
????????????????????????????????????
2025 ಕ್ಕೆ ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸುವುದು ನಮ್ಮೆಲ್ಲರ ಗುರಿ : ನಲಿನ್ ಅತುಲ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ,27- 2025 ಕ್ಕೆ ಕ್ಷಯರೋಗ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸುವುದು ನಮ್ಮೆಲ್ಲರ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾದ “ವಿಶ್ವ ಕ್ಷಯರೋಗ ದಿನಾಚರಣೆ-2024’’ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷಯರೋಗದ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಕ್ಷಯರೋಗದ ಪತ್ತೆ ಹಾಗೂ ಚಿಕಿತ್ಸೆ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಅರಿವು ಮತ್ತು ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ.
ಕ್ಷಯರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ರೋಗಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಈ ಹಿನ್ನೆಲೆಯಲ್ಲಿ ರೋಗವನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ತಡೆಗಟ್ಟಬಹುದು. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಷಯರೋಗ ಮಾದರಿ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಕ್ಷಯರೋಗದ ಬಗ್ಗೆ ಹೆಚ್ಚಿನ ಪ್ರಚಾರ ಕಾರ್ಯವನ್ನು ಮಾಡಬೇಕು. ಕ್ಷಯರೋಗದ ನಿರ್ಮೂಲನೆಗಾಗಿ ಶ್ರಮಿಸಿದ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಲಾಗುತ್ತಿದ್ದು, ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಟಿ.ಲಿಂಗರಾಜು ಅವರು ಮಾತನಾಡಿ, ಕ್ಷಯರೋಗವು ಅಪೌಷ್ಠಿಕತೆಯಿಂದ ಬಳಲುತ್ತಿರುವವರಲ್ಲಿ ಕಂಡುಬರುತ್ತೆ. ಅಂತಹ ಜನರನ್ನು ಗುರುತಿಸಿ ಕ್ಷಯ ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಬೇಕು.
ಚಿಕಿತ್ಸೆ ಪಡೆಯುವ ಕ್ಷಯ ರೋಗಿಗಳಿಗೆ ಚಿಕಿತ್ಸೆ ಮುಗಿಯುವವರೆಗೆ ಪೌಷ್ಠಿಕ ಆಹಾರಕ್ಕಾಗಿ ಪ್ರತಿ ತಿಂಗಳು ರೂ.500 ಗಳನ್ನು ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯ ಈ ಯೋಜನೆಯ ಬಗ್ಗೆಯೂ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಕ್ಷಯರೋಗದ ನಿರ್ಮೂಲನೆಗಾಗಿ ಗ್ರಾಮ ಪಂಚಾಯತ್ ಮಟ್ಟದಿಂದ ಅರಿವು ಮತ್ತು ಜಾಗೃತಿಯನ್ನು ಮೂಡಿಸಲು ಶ್ರಮಿಸಬೇಕು. ಕ್ಷಯರೋಗದ ಬಗ್ಗೆ ಸಾರ್ವಜನಿಕರಲ್ಲಿರುವ ತಪ್ಪು ಕಲ್ಪನೆಗಳು ಹಾಗೂ ಮೂಢನಂಬಿಕೆಗಳನ್ನು ಹೋಗಲಾಡಿಸಬೇಕು.
ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸೂಕ್ತ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ ಡಾ.ಶಶಿಧರ ಎ. ಅವರು ಮಾತನಾಡಿ, ಕ್ಷಯರೋಗವು ಮೈಕೋ ಬ್ಯಾಕ್ಟಿರಿಯಂ ಟ್ಯೂಬರ್‌ಕ್ಯೂಲೋಸಿಸ್ ಎಂಬ ಸೂಕ್ಷಾö್ಮಣುವಿನಿಂದ ರೋಗಿಯು ಕೆಮ್ಮುವುದರಿಂದ ಮತ್ತು ಸೀನುವುದರಿಂದ ಹೊರಬರುವ ಉಗುಳಿನಿಂದ ಹರಡುತ್ತದೆ. ಸಾಮಾನ್ಯವಾಗಿ ಶ್ವಾಸಕೋಶಗಳಿಗೆ ಹಬ್ಬುವ ಈ ರೋಗವು ದೇಹದ ಇತರ ಭಾಗಗಳಿಗೂ ಹರಡಬಹುದು. ಪ್ರಮುಖವಾಗಿ ಶ್ವಾಸಕೋಶದ ಮತ್ತು ಶ್ವಾಸಕೋಶೇತರ ಕ್ಷಯ ಎಂದು ವಿಂಗಡಿಸಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ 2023ನೇ ಸಾಲಿಗೆ ಜಿಲ್ಲೆಯಲ್ಲಿ ಸರಕಾರಿ ವಲಯ-3,090, ಖಾಸಗಿ ವಲಯ-506 ಸೇರಿ ಒಂದು ವರ್ಷಕ್ಕೆ 3,596 ಕ್ಷಯರೋಗಿಗಳ ಪತ್ತೆಯ ಗುರಿಯನ್ನು ಹೊಂದಲಾಗಿದ್ದು, ಸರಕಾರಿ ವಲಯದಲ್ಲಿ 2,748 ಮತ್ತು ಖಾಸಗಿ ವಲಯದಲ್ಲಿ 128 ಸೇರಿ ಒಟ್ಟು 2,876 ಕ್ಷಯರೋಗಿಗಳು ಪತ್ತೆಯಾಗಿರುತ್ತಾರೆ. ಇನ್ನೂ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚಬೇಕಾಗಿದ್ದು, 86 ಬಹು ಔಷಧ ನಿರೋಧಕ ಕ್ಷಯ ರೋಗಿಗಳು ಹಾಗೂ 164 ಹೆಚ್.ಐ.ವಿ ಸೋಂಕಿತ ಟಿಬಿ ರೋಗಿಗಳು ಪತ್ತೆಯಾಗಿರುತ್ತಾರೆ. 2022ನೇ ಸಾಲಿಗೆ ಹೋಲಿಸಿದಾಗ 2023ನೇ ಸಾಲಿನಲ್ಲಿ ಕ್ಷಯರೋಗ ಪತ್ತೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ಷಯರೋಗದ ಹರಡುವಿಕೆಯನ್ನು ತಡೆಗಟ್ಟಲು ಹಮ್ಮಿಕೊಂಡಿರುವ ಅನೇಕ ಯೋಜನೆಗಳಾಗಿವೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 57 ಕಫ ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 45,031 ಪರೀಕ್ಷೆಗಳಾಗಿದ್ದು, 437 ಕ್ಷಯರೋಗಿಗಳು ದೃಢಪಟ್ಟಿರುತ್ತವೆ. ಜಿಲ್ಲೆಯಲ್ಲಿ 4 ಸಿಬಿ ನಾಟ್ ಕೇಂದ್ರಗಳು ಕೊಪ್ಪಳ ಜಿಲ್ಲಾ ಆಸ್ಪತ್ರೆ, ಗಂಗಾವತಿ ಉಪ ವಿಭಾಗ ಆಸ್ಪತ್ರೆ, ಕನಕಗಿರಿಯ ಸಮುದಾಯ ಆರೋಗ್ಯ ಕೇಂದ್ರ ಮತ್ತು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. 2023ನೇ ಸಾಲಿನಲ್ಲಿ ಸಿಬಿ ನಾಟ್ ಕೇಂದ್ರಗಳಲ್ಲಿ 12,349 ಪರೀಕ್ಷೆಗಳು ಆಗಿದ್ದು, ಅದರಲ್ಲಿ 1,204 ಕ್ಷಯರೋಗಿಗಳು ದೃಢಪಟ್ಟು, ಇದರಲ್ಲಿ 27 ಬಹು ಔಷಧ ನಿರೋಧಕ ಕ್ಷಯರೋಗಿಗಳಾಗಿ ಪತ್ತೆ ಮಾಡಿ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ.
ಇದರೊಂದಿಗೆ 3 ಟೂನಾಟ್ ಕೇಂದ್ರಗಳು ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆ, ಕುಕನೂರು ಸಮುದಾಯ ಆರೋಗ್ಯ ಕೇಂದ್ರ ಮತ್ತು ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಹೆಚ್ಚು ಕ್ಷಯರೋಗಿಗಳನ್ನು ಪತ್ತೆ ಮಾಡಲಾಗುತ್ತಿದೆ. 2023ನೇ ಸಾಲಿನಲ್ಲಿ ಟೂನಾಟ್ ಕೇಂದ್ರಗಳಲ್ಲಿ 5,368 ಪರೀಕ್ಷೆಗಳು ಆಗಿದ್ದು, ಅದರಲ್ಲಿ 276 ಕ್ಷಯರೋಗಿಗಳು ದೃಢಪಟ್ಟು ಇದರಲ್ಲಿ 4 ಬಹುಔಷಧ ನಿರೋಧಕ ಕ್ಷಯರೋಗಿಗಳಾಗಿ ಪತ್ತೆ ಮಾಡಿ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಪ್ರಕಾಶ ಕೆ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ರವೀಂದ್ರನಾಥ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳಾದ ಡಾ.ಪ್ರಕಾಶ ಹೆಚ್., ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ.ವೆಂಕಟೇಶ, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ರಾಮಾಂಜಿನೇಯ, ಡಾ.ಗೌರಿಶಂಕರ, ಡಾ.ಆನಂದ ಗೋಟೂರು ಸೇರಿದಂತೆ ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಕಾರ್ಯಕ್ರಮದ ಅಂಗವಾಗಿ ಕ್ಷಯರೋಗ ನಿರ್ಮೂಲನೆಗಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕು ಮಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸಿದ ವೈದ್ಯಾಧಿಕಾರಿಗಳಿಗೆ ಮತ್ತು ಇತರೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.