಟಕದ ಹೆಸರಿನಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಲಾಗಿದೆ ಎಂಬುದು ಕರವೇ ಮುಖಂಡರಾದ ಲಕ್ಷ್ಮಣ, ರಮೇಶರವರ ಆರೋಪವಾಗಿದೆ.
ಗ್ರಾಮದ ಪ್ರೌಢ ಶಾಲೆಗೂ ನೀರಿಲ್ಲ : ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೂಡ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮಕ್ಕಳಿಗೆ ಕುಡಿಯುವ ನೀರು, ಬಳಕೆಯ ನೀರು ನೀಡಬೇಕಾಗಿದ್ದ ಆಡಳಿತ ವ್ಯವಸ್ಥೆ ಮಾತ್ರ ನಿರ್ಲಕ್ಷ್ಯ ಧೋರಣೆ ತಾಳಿದಂತಿದೆ. ಮಕ್ಕಳಿಗೆ ಟ್ಯಾಂಕರ್ ಮೂಲಕ ನೀರು ನೀಡುತ್ತಿದ್ದಾರೆ. ಆದರೆ ಶಾಶ್ವತ ಪರಿಹಾರ ಒದಗಿಸಿಲ್ಲವೆಂಬುದು ಅಲ್ಲಿನ ಮಕ್ಕಳ ಹಾಗೂ ಪೋಷಕರ ಆರೋಪವಾಗಿದೆ.
ಒಟ್ಟಾರೆಯಾಗಿ ಗಾಂಧಿ ಗ್ರಾಮ ಪ್ರಶಸ್ತಿ ಪಡೆದುಕೊಂಡು, ಅತ್ಯುತ್ತಮ ಆಡಳಿತ ನೀಡಬೇಕಾಗಿರುವ ಪಾಮನಕಲ್ಲೂರು ಗ್ರಾಮ ಪಂಚಾಯತಿ ಮಾತ್ರ ಯಾವುದೇ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಜನರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಿ ಎಂಬುದು ಈ ವರದಿಯ ಆಶಯವಾಗಿದೆ.

