
ಭಯ ಮುಕ್ತರಾಗಿ ಪರೀಕ್ಷೆ ಎದುರಿಸಿ : ರಾಮಚಂದ್ರಗೌಡ ಬಿ ಗೊಂಡಬಾಳ
ಕರುನಾಡ ಬೆಳಗುಸುದ್ದಿ
ಅಳವಂಡಿ,19- ವಿಧ್ಯಾರ್ಥಿಗಳು ಸಮೀಪಿಸುತ್ತಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ರಾಮಚಂದ್ರಗೌಡ ಬಿ ಗೊಂಡಬಾಳ ಅವರು ಕಿವಿ ಮಾತು ಹೇಳಿದರು.
ಅವರು ಸಮೀಪದ ನೀರಲಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು, ಹೋಬಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಾ ಪರೀಕ್ಷೆಗಳನ್ನು ಲಘುವಾಗಿ ಪರಿಗಣಿಸಬಾರದು ಹಾಗಂತ ಭಯ, ಭೀತಿಯಿಂದ ಎದುರಿಸದೇ ಭಯ ಮುಕ್ತರಾಗಿ ಎದುರಿಸಲು ಸಲಹೆ ನೀಡಿದರು.
ಪರೀಕ್ಷಾ ಭಯ ನಿವಾರಣೆ ಕುರಿತು ಉಪನ್ಯಾಸ ನೀಡಿದ ರವಿಕುಮಾರ್ ಸಿ ಅವರು ಹಲವಾರು ಉದಾಹರಣೆಗಳನ್ನು ಕೊಡುತ್ತಲೇ ಮಕ್ಕಳು ಪರೀಕ್ಷೆ ಬರೆಯುವ ಕಲೆ ತಿಳಿಸಿಕೊಟ್ಟರು.
ನೀಲಪ್ಪ ಹಕ್ಕಂಡಿ ಅವರು ಹಾಸ್ಯ ಮಾಡುತ್ತಲೇ ಮಕ್ಕಳಿಗೆ ಪರೀಕ್ಷೆ ಬರೆಯುವ ಧೈರ್ಯ ತುಂಬಿದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಲ್ಲಪ್ಪ ಜುಮ್ಮಣ್ಣನವರ ಅವರು ಕನ್ನಡ ಸಾಹಿತ್ಯ ಪರಿಷತ್ತು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಭೀಮನಗೌಡ್ರು, ನಾಗರಾಜ ಗಾಳಿ, ಹೋಬಳಿ ಘಟಕದ ಅಧ್ಯಕ್ಷ ಸುರೇಶ್ ಸಂಗರಡ್ಡಿ, ಗೀತಾ ಡೊಳ್ಳಿನ, ಇತರರು ಉಪಸ್ಥಿತರಿದ್ದರು.