
ಬೇಡಿಕೆಗಳನ್ನು ಈಡೇರಿಸಲು ಸ್ಪಾಂಜ್ ಐರನ್ ಮಾಲೀಕರ ಒಪ್ಪಿಗೆ : ಮಿಂಚು ಶ್ರೀನಿವಾಸ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 28- ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಲಾರಿ ಮಾಲೀಕರ ಸಂಘದ ವತಿಯಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಶಾಂತಿಯುತ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ವಿ.ಶ್ರೀನಿವಾಸ್ (ಮಿಂಚು) ತಿಳಿಸಿದರು.
ಬಳ್ಳಾರಿಯ ಎಸ್ಪಿ ಕಚೇರಿಯಲ್ಲಿ ಹೆಚ್ಚುವರಿ ಎಸ್ಪಿಯವರ ನೇತೃತ್ವದಲ್ಲಿ ಮಂಗಳವಾರ ಸಂಜೆ ನಡೆದ ಸಂಧಾನ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಸರಕು ಸಾಗಾಟ ದರ ಹೆಚ್ಚಿಸುವುದು, ಸ್ಥಳೀಯ ಲಾರಿಗಳಿಗೆ ಶೇ.೮೦ರಷ್ಟು ಆದ್ಯತೆ ನೀಡಬೇಕು, ಸೀರಿಯಲ್ (ಕ್ಯೂ ಸಿಸ್ಟಮ್) ಪ್ರಕಾರ ಲೋಡ್ ನೀಡಬೇಕು. ಓವರ್ ಲೋಡ್ ಲಾರಿಗಳನ್ನು ನಿಷೇಧಿಸಬೇಕು, ಹಾಲ್ಟಿಂಗ್ ಚಾರ್ಜ್ ನೀಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿದ್ದವು ಈ ಪೈಕಿ ಸೀರಿಯಲ್ ಪ್ರಕಾರ ಲೋಡ್ ಕೊಡುವ ಬೇಡಿಕೆ ಹೊರತುಪಡಿಸಿ ಎಲ್ಲ ಬೇಡಿಕೆ ಈಡೇರಿಸುವುದಾಗಿ ಸ್ಪಾಂಜ್ ಐರನ್ ಕಾರ್ಖಾನೆಗಳ ಮಾಲೀಕರು ಒಪ್ಪಿದ್ದಾರೆ ಎಂದು ಹೇಳಿದರು.
ಸೀರಿಯಲ್ ಪ್ರಕಾರ (ಕ್ಯೂ ಸಿಸ್ಟಮ್) ಲೋಡ್ ಕೊಡುವ ಬೇಡಿಕೆ ಬಗ್ಗೆ ಬುಧವಾರ ಸಂಜೆಯೊಳಗೆ ತಮ್ಮ ಅಂತಿಮ ತೀರ್ಮಾನ ತಿಳಿಸುವುದಾಗಿ ಸ್ಪಾಂಜ್ ಐರನ್ ಕಾರ್ಖಾನೆಗಳ ಮಾಲೀಕರು ಸಭೆಯಲ್ಲಿ ತಿಳಿಸಿದ್ದಾರೆಂದು ಮಿಂಚು ಶ್ರೀನಿವಾಸ್ ಹೇಳಿದರು.
ಆ.೨೧ರಿಂದ ಬಳ್ಳಾರಿ ಸುತ್ತಮುತ್ತ ಐದು ಸೆಕ್ಟರ್ ಗಳಲ್ಲಿ ಲಾರಿ ಮಾಲೀಕರ ಸಂಘದ ವತಿಯಿಂದ ಅಹೋರಾತ್ರಿ ಮುಷ್ಕರ ನಡೆಸಲಾಗಿತ್ತು. ಸ್ಪಾಂಜ್ ಐರನ್ ಕಾರ್ಖಾನೆಗಳಿಗೆ ಯಾವುದೇ ಲಾರಿಗಳು ಒಳ ಹೋಗಿರಲಿಲ್ಲ, ಹೊರ ಹೋಗಿರಲಿಲ್ಲ. ಕಚ್ಚಾ ಸರಕು ಹಾಗೂ ಉತ್ಪಾದಿತ ಸರಕು ಸಾಗಿಸಲಾಗದ ಕಾರಣ, ಮುಷ್ಕರದ ಬಿಸಿ ತಾಕಿದ ಹಿನ್ನೆಲೆ ಸ್ಪಾಂಜ್ ಐರನ್ ಮಾಲೀಕರು ಬೇಡಿಕೆಗಳನ್ನು ಈಡೇರಿಸಲು ಒಪ್ಪಬೇಕಾಯಿತು.
ಕಳೆದ ತಿಂಗಳು ಸಂಘದ ವತಿಯಿಂದ ಐದು ದಿನಗಳ ಕಾಲ ಲಾರಿ ಮಾಲೀಕರ ಸಂಘದ ವತಿಯಿಂದ ಮುಷ್ಕರ ನಡೆಸಲಾಗಿತ್ತು. ಆ ವೇಳೆ ಬಹುತೇಕ ಬೇಡಿಕೆ ಈಡೇರಿಸಲು ಒಪ್ಪಿದ್ದ ಸ್ಪಾಂಜ್ ಐರನ್ ಕಾರ್ಖಾನೆಗಳ ಮಾಲೀಕರು ತದನಂತರ ಮಾತು ಬದಲಿಸಿದ್ದರು. ಹೀಗಾಗಿ ಆ.೨೧ ರಿಂದ ಮತ್ತೆ ಮುಷ್ಕರ ಆರಂಭಿಸಲಾಗಿತ್ತು.
ಧನ್ಯವಾದ ಸಲ್ಲಿಕೆ : ಮುಷ್ಕರಕ್ಕೆ ಅನುಮತಿ ನೀಡಿದ ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ ಅವರಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರಿಗೆ, ಉಭಯತರರ ವಾದಕ್ಕೆ ಅವಕಾಶ ನೀಡಿ ಮಾತುಕತೆಯ ನೇತೃತ್ವ ವಹಿಸಿದ್ದ ಹೆಚ್ಚುವರಿ ಎಸ್ಪಿ ರವಿಕುಮಾರ್ ಅವರಿಗೆ, ಶಾಸಕ ನಾರಾ ಭರತ್ ರೆಡ್ಡಿಯವರಿಗೆ, ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಅವರಿಗೆ, ಫೆಡರೇಶನ್ ಆಫ್ ಕರ್ನಾಟಕ ಲಾರಿ ಅಸೋಸಿಯೇಶನ್’ನ ಅಧ್ಯಕ್ಷ ನವೀನ್ ರೆಡ್ಡಿ ಅವರಿಗೆ, ಬಳ್ಳಾರಿ ಪಾಲಿಕೆ ಸದಸ್ಯ ಎಂ.ಪ್ರಭAಜನಕುಮಾರ್ ಅವರಿಗೆ, ಕಾಂಗ್ರೆಸ್ ಮುಖಂಡ ಬಿಆರೆಲ್ ಸೀನಾ ಅವರಿಗೆ, ಐದೂ ಸೆಕ್ಟರ್ ಗಳಲ್ಲಿ ಮುಷ್ಕರದ ನೇತೃತ್ವ ವಹಿಸಿದ್ದ ಲಾರಿ ಮಾಲೀಕರಿಗೆ, ಆಯಾ ಭಾಗದ ಮುಖಂಡರಿಗೆ, ನಮ್ಮ ಹಿತ ಚಿಂತಕರಿಗೆ, ಲಾರಿ ಚಾಲಕರಿಗೆ, ಸ್ಪಾಂಜ್ ಐರನ್ ಕಾರ್ಖಾನೆಗಳ ಮಾಲೀಕರು ಹಾಗೂ ಸಂಘಕ್ಕೆ, ಟ್ರಾನ್ಸಪೋರ್ಟ್ ಅಸೋಶಿಯೇಶನ್’ನವರಿಗೆ, ರಾಜ್ಯ-ಹೊರ ರಾಜ್ಯದ ಲಾರಿ ಮಾಲೀಕರು- ಚಾಲಕರಿಗೆ, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ, ಮಾಧ್ಯಮದವರಿಗೆ ಮಿಂಚು ಶ್ರೀನಿವಾಸ್ ಧನ್ಯವಾದ ಸಲ್ಲಿಸಿದ್ದಾರೆ.
ಮಾಧ್ಯಮ ಗೋಷ್ಠಿ ವೇಳೆ ಉಪಾಧ್ಯಕ್ಷ ನೂರ್ ಮೊಹಮ್ಮದ್, ಕಾರ್ಯದರ್ಶಿ ಮೆಹಬೂಬ ಬಾಷ, ಪ್ರವೀಣಕುಮಾರ್, ಎಂಡಿ ಫಯಾಜ್, ಪೂಜಾದೇವಿ ಶ್ರೀನಿವಾಸುಲು, ರಾಂಕುಮಾರ್, ಪೆದ್ದನ್ನ, ಗವಿಸಿದ್ದಪ್ಪ ಸೇರಿದಂತೆ ಹಲವರು ಹಾಜರಿದ್ದರು.