
ವಿವಿಧ ಕಾಮಗಾರಿಗಳಿಗೆ ಶಾಸಕ ಗವಿಯಪ್ಪರಿಂದ ಭೂಮಿ ಪೂಜೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 28- ಕ್ಷೇತ್ರದಲ್ಲಿ ವಿಳಂಬವಾಗುತ್ತಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ವಿಜಯನಗರ ಕ್ಷೇತ್ರದ ಶಾಸಕ ಹೆಚ್.ಆರ್.ಗವಿಯಪ್ಪ ಭರವಸೆ ನೀಡಿದರು.
ಹೊಸಪೇಟೆಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನಲ್ಲಿ ಕೆಲವು ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ, ಅವುಗಳ ಪೈಕಿ ಅನಂತಶಯನಗುಡಿಯ ಸೇತುವೆ ಕಾಮಗಾರಿಯು ಒಂದು. ಈಗಾಗಲೇ ಸೇತುವೆ ಒಂದು ಭಾಗದಲ್ಲಿ ಕಾಮಗಾರಿ ಮುಂದುವರೆದಿದ್ದು, ಪುರಾತತ್ವ ಇಲಾಖೆಯವರು ಆಕ್ಷೇಪಣೆ ವ್ಯಕ್ತ ಪಡಿಸಿದ ಕಾರಣ ಹಂಪಿ ಕಡೆಯ ಭಾಗದಲ್ಲಿ ಕೆಲಸ ಆರಂಭವಾಗಿಲ್ಲ. ರೈಲ್ವೆ ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರೊಂದಿಗೆ ದೆಹಲಿಗೆ ತೆರಳಿ ಪುರಾತತ್ವ ಇಲಾಖೆಯಿಂದ ಅನುಮೋದನೆ ಪಡೆದುಕೊಂಡು ಬರುದಾಗಿ ತಿಳಿಸಿದರು.
ಸೇತುವೆ ಕಾಮಗಾರಿ ಪೂರ್ಣಗೊಂಡರೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದಂತಾಗುತ್ತದೆ. ಪ್ರವಾಸೋದ್ಯಮದಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಭೂಮಿ ಪೂಜೆ ನಡೆದ ಕಾಮಗಾರಿಗಳು : ಅನಂತಶಯನಗುಡಿಯ ಸೇತುವೆ ಕೆಳಗೆ ವಂತಿಕೆ ಅನುದಾನದ ಅಡಿ ೧.೪೫ ಕೋಟಿ ವೆಚ್ಚದಲ್ಲಿ ಒಳಚರಂಡಿ ಹಾಗೂ ನೀರಿನ ಪೈಪ್‌ಲೈನ್ ಕಾಮಗಾರಿ ಮತ್ತು ಎನ್.ಹೆಚ್ ರಸ್ತೆ ಹತ್ತಿರವಿರುವ ನೀರು ಶುದ್ದೀಕರಣ ಘಟಕದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿ.ಎಂ.ಎಫ್) ಅನುದಾನದ ಅಡಿ ೬.೩೦ ಕೋಟಿ ವೆಚ್ಚದಲ್ಲಿ ಶುದ್ದೀಕರಣ ಘಟಕಕ್ಕೆ ಕಚ್ಚಾ ನೀರು ಪೂರೈಸಲು ಪೈಪ್‌ಲೈನ್ ಅಳವಡಿಕೆ ಹಾಗೂ ವಿವಿಧ ಕಾಮಗಾರಿಗಳು ಮತ್ತು ೨.೬೦ ಕೋಟಿ ವೆಚ್ಚದಲ್ಲಿ ಶುದ್ದೀಕರಿಸಿದ ನೀರು ಶೇಖರಿಸಲು ೨೦ ಲಕ್ಷ ಲೀಟರ್ ಸಾರ್ಮಥ್ಯದ ನೆಲಹಾಸು ಟ್ಯಾಂಕ್ ನಿರ್ಮಾಣ ಹಾಗೂ ವಿವಿಧ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಸ್ಥಳ ಪರಿಶೀಲನೆ : ಶಾಸಕರು ಇದೇ ವೇಳೆ ಶುದ್ದೀಕರಣ ಘಟಕದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು. ಹೊಸಪೇಟೆ ನಗರಕ್ಕೆ ಬೇಕಾಗುವಷ್ಟು ನೀರು ಪೂರೈಕೆಯಾಗುತ್ತಿರುವುದರ ಬಗ್ಗೆ ಮಾಹಿತಿ ಪಡೆದು, ಕಾಮಗಾರಿಗಳ ತುರ್ತು ಆರಂಭಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆ ಅಧ್ಯಕ್ಷರಾದ ರೂಪೇಶ್ ಕುಮಾರ್, ನಗರಸಭೆ ಪೌರಾಯುಕ್ತ ಚಂದ್ರಪ್ಪ ಹಾಗೂ ನಗರಸಭೆಯ ಸದಸ್ಯರುಗಳು ಹಾಗೂ ವಿವಿಧ ಅಧಿಕಾರಿಗಳು ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದರು.