
ಮಾಜಿ ಶಾಸಕ ದಢೇಸುಗೂರು ನೇತೃತ್ವದಲ್ಲಿ ಠಾಣೆಗೆ ಮುಂದೆ ಧರಣಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 27- ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರನ್ನು ವಶಕ್ಕೆ ಪಡೆದು ಅಕ್ರಮವಾಗಿ ಠಾಣೆಯಲ್ಲಿ ಕೂಡಿಹಾಕಲಾಗಿದೆ ಎಂದು ಆರೋಪಿಸಿ ಜೀರಾಳ-ಕಲ್ಗುಡಿ ಗ್ರಾಮದ ನೂರಾರು ಜನ ಮಾಜಿ ಶಾಸಕ ಬಸವರಾಜ ದಢೇಸ್ಗೂರು ನೇತೃತ್ವದಲ್ಲಿ ಗಂಗಾವತಿ ಗ್ರಾಮೀಣ ಠಾಣೆ ಮುಂದೆ ಧರಣಿ ನಡೆಸಿದ ಘಟನೆ ನಡೆದಿದೆ.
ಇಲ್ಲಿನ ಗ್ರಾಮೀಣ ಠಾಣೆಯ ಆವರಣದಲ್ಲಿ ಜಮಾಯಿಸಿದ್ದ ಗ್ರಾಮದ ಯುವಕರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಮಾಜಿ ಶಾಸಕ ಬಸವರಾಜ ದಢೇಸ್ಗೂರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೆ ಠಾಣೆಗೆ ನುಗ್ಗಲು ಯತ್ನಿಸಿದ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ಕೆಲಕಾಲ ಸ್ಥಳದಲ್ಲಿ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿತ್ತು ಆದರೆ ಪೊಲೀಸರು, ಮಾಜಿ ಶಾಸಕರನ್ನು ಸೇರಿದಂತೆ ಠಾಣೆಗೆ ನುಗ್ಗಲು ಯತ್ನಿಸಿದ ಗ್ರಾಮಸ್ಥರನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದರು.
ಜೀರಾಳ-ಕಲ್ಗುಡಿ ಗ್ರಾಮದಲ್ಲಿ ಭಾನುವಾರ ನಡೆದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿಯಾಗಿತ್ತು. ಹೀಗಾಗಿ ಸಚಿವ ತಂಗಡಗಿ, ಸ್ಥಳದಲ್ಲಿದ್ದ ಪೊಲೀಸರಿಗೆ ಗ್ರಾಮ ಪಂಚಾಯಿತಿ ಸದಸ್ಯ ಯಲ್ಲಪ್ಪ ಎಂಬುವವರನ್ನು ಕರೆದೊಯ್ಯುವಂತೆ ನೀಡಿದ ಸೂಚನೆ ಮೆರೆಗೆ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ಕರೆತಂದು ಕೂರಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೆ ಗ್ರಾಮದ ನೂರಾರು ಯುವಕರು ಗಂಗಾವತಿ ಗ್ರಾಮೀಣ ಠಾಣೆಯ ಮುಂದೆ ಜಮಾಯಿಸಿದರು.
ಬಿಟ್ಟುಕಳಿಸಿ ಎಂದು ಅವಾಜ್ : ಬಳಿಕ ಈ ಬಗ್ಗೆ ಮಾತನಾಡಿದ ಮಾಜಿ ಶಾಸಕ ಬಸವರಾಜ ಏನು ತಪ್ಪು ಮಾಡದ ನಮ್ಮ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಪೊಲೀಸರು ಕರೆತಂದು ಕೂಡಿ ಹಾಕಿದ್ದಾರೆ ಗ್ರಾಮಕ್ಕೆ ರಸ್ತೆ ಬೇಕು ಎಂದು ಸಚಿವರನ್ನು ಕೇಳಿದ್ದು ತಪ್ಪಾ..? ಕೇಳಿದ ಮಾತ್ರಕ್ಕೆ ಅರೆಸ್ಟ್ ಮಾಡಿಸುತ್ತಾರಾ ಎಂದು ಪ್ರಶ್ನಿಸಿದರು.
ಪಂಚಾಯಿತಿ ಸದಸ್ಯರ ವಿರುದ್ಧ ದೂರು ದಾಖಲಿಸಿದರೆ ನಾವು ಕೂಡ ಸಚಿವ ತಂಗಡಗಿ ವಿರುದ್ಧ ದೂರು ನೀಡುತ್ತೇವೆ. ಎಫ್‌ಐಆರ್ ಮಾಡಬೇಕು. ಇಲ್ಲ ಕೂಡಿ ಹಾಕಿದ ಸದಸ್ಯನನ್ನು ಕೂಡಲೆ ಬಿಟ್ಟು ಕಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವ್ಯಕ್ತಿಯಿಂದ ಮುಚ್ಚಳಿಕೆ ಬರೆಸಿಕೊಂಡು ಕಳಿಸುತ್ತೇವೆ ಎಂದು ಪೊಲೀಸರು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಶಾಸಕ ಬಸವರಾಜ ಧಡೆಸೂಗುರ ಪೂರ್ವ ಷರತ್ತುಗಳಿಲ್ಲದೆ ಬಿಟ್ಟುಕಳಿಸಬೇಕು ಇಲ್ಲವಾದಲ್ಲಿ ಠಾಣೆಯ ಆವರಣದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪಂಚಾಯಿತಿ ಸದಸ್ಯನನ್ನು ಪೊಲೀಸರು ಬಿಟ್ಟುಕಳಿಸಿದರು.