ಆನೆಗೊಂದಿ ಉತ್ಸವ: ಮಾರ್ಚ್ ೮ರಿಂದ ಮಾ.೧೦ರವರೆಗೆ ಕ್ರೀಡಾಕೂಟ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, – ಆನೆಗೊಂದಿ ಉತ್ಸವ-೨೦೨೪ರ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಮತ್ತು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾರ್ಚ್ ೮ ರಿಂದ ಮಾ.೧೦ರ ವರೆಗೆ ಹಮ್ಮಿಕೊಳ್ಳಲಾಗಿದೆ.
೨೦೨೪ರ ಆನೆಗೊಂದಿ ಉತ್ಸವವು ಮಾರ್ಚ್ ೧೧ ಮತ್ತು ಮಾ.೧೨ರಂದು ಎರಡು ದಿನಗಳ ಕಾಲ ನಡೆಯಲಿದ್ದು, ಉತ್ಸವದ ಪ್ರಯುಕ್ತ ಆಯೋಜಿಸಲಾದ ವಿವಿಧ ಕ್ರೀಡಾಕೂಟಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಮಾ.೮ರಂದು ಸಂಜೆ ೪ ಗಂಟೆಗೆ ಚಾಲನೆ ನೀಡುವರು.
ಕ್ರೀಡೆಗಳ ವಿವರ: ಮಾ.೮ರಂದು ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯ ಜರುಗಲಿದೆ. ಮಾ.೯ರ ಬೆಳಿಗ್ಗೆ ೧೦ ಗಂಟೆಗೆ ಪುರುಷರ ಕುಸ್ತಿ, ಹಗ್ಗ-ಜಗ್ಗಾಟ, ಬಾಲ್ ಬ್ಯಾಡ್ಮಿಂಟನ್, ಮಕ್ಕಳಿಗೆ ಚಿತ್ರಕಲೆ ಹಾಗೂ ವಿಶೇಷಚೇತನರ ಕಬಡ್ಡಿ ಹಾಗೂ ಅಂದು ಸಂಜೆ ೪ ಗಂಟೆಗೆ ಪುರುಷ ಮತ್ತು ಮಹಿಳಾ ವಿಭಾಗದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಮಾ.೧೦ರ ಬೆಳಿಗ್ಗೆ ೬.೩೦ ಗಂಟೆಗೆ ಮ್ಯಾರಥಾನ್, ಬೆಳಿಗ್ಗೆ ೧೦ಕ್ಕೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಾಗೂ ಪುರುಷರಿಗಾಗಿ ಎತ್ತಿನ ಬಂಡಿ ಶೃಂಗಾರ ಸ್ಪರ್ಧೆ ನಡೆಯಲಿವೆ ಎಂದು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
