1

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ಮಾನಸಿಕ ಒತ್ತಡಕ್ಕೆ ಒಳಗಾಗದೆ ಕಾರ್ಯನಿರ್ವಹಿಸಿ : ರಾಹುಲ್ ರತ್ನಂ ಪಾಂಡೆಯ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 10- ಮಾನಸಿಕ ಆರೋಗ್ಯ ಪ್ರತಿಯೊಬ್ಬರ ಹಕ್ಕಾಗಿದ್ದು, ಎಲ್ಲಾ ನೌಕರರು ಮಾನಸಿಕ ಒತ್ತಡಕ್ಕೆ ಒಳಗಾಗದೆ ಕಾರ್ಯನಿರ್ವಹಿಸಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಸಲಹೆ ನೀಡಿದರು.

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ ೧೦ ರಂದು ಜಿಲ್ಲಾ ಪಂಚಾಯತನ ಜೆ.ಹೆಚ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-೨೦೨೪ರ ಮಾನಸಿಕ ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾನಸಿಕತೆ ಎಂಬುವುದು ದೊಡ್ಡ ಸಮಸ್ಯೆಯಲ್ಲ, ಇದು ಎಲ್ಲರಲೂ ಸಾಮಾನ್ಯವಾಗಿರುತ್ತದೆ. ಆದರೆ, ಮಾನಸಿಕ ಆರೋಗ್ಯದಲ್ಲಿ ನಿರ್ಲಕ್ಷ್ಯ ಬೇಡ. ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಸಹ ಅಷ್ಟೇ ಮುಖ್ಯವಾಗಿದೆ. ಎರಡನ್ನು ಸಮತೋಲನವಾಗಿ ಕಾಪಾಡಿಕೊಂಡು ಹೋಗಬೇಕು. ಮಾನಸಿಕ ಖಾಯಿಲೆಯನ್ನು ನಿರ್ಲಕ್ಷತನ ಮಾಡಬಾರದು. ಪ್ರತಿ ಸಮಸ್ಯೆಗೆ ಪರಿಹಾರ ಇದ್ದೆ ಇರುತ್ತದೆ, ಇನ್ನೊಬ್ಬರ ಜೊತೆ ಹಂಚಿಕೊಳ್ಳಬೇಕು. ಕುಟುಂಬದಲ್ಲಿನ ಸದಸ್ಯರೊಂದಿಗೆ ಪ್ರೀತಿಯಿಂದ ಮಾತನಾಡುವುದರಿಂದ ನೆಮ್ಮದಿ ಜೀವನ ಮತ್ತು ಆರೋಗ್ಯದಿಂದ ಇರಬಹುದು. ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬೇಕು. ವೈಯಕ್ತಿಕ ಕೆಲಸ ಮತ್ತು ಕಾರ್ಯ ನಿರ್ವಹಿಸುವಂತಹ ಸ್ಥಳಗಳಲ್ಲಿ ಸರಿಯಾದ ರೀತಿಯಲ್ಲಿ ಜವಾಬ್ದಾರಿ ಮತ್ತು ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕೆಲಸ ಮಾಡಿ. ಯಾವುದೇ ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗಬಾರದು ಎಂದರು.

ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ್ ದರ್ಗದ ಅವರು ಮಾತನಾಡಿ, ಕೆಲಸ ನಿರ್ವಹಿಸುವಂತಹ ಸ್ಥಳದಲ್ಲಿ ಒಳ್ಳೆಯ ವಾತಾವರಣ ಮತ್ತು ಮಾಡುವಂತಹ ಕೆಲಸದಲ್ಲಿ ಪ್ರಾಮಾಣಿಕತೆ, ಶಿಸ್ತು, ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬರಲ್ಲಿ ಒಳ್ಳೆಯತನ ಕಾಣುವುದರಿಂದ ನೆಮ್ಮದಿಯ ಜೀವನ ನಡೆಸಬಹುದು. ಮನಸ್ಸು ನಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಯೋಗ, ಧ್ಯಾನ ಮಾಡುವುದು ಸೂಕ್ತವಾಗಿದ್ದು, ಇದರಿಂದ ಉತ್ತಮ ಆರೋಗ್ಯವು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಲಿಂಗರಾಜು ಟಿ ಅವರು ಮಾತನಾಡಿ, ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಎಲ್ಲರನ್ನೂ ಪರಸ್ಪರ ಗೌರವದಿಂದ ಕಾಣಬೇಕು. ಮೆದಳುನಲ್ಲಿರುವ ರಾಸಾಯನಿಕ ಬದಲಾವಣೆ, ಮಾದಕ ವಸ್ತುಗಳಾದ ಗಾಂಜಾ, ಅಫೀಮ್ ಹಾಗೂ ಆಲ್ಕೋಹಾಲು ಸೇವನೆ ಮತ್ತು ಮೆದುಳಿಗೆ ಸಂಬAಧಿಸಿದ ಸೋಂಕು, ಗಡ್ಡೆ, ಪೆಟ್ಟು, ಕುಟುಂಬ, ಹಣಕಾಸು, ಉದ್ಯೋಗ, ರೀತಿ ನೀತಿಗಳ ಗೊಂದಲಗಳು ಮಾನಸಿಕ ರೋಗಕ್ಕೆ ಮುಖ್ಯ ಕಾರಣ. ಮಾನಸಿಕ ಖಾಯಿಲೆ ಬಗ್ಗೆ ಯಾರು ಕೂಡ ನಿರ್ಲಕ್ಷ್ಯ ಮಾಡಬಾರದು. ಮೊದನೇ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಬಾಳಬೇಕು ಎಂದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಗಳು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ ಹೆಚ್.ಪ್ರಕಾಶ ಅವರು ಮಾತನಾಡಿ, ಪ್ರತಿ ವರ್ಷ ಅಕ್ಟೋಬರ್ ೧೦ ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಆಚರಿಸಲಾಗುತ್ತದೆ. “ಇದು ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ” ಎಂಬುವುದು ಈ ವರ್ಷದ ಘೋಷವಾಕ್ಯವಾಗಿದೆ. ಮಾನಸಿಕ ಖಾಯಿಲೆಗೂ ಒಂದು ಚಿಕಿತ್ಸೆ ಇದೆ, ಮಾನಸಿಕ ಖಾಯಿಲೆಯಿಂದ ಹೊರ ಬರಬೇಕೆಂದರೆ ಒತ್ತಡ ನಿರ್ವಹಣೆ ಮಾಡಬೇಕು. ಈ ಖಾಯಿಲೆ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯರಾದ ಡಾ.ಲಕ್ಷ್ಮಿದೇವಿ ಎಂ ಪಾಟೀಲ ಅವರು ವಿಶೇಷ ಉಪನ್ಯಾಸ ನೀಡಿ, ಕೆಲಸದ ಸ್ಥಳದಲ್ಲಿ ಧನಾತ್ಮಕ ವಾತಾವರಣವು ಅತೀ ಮುಖ್ಯ ಪಾತ್ರವಹಿಸುತ್ತದೆ. ಇದರಿಂದ ಒತ್ತಡ ನಿರ್ವಹಣೆಯು ಸರಳವಾಗುತ್ತದೆ. ವೈಯಕ್ತಿಯ ಕೌಶಲ್ಯ ಅಭಿವೃದ್ಧಿಯು ಕಾರ್ಯಕ್ಷಮತೆಯನ್ನು ಹೆಚ್ಚುಸುವುದರಲ್ಲಿ ಸಹಕಾರಿಯಾಗುತ್ತದೆ. ಪರಸ್ಪರ ವಿಷಯಗಳ ವಿನಿಮಯ ಮಾನಸಿಕ ಗೊಂದಲ ಹಾಗೂ ಒತ್ತಡವನ್ನು ನಿಭಾಯಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ವಿವರವಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಪ್ರಕಾಶ ವಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ವೆಂಕಟೇಶ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!