
ಪ್ರಜಾ ವೇದಿಕೆಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾಂಕೇತಿಕ ಧರಣಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 10- ನಗರದಲ್ಲಿನ ನಿಜವಾದ ಫಲಾನುಗಳಿಗೆ ಹಲವು ವರ್ಷಗಳಿಂದ ಅನ್ಯಾಯವಾಗುತ್ತಿದ್ದು ಬಡ ಜನರಿಗೆ ಬರಬೇಕಾಗಿದ್ದ ಸೌಲಭ್ಯಗಳನ್ನು ಸರ್ಕಾರ ಕೂಡಲೇ ಒದಗಿಸಿಕೊಡಬೇಕೆಂದು ವಿಜಯನಗರ ಪ್ರಜಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ವೈ. ಗೋವಿಂದರಾಜ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಅವರು ನಗರದ ತಾಲೂಕು ತಹಶೀಲ್ದಾರ್ ಕಚೇರಿ ಮುಂದೆ ನೂರಾರು ನಾಗರಿಕರೊಂದಿಗೆ ಗುರುವಾರ ಸಾಂಕೇತಿಕ ಧರಣಿ ನಡೆಸಿ ಮಾತನಾಡಿ ಎಲ್ಲಾ ರಾಜಕೀಯ ನಾಯಕರು ಜನರನ್ನು ತಮ್ಮ ತಮ್ಮ ವೋಟು ಬ್ಯಾಂಕ್ ಗಳಾಗಿ ಮಾಡಿಕೊಂಡಿದ್ದಾರೆ, ಹಾಲಿ ಮತ್ತು ಮಾಜಿ ಶಾಸಕರಲ್ಲಿ ಸಾರ್ವಜನಿಕರ ಯಾವುದೇ ಕಾಳಜಿ ಹೊಂದಿಲ್ಲ, ಜನರು ಅವರ ಮನೆಗಳಿಗೆ ಅಲೆದಾಡುತ್ತಿದ್ದಾರೆ ವಿನಹ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ ಕೆಲಸ ಮಾಡದ ಶಾಸಕರನ್ನು ಜನರು ಧಿಕ್ಕರಿಸಬೇಕು ಶಾಸಕರು ಮತ್ತು ಜಿಲ್ಲಾಧಿಕಾರಿಗಳು ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಮೂಲಕ ಕೇಳುತ್ತಾ ಒಂದು ವೇಳೆ ವಿಫಲವಾದಲ್ಲಿ ಹೊಸಪೇಟೆ ನಗರದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ವಿಜಯನಗರ ಪ್ರಜಾ ವೇದಿಕೆಯಿಂದ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮನವಿಯಲ್ಲಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದಿಂದ 2014ನೇ ಸಾಲಿನಲ್ಲಿ ಹೊಸಪೇಟೆ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿಗಳನ್ನು ನಿವೇಶನ ಬೇಡಿಕೆ ಹೆಸರಿನಲ್ಲಿ ಹಣ ಸಂಗ್ರಹಿಸಿ ಇದುವರೆಗೂ ಯಾವುದೇ ತರಹದ ನಿವೇಶನ ವಿನ್ಯಾಸ ರಚನೆ ಮಾಡದೇ ವಿಳಂಬ ನೀಡಿ ಅನುಸರಿಸಿ ಜನರಿಗೆ ವಂಚಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ಪ್ರಾಧಿಕಾರಕ್ಕೆ ಹಣ ಪಾವತಿಸಿದ ಫಲಾನುಭವಿಗಳಿಗೆ ನಿವೇಶನ ವಿನ್ಯಾಸ ರಚನೆ ಮಾಡಿ ನಿವೇಶನ ಹಂಚಿಕೆಯಾಗಬೇಕು.
ಸರ್ಕಾರದ ಆದೇಶದಂತೆ 1992ರಲ್ಲಿ ಹೊಸಪೇಟೆ 100-ಹಾಸಿಗೆ ಆಸ್ಪತ್ರೆಯಲ್ಲಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ಹೊಸಪೇಟೆ ತಾಲೂಕಿ 76 ಬಡ ಮಹಿಳೆಯರಿಗೆ ಕಾರಿಗನೂರು ಸರ್ವೆ ನಂ : 190, 191ರಲ್ಲಿ 30*40ಅಳತೆಯ ನಿವೇಶನ ನೀಡಿದ್ದು, ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳು ಮೂಲಭೂತ ಸೌಕರ್ಯಗಳೂ ಕಲ್ಪಿಸದೇ ಅತಂತ್ರ ಪರಿಸ್ಥಿತಿಯಲ್ಲಿ ಇದ್ದು ನಿವೇಶನ ನೀಡಿದರು ನಿವೇಶನ ಇಲ್ಲದಂತಾಗಿದೆ. ಈ 76 ಬಡ ಮಹಿಳಾ ಫಲಾನುಭವಿಗಳಿಗೆ ನಿವೇಶನ ಗುರುತಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು.
ಹೊಸಪೇಟೆ ನಗರದ ಸಂಕ್ಷಪುರ ಜೆ.ಪಿ.ನಗರಕ್ಕೆ ಸಂಬಧಿಸಿದ ಸರ್ವೆ ನಂ : 123ರಲ್ಲಿ ಆಶ್ರಯ ಕಾಲೋನಿಯಲ್ಲಿ ಕಳೆದ 30 ವರ್ಷಗಳಿಂದ ಆಶ್ರಯ ಮನೆಗಳಲ್ಲಿ ವಾಸಿಸುವ ಬಡಜನರಿಗೆ ಹಕ್ಕು ಪತ್ರ ನೀಡಲು ಸರ್ಕಾರದ ಆದೇಶ ಇದ್ದರು ನಗರಸಭೆ ಠರಾವು ಮಾಡಿದರು ಇದುವರೆಗೂ ನಗರಸಭೆ ವತಿಯಿಂದ ಹಬ್ಬ ಪತ್ರ ನೀಡಿರುವುದಿಲ್ಲ. ಈ ಬಡ ಕುಟುಂಬಗಳ ಹಕ್ಕು ಪತ್ರ ವಿತರಣೆ ಆಗಬೇಕು.
ಚಿತ್ತವಾಡಿಗಿ ಐ.ಎಸ್.ಆರ್.ಕಾರ್ಖಾನೆ ಹೊಸಪೇಟೆ ತಾಲೂಕು ಜನರಿಗೆ ಜೀವನಾಡಿ ಆಗಿದ್ದು ಇತ್ತೀಚಿನ ವರ್ಷಗಳಿಂದ ಕಾರ್ಖಾನೆ ಸ್ಥಗಿತಗೊಂಡಿದ್ದು, ಇದರಿಂದ ರೈತರು, ಕಾರ್ಮಿಕರು, ವ್ಯಾಪಾರಸ್ತರು, ಸಾರ್ವಜನಿಕರಿಗೆ ಬಹಳ ತೊಂದರೆಯಾಗಿರುವುದರಿಂದ ಸರ್ಕಾರ ಮಧ್ಯವಹಿಸಿ ಕಾರ್ಖಾನೆಗೆ ಮಾಲೀಕರು, ರೈತರು, ಕಾರ್ಮಿಕರನ್ನು ಒಂದುಗೂಡಿಸಿ ಐ.ಎಸ್.ಆರ್.ಕಾರ್ಖಾನೆಯನ್ನು ಪುನರ್ ಆರಂಭಿಸಬೇಕೆಂದು ತಾವುಗಳು ಸರ್ಕಾರದ ಗಮನಕ್ಕೆ ತರಬೇಕೆಂದು ವಿನಂತಿಸುತ್ತೇವೆ.
ಹೊಸಪೇಟೆ ತಾಲೂಕಿನ, 35 ವಾರ್ಡ್‌ಗಳಲ್ಲಿ ವಾಸಿಸುವ ಸ್ಲಂ ಜನರಿಗೆ ನಿವೇಶನ ನೀಡಬೇಕೆಂದು ಬಹುದಿನಗಳ ಬೇಡಿಕೆಯಾಗಿದ್ದು, ಹಲವು ಬಾರಿ ಮನವಿ ಸಲ್ಲಿಸಿದರು. ನಗರಸಭೆಯು ಇದುವರೆಗೂ ಕಳೆದ 23ವರ್ಷಗಳಿಂದ ಸ್ಲಂ ಜನರಿಗೆ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ನೀಡಿರುವುದಿಲ್ಲ.
ಈ ಎಲ್ಲಾ ಬೇಡಿಕೆಗಳು ಜನರಿಗೆ ನ್ಯಾಯ ದೊರಕಿಸಿಕೊಡುವುದರ ಮುಖಾಂತರ ಕಾರ್ಯಧಕ್ಷತೆಗೆ ಹೆಸರುವಾಸಿಯಾಗಿರುವ ತಾವುಗಳು ಹೊಸಪೇಟೆ ನಗರ ಜನತೆಯ ಈ ಮೇಲಿನ ಸಮಸ್ಯೆಗಳನ್ನು ಪರಿಗಣಿಸುವ ಮೂಲಕ ಹಕ್ಕು ಪತ್ರ ಮತ್ತು ಖಾಲಿ ನಿವೇಶನ ಮತ್ತು ಐ.ಎಸ್.ಆರ್. ಕಾರ್ಖಾನೆ ಪುನರ್ ಆರಂಭಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಮಲ್ಲೇಶ್ ಕೋಗಳಿ, ಅಕ್ಕಮ್ಮ, ಬಸವರಾಜ, ಗಾದಿಲಿಂಗ, ಚಂದ್ ಬಾಷ, ಯಂಕಮ್ಮ, ಭರತ್ ಶೆಟ್ಟಿ, ಲಿಂಗಪ್ಪ, ದಾನಮ್ಮ, ಮನ್ಸೂರ್, ಶರತ್ ಭಾಬು, ಡ್ರೈವರ್ ನಿಂಗಪ್ಪ, ಗಂಟೆ ಸೋಮಶೇಖರ್, ಶಾಮರಾಜ್, ಇರ್ಫಾನ್ ಮುಂತಾದವರು ಹೋರಾಟದಲ್ಲಿ ಭಾಗಿಯಾಗಿದ್ದರು.