
ಕೈಮಗ್ಗ ನೇಕಾರರ ಸಹಕಾರ ಉತ್ಪತ್ತಿ ಮತ್ತು ಮಾರಾಟ ಸಂಘದ ಅಧ್ಯಕ್ಷರಾಗಿ ಎ.ರಾಮಕೃಷ್ಣ ಅಧಿಕಾರ ಸ್ವೀಕಾರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 28- ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಬಳ್ಳಾರಿ ಜಿಲ್ಲಾ ಕೈಮಗ್ಗ ನೇಕಾರರ ಸಹಕಾರ ಉತ್ಪತ್ತಿ ಮತ್ತು ಮಾರಾಟ ಸಂಘಕ್ಕೆ ೬೦ ವರ್ಷಗಳ ಕಾಲದ ಪ್ರವೃತ್ತಿಯಲ್ಲಿ ಪ್ರಥಮ ಬಾರಿಗೆ ಸೆಪ್ಟೆಂಬರ್ ೮ರಂದು ನಡೆದ ಚುನಾವಣೆಯಲ್ಲಿ ೧೧ ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಈ ಚುನಾವಣೆಯಲ್ಲಿ ಆಯ್ಕೆಯಾದ ೧೧ ಸದಸ್ಯರಲ್ಲಿ, ಅಧ್ಯಕ್ಷರ ಸ್ಥಾನಕ್ಕೆ ಎ.ರಾಮಕೃಷ್ಣನಿಗೆ ಮತ ಹಾಕಲಾಗಿದೆ. ಅವರು ಇಂದು ಅಧಿಕಾರ ಸ್ವೀಕಾರ ಮಾಡಿ, ಮೂರನೇ ಬಾರಿಗೆ ಸಂಘದ ಅಧ್ಯಕ್ಷತ್ವವನ್ನು ವಹಿಸಿದ್ದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ರಾಮಕೃಷ್ಣ, “ನಮ್ಮ ಕೈಮಗ್ಗ ನೇಕಾರರ ಸಂಘ ಸುಮಾರು ಆರು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಈ ಕಾಲದಲ್ಲಿ ಕೇವಲ ಕೈಮಗ್ಗದಿಂದ ಬಟ್ಟೆಗಳ ಉತ್ಪಾದನೆ ನಡೆಯುತ್ತಿದೆ. ಇದರಿಂದ ಉತ್ಪಾದನೆ ತೀರ ಕಡಿಮೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಪವರ್ ಲೂಮ್ಸ್ ಅಳವಡಿಸುವ ಮೂಲಕ ಎಲ್ಲಾ ಕಾರ್ಮಿಕರಿಗೆ ಕೆಲಸ ಒದಗಿಸಲಾಗುವುದು, ಮತ್ತು ಪ್ರತಿಯೊಬ್ಬ ಬಟ್ಟೆ ನೇಕಾರರಿಗೆ ಪ್ರತಿ ದಿನ ಕನಿಷ್ಠ ೧೦೦೦ ರೂಪಾಯಿಗಳ ಕೂಲಿ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಅವರು ಸಂಘದ ಆಸ್ತಿ ರಕ್ಷಣೆ ಮತ್ತು ವಿಸ್ತರಣೆ ಸೇರಿದಂತೆ ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮ ವಹಿಸುವುದಾಗಿ ಪ್ರತಿಜ್ಞೆ ನೀಡಿದರು.
ಈ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ನಿರ್ದೇಶಕರಾದ ಪದ್ಮಾವತಿ.ಬಿ ವದ್ದಿಲ್ಲ, ಲಕ್ಷ್ಮಿದೇವಿ, ಲಕ್ಷ್ಮಿ ಪ್ರೇಮಿಳ, ಲಕ್ಷ್ಮೀದೇವಿ.ಎಸ್ ಜಿಂಕಾ, ಲಕ್ಷ್ಮಿದೇವಿ, ರಾಜ.ಕೆ.ಎನ್, ಶೀಲಾ ಚಿನ್ನ ಬ್ರಹ್ಮಯ್ಯ, ಮುರಳಿ.ಜಿ, ಕೊನಯ್ಯ.ಸಿ, ಕಿರೀಟಪ್ಪ.ಆರ್ ಹಾಗೂ ಮುಖಂಡರುಗಳಾದ ಗುರುಸ್ವಾಮಿ, ಕಿರಣ್ ಕುಮಾರ್, ಅಡ್ಡಿಗೇರಿ ರಾಮಣ್ಣ, ಅರ್ಜುನ್ ರೆಡ್ಡಿ, ಓಬಳಪತಿ, ವೀರೇಶ್, ಮಾರೆಪ್ಪ, ಮಂಜುನಾಥ್, ನಾಗಪ್ಪ ಯಾದವ್ ಮತ್ತು ಮೊಹಮ್ಮದ್, ಶಿವ ಸೇರಿದಂತೆ ಇತರ ಉಪಸ್ಥಿತರಿದ್ದರು.