
ಅಂಜನಾದ್ರಿ ಬೆಟ್ಟಕ್ಕೆ ರೂಪ್ ವೇ ಸೌಲಭ್ಯ ಕೇಂದ್ರದಿಂದ 100 ಕೋಟಿ ಅನುದಾನ : ಪರಣ್ಣ
ಕರುನಾಡ ಬೆಳಗು ಸುದ್ದಿ
ಗಂಗಾವತಿ,24- ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ತಾಲ್ಲೂಕಿನ ಚಿಕ್ಕರಾಂಪೂರದ ಬಳಿ ಇರುವ ಅಂಜನಾದ್ರಿ ಬೆಟ್ಟಕ್ಕೆ ಭಕ್ತರನ್ನು ಸುಲಭವಾಗಿ ಕರೆದೊಯ್ಯಲು ರೂಪ್ ವೇ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಒಂದು ನೂರು ಕೋಟಿ ರೂಪಾಯಿ ಮೊತ್ತದ ಅನುದಾನ ಘೋಷಣೆ ಮಾಡಿದೆ ಎಂದು ಮಾಜಿಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಜನಾದ್ರಿಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಸೌಲಭ್ಯಗಳನ್ನು ಕಲಿ ‘ಸಬೇಕಿದ್ದು, ಇದೀಗ ಕೇಂದ್ರ ಸರ್ಕಾರ ಗಮನ ಹರಿಸಿ ಅನುದಾನ ಒದಗಿಸಿದೆ.
ಕೇಂದ್ರದ ಲೋಕೋಪಯೋಗಿ ಸಚಿವ ನಿತಿನ್ ಗಡ್ಯಾರಿ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಎನ್ಎಚ್ಎಲ್ಎಂ ಯೋಜನೆಯಡಿ ರೂಪ್ ವೇ ನಿರ್ಮಾಣ ಮಾಡಲು ನೂರು ಕೋಟಿ ಮೊತ್ತದ ಅನುದಾನ ಘೋಷಣೆ ಮಾಡಿದ್ದಾರೆ.
ಈ ರೂಪ್ ವೇ ಸೌಲಭ್ಯ ಸಿಕ್ಕಲ್ಲ, ಅಂಜನಾದ್ರಿ ಬೆಟ್ಟದ ಮೇಲಿರುವ ದೇಗುಲಕ್ಕೆ ಹೋಗಿ ಬರಲು ವೃದ್ಧರು, ಮಕ್ಕಳು, ಮಹಿಳೆಯರು ಮತ್ತು ದುರ್ಬಲ ವರ್ಗದ ವ್ಯಕ್ತಿಗಳಿಗೆ ಸುಲಭವಾಗಲಿದೆ. ಈಗಾಗಲೆ ರೈಟ್ಸ್ ಎಂಬ ಸಂಸ್ಥೆಗೆ ರೂಪ್ ವೇ ನಿರ್ಮಾಣದ ಜವಾಬ್ದಾರಿ ಒಪ್ಪಿಸಲಾಗಿದೆ ಎಂದರು.
ಇನ್ನೊಂದು ವಾರದಲ್ಲಿ ಕೇಂದ್ರದಿಂದ ಅಧಿಕಾರಿಗಳ ತಂಡವು ಅಂಜನಾದ್ರಿಗೆ ಬಂದು ರೂಪ್ ವೇ ಸ್ಥಳ ಪರಿಶೀಲನೆ ಮಾಡಲಿದೆ. ನೆಲದ ಮಟ್ಟದಿಂದ ಬೆಟ್ಟದವರೆಗೆ ಸುರಕ್ಷಿತವಾಗಿ ರೂಪ್ ವೇ ಮಾಡಲು ಯೋಜನೆ ರೂಪಿಸಲಿದೆ ಎಂದು ಪರಣ್ಣ ತಿಳಿಸಿದರು.
ಈ ಸಂದರ್ಭದಲ್ಲಿ ಜೋಗದ ಹನುಮಂತಪ್ಪ ನಾಯಕ, ಚನ್ನಪ್ಪ ಮಳಗಿ, ಕಾಶಿನಾಥ ಚಿತ್ರಗಾರ, ಸಂತೋಷ ಕೆಲೋಜಿ, ವೆಂಕಟೇಶ ಅಮರ ಜೋತಿ, ನಗರಸಭೆ ಸದಸ್ಯರುಗಳಾದ ವಾಸುದೇವ ನವಲಿ, ನವಿನಕುಮಾರ, ಪರಶುರಾಮ ಮಡ್ಡೇರ, ವೆಂಕಟೇಶ, ಶ್ರೀನಿವಾಸ ಧೂಳ ಮುಂತಾದವರು ಉಪಸ್ಥಿತರಿದ್ದರು.