
ಯುವ ಜನರ ಸಂಘಟನೆಗೆ ‘ಯುವ ಅಹಿಂದ’ ವೇದಿಕೆ ನಿರ್ಮಾಣ : ಕುಬೇರ ದಲ್ಲಾಲಿ
ಕರುನಾಡ ಬೆಳಗು ಸುದ್ದಿ
ವಿಜಯನಗರ,8- ಈ ಹಿಂದೆ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳು ಲಭಿಸುತ್ತಿದ್ದವು. ಜಿ.ಪಂ.ಗೆ ಜಿಲ್ಲೆಗೆ ಕನಿಷ್ಟ 8 ರಿಂದ 10 ಸ್ಥಾನಗಳು ಮೀಸಲಿರುತ್ತಿದ್ದವು. ಆದರೆ ಕ್ರಮೇಣ ಜಿಲ್ಲೆಗೆ 1 ಅಥವಾ 2 ಸ್ಥಾನಗಳಿಗೆ ಇಳಿದಿದೆ. ಇದರಿಂದ ಒಬಿಸಿಗಳಿಗೆ ರಾಜಕೀಯವಾಗಿ ದೊಡ್ಡ ಅನ್ಯಾಯವಾಗುತ್ತಿದೆ ಎಂದು ಹುಡಾ ಮಾಜಿ ಅಧ್ಯಕ್ಷ ಆರ್.ಕೊಟ್ರೇಶ್ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಜಿಲ್ಲಾ ಕುರುಬರ ಸಂಘದ ಆವರಣದಲ್ಲಿ ಅಹಿಂದ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಪಾಪಿನಾಯಯಕನಹಳ್ಳಿ ಅಹಿಂದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳಿಗೆ ಈ ಹಿಂದೆ ರಾಜಕೀಯ ಮೀಸಲಾತಿಯಿಂದ ಹೆಚ್ಚಿನ ಸ್ಥಾನಗಳು ಸಿಗುತ್ತಿದ್ದವು. ಆದರೆ ಈಗ ಬಹಳ ಕಡಿಮೆಯಾಗಿವೆ. ಒಬಿಸಿ ಸ್ಥಾನಗಳನ್ನು ಕಡಿಮೆ ಮಾಡಿ ಸಾಮಾನ್ಯ ಕ್ಷೇತ್ರಗಳಿಗೆ ಒತ್ತು ನೀಡಲಾಗಿದೆ. ಇದರಿಂದ ಒಬಿಸಿಗಳಿಗೆ ದೊಡ್ಡ ಅನ್ಯಾಯವಾಗುತ್ತಿದ್ದು, ಅಹಿಂದ ಸಮುದಾಯಗಳು ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯಬೇಕು. ಒಬಿಸಿಗಳಿಗೆ ಮೊದಲಿನಂತೆ ರಾಜಕೀಯ ಮೀಸಲಾತಿ ಸಿಕ್ಕರೆ ಅಹಿಂದ ಸಮುದಾಯಗಳ ನೂರಾರು ಜಾತಿಗಳಿಗೆ ಅನುಕೂಲವಾಗುತ್ತದೆ ಎಂದರು.
ಅಹಿಂದ ಸಂಘಟನೆ ತಾಲೂಕಿನಲ್ಲಿ ಅಷ್ಟಾಗಿ ಸಂಘಟನೆಯಾಗಿದ್ದಿಲ್ಲ. ಕುಬೇರ ಅವರು ಅಧ್ಯಕ್ಷರಾದ ಮೇಲೆ ಸಂಘಟನೆಗೆ ಬಲ ತುಂಬಿದ್ದಾರೆ ಎಂದು ಶ್ಲಾಘಿಸಿದರು.
ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ರವಿಕುಮಾರ್ ಮಾತನಾಡಿ, ಯಾವುದಾದರೂ ಸಂಘಟನೆಯಲ್ಲಿ ಪೋಸ್ಟ್ ಸಿಕ್ಕಿದರೆ ಬರೀ ಪೋಸ್ಟ್ ಬಗ್ಗೆ ಹೇಳುವವರೇ ಜಾಸ್ತಿ.ಕೆಲಸ ಕಡಿಮೆ. ಆದರೆ ಅಹಿಂದ ಸಂಘಟನೆಯಲ್ಲಿರುವವರು ನಿರಂತರವಾಗಿ ಅಹಿಂದ ಸಮುದಾಯಗಳ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಸಂಘಟನೆಗೆ ಬಲ ತುಂಬಿ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುವಲ್ಲಿ ಶ್ರಮಿಸುತ್ತಿರುವುದು ನಿಜಕ್ಕೂ ಮೆಚ್ಚುಗೆಯ ವಿಷಯ ಎಂದರು.
ಅಹಿಂದ ತಾಲೂಕು ಅಧ್ಯಕ್ಷ ದಲ್ಲಾಲಿ ಕುಬೇರ ಮಾತನಾಡಿ, ಕಳೆದ 8 ವರ್ಷಗಳಿಂದ ಅಹಿಂದ ವರ್ಗಗಳಿಗೆ ಏಳಿಗೆಗೆ ಶ್ರಮಿಸಲಾಗುತ್ತಿದೆ.
ರಾಜ್ಯದ ಎಲ್ಲಾ ಶೋಷಿತರ ಪರವಾಗಿ ಹೋರಾಟ ಮಾಡಲು ಹಾಗೂ ನಾಡಿನ ಮುನ್ನಡೆಗಾಗಿ ಯುವ ಜನರನ್ನು ಸಂಘಟಿತರನ್ನಾಗಿಸುವ ಉದ್ದೇಶದಿಂದ ‘ಯುವ ಅಹಿಂದ’ ವೇದಿಕೆಯನ್ನು ಹುಟ್ಟು ಹಾಕಲಾಗುವುದು
ಸರಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸುವಲ್ಲಿ ನಿಸ್ವಾರ್ಥ ಸೇವೆ, ಹಿಂದುಳಿದ, ಅಸಂಖ್ಯಾತ, ದಲಿತ ಹಾಗೂ ಇತರೆ ದುರ್ಬಲ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಜಾಗೃತಿಗಾಗಿ ಈ ಸಂಘಟನೆ ಕಾರ್ಯನಿರ್ವಹಿಸಲಿದೆ,” ಎಂದರು.
ಜಾತಿಭೇದ ಮರೆತು ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು. ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟ ಜಾತಿಯವರು ಒಗ್ಗಟ್ಟಾಗಿ ಅವರ ಹಕ್ಕುಗಳನ್ನು ಪಡೆಯಬೇಕು. ದೌರ್ಜನ್ಯ ನಡೆದಾಗ ಅದರ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಶಾಸಕ ಗವಿಯಪ್ಪನವರು ನಿವೇಶನವಿಲ್ಲದವರಿಗೆ ನಿವೇಶನ, ಪಟ್ಟಾ ಇಲ್ಲದವರಿಗೆ ಪಟ್ಟಾ ಮಾಡಿಸಿ ಕೊಡಲು ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕಾಗಿ ನಮ್ಮ ನಿರಂತರ ಹೋರಾಟ ಮುಂದುವರೆಯುತ್ತದೆ ಎಂದರು.
ಜಾತಿಗಣತಿಯನ್ನು ಬಿಡುಗಡೆಗೂ ಮುನ್ನವೇ ಕೆಲವು ಮೇಲ್ವರ್ಗಗಳು ವಿರೋಧಿಸುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟವರು. ಅವರು ಕೂಡಲೇ ಜಾತಿಗಣತಿಯನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬಳಿಕ ಹುಡಾ ಮಾಜಿ ಅಧ್ಯಕ್ಷ ಆರ್.ಕೊಟ್ರೇಶ ಅವರಿಗೆ ಬೃಹತ್ ಹೂವಿನಹಾರ ಹಾಕಿ ಗೌರವಿಸಲಾಯಿತು.
ಇದೇ ವೇಳೆ ಪಾಪಿನಾಯಕನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಪಂಪಾಪತಿ ಇವರಿಗೆ ಆದೇಶ ಪತ್ರ ನೀಡಲಾಯಿತು.
ಈ ಸಂಧರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಆರ್.ಚೇತನರಾಜ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಎಚ್.ಎಸ್.ರಾಜು, ಹಿರಿಯ ಪತ್ರಕರ್ತ ವಿ.ಗಾಳೆಪ್ಪ, ಗ್ರಾ.ಪಂ.ಸದಸ್ಯ ಅಯ್ಯಪ್ಪ, ಕಾರಿಗನೂರು ಭಾಷಾ, ಬಿಸಾಟಿ ತಾಯಪ್ಪ, ಕೆ.ದೇವರಾಜ, ಕೇಶವ, ದಮ್ಮೂರು ಮಂಜುನಾಥ, ಆಟೋ ನಾಗರಾಜ, ಎಸ್.ನಾಗರಾಜ, ದಿಲ್ ಷದ್, ಲಕ್ಷ್ಮಿದೇವಿ, ಎಂ.ಗಣೇಶ, ಲಕ್ಷ್ಮಿಪತಿ, ಆನಂದ, ನೂರ್ ಬಾಷಾ, ಪಂಪಾಪತಿ, ನಾಗರಾಜ ಇದ್ದರು.