
ಹೋರಾಟ ನಿರತ ಬಾಂಗ್ಲಾದೇಶ ವಿದ್ಯಾರ್ಥಿಗಳಿಗೆ ಎಐಡಿಎಸ್‌ಓ ಬೆಂಬಲ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 27- ಎಐಡಿಎಸ್‌ಓ ನೇತೃತ್ವದಲ್ಲಿ ಬಾಂಗ್ಲಾದೇಶದ ಹೋರಾಟನಿರತ ವಿದ್ಯಾರ್ಥಿಗಳ ಬೆಂಬಲವಾಗಿ ಇಂದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಎಐಡಿಎಸ್‌ಓ ರಾಜ್ಯ ಉಪಾಧ್ಯಕ್ಷರಲ್ಲೊಬ್ಬರಾದ ಅಭಯಾ ದಿವಾಕರ್ ಅವರು ಮಾತನಾಡಿ, ಕಳೆದ 20 ದಿನಗಳಿಂದಲೂ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಬಾಂಗ್ಲಾದೇಶದ ಸರ್ಕಾರವು ಪೈಶಾಚಿಕ ದಾಳಿಯನ್ನು ನಡೆಸುತ್ತಿದೆ.
ಇದುವರೆಗಿನ ಹೋರಾಟದಲ್ಲಿ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹುತಾತ್ಮ ರಾಗಿದ್ದಾರೆ. ಆಡಳಿತ ಸರ್ಕಾರವು ಸಮಸ್ಯೆಯನ್ನು ಪ್ರಜಾತಾಂತ್ರಿಕವಾಗಿ ಬಗೆಹರಿಸುವುದರ ಬದಲಾಗಿ ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕುವ ಫ್ಯಾಸಿಸ್ಟ್ ಕ್ರಮಗಳನ್ನು ಕೈಗೊಂಡಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ಕಾಲಘಟ್ಟದಲ್ಲೂ ಪ್ರತಿ ಅನ್ಯಾಯದ ವಿರುದ್ಧ ವಿದ್ಯಾರ್ಥಿಗಳು ಅಭೂತಪೂರ್ವ ಪಾತ್ರ ವಹಿಸಿದ್ದಾರೆ.
ಎಲ್ಲಾ ಹೋರಾಟದಲ್ಲೂ ಆಳ್ವಿಕರ ಎದೆಗೆ ಎದೆಕೊಟ್ಟು ಹೋರಾಟ ನಡೆಸಿದ್ದಾರೆ. ಪ್ರಸ್ತುತ ಬಾಂಗ್ಲದೇಶದ ವಿದ್ಯಾರ್ಥಿಗಳು ತೀವ್ರ ನಿರುದ್ಯೋಗ, ಹಾಗೂ ಅವೈಜ್ಜ಼ಾನಿಕ ಕೋಟಾದ ವಿರುದ್ದ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪ್ರಜಾತಾಂತ್ರಿಕ ವೇಷ ಧರಿಸಿರುವ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಕ್ ಹಸೀನ ಅವರು ಫ್ಯಾಸಿಸ್ಟ್ ರೂಪ ತಾಳಿದ್ದಾರೆ.ಇಂತಹ ಪರಿಸ್ಥಿಯಲ್ಲೂ ವಿದ್ಯಾರ್ಥಿಗಳು ಹೋರಾಟವನ್ನು ಬಲಿಷ್ಟಗೊಳಿಸುತ್ತಿರುವುದು ವಿದ್ಯಾರ್ಥಿ ಸಮೂಹಕ್ಕೆ ಸ್ಪೂರ್ತಿದಾಯಕವಾಗಿದೆ.
ಹೋರಾಟ ನಿರತ ವಿದ್ಯಾರ್ಥಿಗಳು ಕೇವಲ ಒಂದು ಬೇಡಿಕೆಗೆ ಬೀದಿಗೆ ಬಂದಿಲ್ಲ, ಬದಲಾಗಿ ವ್ಯವಸ್ಥೆಯ ಲೋಪವನ್ನು ಬಯಲಿಗೆಳೆಯಲು ಬಂದಿರುವುದನ್ನು ನಾವು ಗ್ರಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಗಡಿಗಳನ್ನು ಮೀರಿ ಹುತಾತ್ಮ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸುತ್ತಾ, ಹೋರಾಟ ವಿದ್ಯಾರ್ಥಿಗಳಿಗೆ ನಮ್ಮ ಎಲ್ಲಾ ರೀತಿಯ ಬೆಂಬಲವನ್ನು ನೀಡುವುದು ನಮ್ಮ ಜವಬ್ದಾರಿಯಾಗುತ್ತದೆ ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‌ಓ ಅಖಿಲ ಭಾರತ ಅಧ್ಯಕ್ಷರಾದ ವಿ.ಎನ್ ರಾಜಶೇಖರ್ , ಎಐಡಿಎಸ್‌ಓ ರಾಜ್ಯ ಅಧ್ಯಕ್ಷರಾದ ಅಶ್ವಿನಿ ಕೆ.ಎಸ್, ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ರಾಜ್ಯ ಉಪಾಧ್ಯಕ್ಷರುಗಳಾದ ಹಣಮಂತು ಹೆಚ್. ಎಸ್, ಉಪಾಧ್ಯಕ್ಷರುಗಳಾದ ಅಪೂರ್ವ, ಚಂದ್ರಕಲಾ , ಖಜಾಂಚಿಗಳಾದ ಸುಭಾಷ್, ಕಚೇರಿ ಕಾರ್ಯದರ್ಶಿ ಮಹಾಂತೇಶ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.