87103ffb-4ac2-4aff-9dfd-eb950df78787

ಪ್ರಾದೇಶಿಕ ತಾರತಮ್ಯ ಅಧ್ಯಯನಕ್ಕೆ ಆಯೋಗ ರಚನೆಗೆ

ಡಾ, ರಝಾಕ ಉಸ್ತಾದ ಸ್ವಾಗತ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೭- ಕರ್ನಾಟಕ ಸರಕಾರ ರಾಜ್ಯದಲ್ಲಿ ೨೩೩ ತಾಲ್ಲೂಕಗಳ ನಡುವೆ ಇರುವ ಪ್ರಾದೇಶಿಕ ತಾರತಮ್ಯ ಅಧ್ಯಯನ ಮಾಡಲು ಪ್ರೊ.ಗೋವಿಂದ ರಾವ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿರುವದನ್ನು ಸ್ವಾಗತಿಸುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಹಾಗೂ ಕಲ್ಯಾಣ ಕರ್ನಾಟಕದ  ಹೋರಾಟಗಾರ ಡಾ, ರಝಾಕ ಉಸ್ತಾದ ಹೇಳಿದ್ದಾರೆ.
ಈ ಕುರಿತು ಪ್ರಕಟನೆ ನೀಡಿದ್ದು ಡಾ.ಡಿ.ಎಂ.ನಂಜುಂಡಪ್ಪನವರ ವರದಿಯು ಹಳೆಯದಾಗಿದ್ದು, ಈ ನಡುವೆ ಸಾಕಷ್ಟು ಬದಲಾವಣೆಗಳು ಆಗಿರುವದು ಸಹ ವಿವಿಧ ವರದಿಗಳಲ್ಲಿ ಕಂಡು ಬಂದಿರುವದರಿಂದ ಹೊಸ ಆಯೋಗ ರಚನೆ ಮಾಡುವದು ಅನಿವಾರ್ಯ ಸಹ ಆಗಿತ್ತು. ಡಾ.ಡಿ.ಎಂ.ನಂಜುಂಡಪ್ಪನವರ ವರದಿ ಅನುಷ್ಠಾನದಿಂದ ಆಗಿರುವ ಬದಲಾವಣೆಯನ್ನು ಅಧ್ಯಯನ ಮಾಡಲು ೨೦೧೪ರಲ್ಲಿ ಧಾರಡಾವದ ಸಿ.ಎಂ.ಡಿ.ಆರ್.ಐ. ಸಂಸ್ಥೆಯ ಮೂಲಕ ಹಾಗೂ ೨೦೧೮ರಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದಿಂದ ವರದಿ ಪಡೆಯಲಾಗಿದೆ.

ಕರ್ನಾಟಕ ರಾಜ್ಯವು ಭೌಗೊಳಿಕವಾಗಿ ವಿವಿಧ ರಾಜ್ಯಗಳಿಂದ ಏಕೀಕರಣ ಸಂದರ್ಭದಲ್ಲಿ ಒಗ್ಗೂಡಿಸಲಾದ ರಾಜ್ಯವಾಗಿದ್ದ, ಎಲ್ಲಾ ಪ್ರದೇಶಗಳು ಏಕ ಪ್ರಕಾರ ಅಭಿವೃದ್ದಿ ಹೊಂದಿಲ್ಲವೆನ್ನುವದು ಹಲವಾರು ಸಂದರ್ಭದಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅದರಂತೆ, ಕರ್ನಾಟಕ ರಾಜ್ಯದಲ್ಲಿ ೨೦೦೦ನೇ ವರ್ಷದಲ್ಲಿ ೧೭೫ ತಾಲ್ಲೂಕುಗಳು ಇದ್ದು, ತಾಲ್ಲೂಕು ತಾಲ್ಲೂಕುಗಳ ನಡುವೆ, ಜಿಲ್ಲೆ-ಜಿಲ್ಲೆಗಳ ನಡುವೆ ಹಾಗೂ ಪ್ರದೇಶ-ಪ್ರದೇಶಗಳ ನಡುವೆ ಸಾಕಷ್ಟು ಅಭಿವೃದ್ದಿ ತಾರತಮ್ಯ ಇರುವ ಕುರಿತು ಅಧ್ಯಯನ ಮಾಡಲು ಅಂದಿನ ಸರಕಾರ ಡಾ.ಡಿ.ಎಂ.ನಂಜುಂಡಪ್ಪನವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು, ಸದರಿ ಸಮಿತಿಯು ೧೭೫ ತಾಲ್ಲೂಕುಗಳನ್ನು ಆಳವಾಗಿ ಅಧ್ಯಯನ ಮಾಡಿ ವರದಿಯನ್ನು ೨೦೦೨ರಲ್ಲಿ ಸರಕಾರಕ್ಕೆ ಸಲ್ಲಿಸಲಾಗಿತ್ತು, ಆ ವರದಿಯು ತಾಲ್ಲೂಕುಗಳನ್ನು ನಾಲ್ಕು ಭಾಗಗಳಾಗಿ ವರ್ಗೀಕರಿಸಿ, ಸಾಪೇಕ್ಷವಾಗಿ ಅಭಿವೃದ್ದಿ ಹೊಂದಿದ ೬೧ ತಾಲ್ಲೂಕುಗಳು, ಹಿಂದುಳಿದ ೩೫ ತಾಲ್ಲುಕುಗಳು, ಅತೀ ಹಿಂದುಳಿದ ೪೦ ತಾಲ್ಲೂಕುಗಳು ಹಾಗೂ ಅತ್ಯಂತ ಹಿಂದುಳಿದ ೩೯ ತಾಲ್ಲುಕುಗಳು ಎಂದು ವಿಂಗಡಿಸಿ, ಅವುಗಳ ಅಭಿವೃದ್ದಿಗೆ ಎಂಟು ವರ್ಷಗಳ ಸಮಗ್ರ ಯೋಜನೆಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಸರಕಾರ ೨೦೦೭-೦೮ನೇ ಸಾಲಿನಿಂದ ಸದರಿ ವರದಿಯ ಶಿಫಾರಸ್ಸಿನಂತೆ ವಿಶೇಷ ಅಭಿವೃದ್ದಿ ಯೋಜನೆಯನ್ನು ಜಾರಿಗೊಳಿಸಲು ಪ್ರಾರಂಭಿಸಲಾಗಿತ್ತು,
ಅದರಂತೆ, ವಾರ್ಷಿಕ ೨೦೦೦ ಕೋ.ರೂ ವಿಶೇಷ ಅನುದಾನ ಹಾಗೂ ಸಾಮಾನ್ಯ ಬಜೆಟ್ ಮೂಲಕ ವಾರ್ಷಿಕ ೨೦೦೦ ಕೋ.ರೂ ಸೇರಿದಂತೆ ಒಟ್ಟು ೩೨,೦೦೦ ಕೋ.ರೂ ಖರ್ಚು ಮಾಡಿದಲ್ಲಿ ಪ್ರಾದೇಶಿಕ ತಾರತಮ್ಯ ಸರಿಯಾಗಲಿದೆಎ ಂದು ಹೇಳಲಾಗಿತ್ತು, ಡಾ.ಡಿ.ಎಂ.ನಂಜುಂಡಪ್ಪನವರ ಶಿಫಾರಸ್ಸಿನಂತೆ ೨೦೦೭-೮ನೇ ಸಾಲಿನಿಂದ ಎಂಟು ವರ್ಷಗಳ ಅವಧಿ ೨೦೧೪-೧೫ನೇ ಸಾಲಿಗೆ ಮುಕ್ತಾಯವಾಗಲಿದೆ, ಈ ಎಂಟು ವರ್ಷಗಳಲ್ಲಿ ವಿಶೇಷ ಅನುದಾನ ೧೯೧೬೦.೭೮ ಕೋ.ರೂ ಖರ್ಚು ಮಾಡಲಾಗಿದೆ. ಅಲ್ಲದೇ ೨೦೧೫ರಲ್ಲಿ ಅಂದಿನ ಮುಖ್ಯ ಮಂತ್ರಿ ಸಿದ್ದರಾಮ್ಯನವರು ಡಾ.ಡಿ.ಎಂ.ನAಜುAಡಪ್ಪನವರ ವರದಿ ಅನುಷ್ಠಾನವನ್ನು ಮುಂದಿನ ಐದು ವರ್ಷಗಳವರೆಗೆ ಮುಂದುವರೆಸಲು ನಿರ್ಣಯಿಸಿದರು, ಮುಂದೆ ಬಿ.ಎಸ್.ಯಡಿಯೂರಪ್ಪನವರು ಕೇವಲ ಒಂದು ವರ್ಷ ಮುಂದುವರೆಸಿದ್ದರು, ನಂತರ ಬಂದ ಬಸವರಾಜ ಬೊಮ್ಮಾಯಿಯವರು ಸದರಿ ವರದಿ ಅನುಷ್ಠಾನ ಸ್ಥಗಿತಗೊಳಿಸದ್ದರು.

ಒಟ್ಟು ೧೪ ವರ್ಷ ಸರಕಾರ ಸದರಿ ವರದಿಯನ್ನು ಅನುಷ್ಠಾನ ಮಾಡಿದ್ದು, ಇದರ ಮೂಲಕ ಸುಮಾರು ೩೮,೨೪೨.೮೯ ಕೋ.ರೂ. ಅನುದಾನ ಖರ್ಚು ಮಾಡಲಾಗಿದೆ. ಅದರಂತೆ, ಸರಕಾರ ೨೦೧೮ರಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದಿಂದ ಪಡೆಯಲಾದ ವರದಿಯಂತೆ, ೮೦ ಅಭಿವೃದ್ದಿ ಹೊಂದಿದ ತಾಲ್ಲೂಕುಗಳು, ೪೩ ಹಿಂದುಳಿದ ತಾಲ್ಲೂಕುಗಳು, ೨೪ ಅತೀ ಹಿಂದುಳಿದ ತಾಲ್ಲುಕುಗಳು ಹಾಗೂ ೨೯ ಅತ್ಯಂತ ಹಿಂದುಳಿದ ತಾಲ್ಲುಕುಗಳು.ರಾಜ್ಯದ ಪ್ರತಿಯೊಂದು ತಾಲ್ಲುಕಗಳು ಅಭಿವೃದ್ದಿ ಹೊಂದುವದು ಅವರ ಹಕ್ಕಾಗಿದ್ದು, ಸರಕಾರ ಹಿಂದುಳಿದ ತಾಲ್ಲುಕಗಳ ಅಭಿವೃದ್ದಿಗೆ ಯೋಜನೆಗಳನ್ನು ರೂಪಸಿಬೇಕಿದೆ, ಆದ್ದರಿಂದ ಸರಕಾರ ಈಗ ರಚಿಸಿದ ಆಯೋಗವು ಸಮಗ್ರ ಅಧ್ಯಯನ ಮಾಡಿ ಕಾಲಮಿತಿಯೊಳಗೆ ವರದಿ ನೀಡಲು ಈ ಮೂಲಕ ಕೋರುತ್ತೇವೆ. ಸದರಿ ಆಯೋಗವು ಅಧ್ಯಯನ ಮಾಡುವಾಗ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಬೇಕು, ಅದರನ್ವಯ ಸಿಡಿಐ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಬೇಕು. ಇದು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಅಭಿವೃದ್ದಿಗೆ ಪೂರಕವಾಗಲಿದೆ, ಸರಕಾರ ಹಿಂದುಳಿದ ತಾಲ್ಲೂಕುಗಳು ಅಭಿವೃದ್ದಿಗೆ ಸೂಕ್ತ ಅನುದಾನ ಖರ್ಚು ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!