
ವಿವಿಧ ಯೋಜನೆಗಳಿಗೆ ಸಾಲ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ವಿಜಯನಗರ, 29- 2024-25ನೇ ಸಾಲಿನಲ್ಲಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು ಯೋಜನೆಗಳಡಿ ಸಾಲ ಸೌಲಭ್ಯವನ್ನು ನೀಡಲಿದ್ದು ಅರ್ಹ ಫಲಾನುಭವಿಗಳು ಆನ್‌ಲೈನ್ ಮೂಲಕ ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಸಾಮಾನ್ಯ ಅರ್ಹತೆಗಳು: ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿರಬೇಕು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ “ನಮೂನೆ-ಜಿ”ಯಲ್ಲಿ ಪಡೆದಿರಬೇಕು, ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು, ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು, ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿಸಿರಬೇಕು. ಆಯ್ಕೆ ಮಾಡುವಾಗ ಮಹಿಳೆಯರಿಗೆ 33 ರಷ್ಟು, ವಿಶೇಷಚೇತನರಿಗೆ 5 ರಷ್ಟು ಹಾಗೂ ತೃತೀಯ ಲಿಂಗಗಳಿಗೆ 5 ರಷ್ಟು ಮೀಸಲಾತಿ ಇರಿಸಿದೆ. ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಸ್ವಯಂ-ಉದ್ಯೋಗ ನೇರ ಸಾಲ ಯೋಜನೆಯ ಅರ್ಹತೆಗಳು: ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ 3 ಲಕ್ಷ ರೂಗಳ ಮಿತಿಯೊಳಗಿರಬೇಕು, ಅರ್ಜಿದಾರರು 18 ವರ್ಷ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು, ಈ ಯೋಜನೆಯಲ್ಲಿ 1 ಲಕ್ಷ ರೂಗಳ ಸಾಲ ಒದಗಿಸಲಾಗುವುದು, ಈ ಮೊತ್ತದಲ್ಲಿ 20 ರಷ್ಟು ಸಹಾಯಧನ ಹಾಗೂ 80 ರಷ್ಟು ಸಾಲವನ್ನು ವಾರ್ಷಿಕ 4 ರಷ್ಟು ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು, 2 ತಿಂಗಳ ವಿರಾಮ ಅವಧಿ ಇರುತ್ತದೆ ನಂತರ ಸಾಲವನ್ನು 34 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು, 2019-20 ಮತ್ತು 2020-21ನೇ ಸಾಲಿನ ಫಲಾನುಭವಿಗಳು ಪಡೆದ ಸಾಲವನ್ನು ಅವಧಿಯೊಳಗೆ ಸಂಪೂರ್ಣವಾಗಿ ಮರುಪಾವತಿಸಿದ್ದಲ್ಲಿ, ಪುನಃ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಬ್ಯಾಂಕ್‌ಗಳ ಸಹಯೋಗದೊಂದಿಗೆ ಆರ್ಯ ವೈಶ್ಯ ಆಹಾರ ವಾಹಿನಿ/ ವಾಹಿನಿ ಯೋಜನೆಯ ಅರ್ಹತೆಗಳು: ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ 6,00,000 ರೂಗಳ ಮಿತಿಯೊಳಗಿರಬೇಕು, ಅರ್ಜಿದಾರರು 21 ವರ್ಷ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು, ಅಭ್ಯರ್ಥಿಯು ಯಲ್ಲೊ ಬೋರ್ಡ್ (ಎಲೆಕ್ಟ್ರಿಕ್ / ಸಿ.ಎನ್.ಜಿ) ತ್ರಿಚಕ್ರ ವಾಹನ ಅಥವಾ ನಾಲ್ಕು ಚಕ್ರದ ವಾಹನವನ್ನು ಖರೀದಿಸಲು ನಿಗಮದಿಂದ 1 ಲಕ್ಷದವರೆಗೆ ಸಬ್ಸಿಡಿ ನೀಡಲಾಗುವುದು, ಬಾಕಿ ಮೊತ್ತವನ್ನು ಯಾವುದಾದರು ಬ್ಯಾಂಕ್‌ಗಳಿಂದ ಸಾಲ ಪಡೆಯಬೇಕಾಗಿರುತ್ತದೆ, ವಾಹನವನ್ನು ಆಹಾರ ವಾಹಿನಿಯನ್ನಾಗಿ ಪರಿವರ್ತಿಸಿದ್ದಲ್ಲಿ ಮಾತ್ರ ಎರಡನೇ ಕಂತಿನ ಮೊತ್ತ 1.ಲಕ್ಷ ರೂಗಳ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗೆ ಡಿ.ಬಿ.ಟಿ ಮೂಲಕ ಬಿಡುಗಡೆ ಮಾಡಲಾಗುವುದು.
ವಾಸವಿ ಜಲಶಕ್ತಿ ಯೋಜನೆಯ ಅರ್ಹತೆಗಳು : ಈ ಯೋಜನೆಯಡಿ 2 ರಿಂದ 15 ಎಕರೆ ಕೃಷಿ ಭೂಮಿ ಹೊಂದಿರುವವರಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಸಾಲ-ಸಹಾಯಧನವನ್ನು ನೀಡಲಾಗುವುದು, ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ 6 ಲಕ್ಷ ರೂಗಳ ಮಿತಿಯೊಳಗಿರಬೇಕು, ಅರ್ಜಿದಾರರು 21 ವರ್ಷ ಮೇಲ್ಪಟ್ಟು 55 ವರ್ಷ ಒಳಗಿನವರಾಗಿರಬೇಕು, ಈ ಯೋಜನೆಯಡಿ ಗರಿಷ್ಠ 2 ಲಕ್ಷ ರೂಗಳ ಸಾಲವನ್ನು ವಾರ್ಷಿಕ 4 ರಷ್ಟು ಬಡ್ಡಿದರದಲ್ಲಿ ಒದಗಿಸಲಾಗುವುದು ಹಾಗೂ ವಿದ್ಯುದೀಕರಣಕ್ಕಾಗಿ 50,000 ರೂಗಳ ಸಹಾಯಧನ ನೀಡಲಾಗುವುದು, 6 ತಿಂಗಳ ವಿರಾಮಾವಧಿ ಇರುತ್ತದೆ ನಂತರ ಸಾಲವನ್ನು 34 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು.
ಅರಿವು ಶೈಕ್ಷಣಿಕ ಸಾಲ ಯೋಜನೆಯ ಅರ್ಹತೆಗಳು : ಈ ಯೋಜನೆಯಲ್ಲಿ ಸಿ.ಇ.ಟಿ./ಎನ್.ಇ.ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿಪರ ಕೋರ್ಸ್ ಹಾಗೂ ಪಿ.ಹೆಚ್.ಡಿನಲ್ಲಿ ವ್ಯಾಸಂಗ ಮಾಡುವ ಆರ್ಯ ವೈಶ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ 1 ಲಕ್ಷ ರೂ ಗಳ ಸಾಲವನ್ನು ಶೇ. 2ರ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ನೀಡಲಾಗುವುದು, ವ್ಯಾಸಂಗ ಪೂರ್ಣಗೊಂಡ ನಂತರ 04 ತಿಂಗಳ ವಿರಾಮಾವಧಿ ಇರುತ್ತದೆ, ನಂತರ ಸಾಲವನ್ನು 36 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು, ಅರ್ಜಿದಾರರು 18 ವರ್ಷ ಮೇಲ್ಪಟ್ಟು 35 ವರ್ಷದ ಒಳಗಿನವರಾಗಿರಬೇಕು, ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ 6 ಲಕ್ಷ ರೂಗಳ ಮಿತಿಯೊಳಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ:08392-267038 ಹಾಗೂ kacdc.karnataka.gov.in ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.