WhatsApp Image 2024-07-25 at 7.20.41 PM

ಬಿಜೆಪಿ-ಜೆಡಿಎಸ್ ಜನಪ್ರತಿನಿಧಿಗಳು ಚರ್ಚಿಸಿ ಮುಂದಿನ ಹೋರಾಟದ ತೀರ್ಮಾನ : ವಿಜಯೇಂದ್ರ

ಕರುನಾಡ ಬೆಳಗು ಸುದ್ದಿ

ಬೆಂಗಳೂರು, 25- ಮೂಡ ಹಗರಣ, ವಾಲ್ಮೀಕಿ ನಿಗಮದ ಹಗರಣ ಸಂಬಂಧ ಮುಂದಿನ ದಿನಗಳಲ್ಲಿ ನಡೆಸಲಿರುವ ಹೋರಾಟದ ಕುರಿತು ನಾವು ಮತ್ತು ನಮ್ಮ ಎನ್‍ಡಿಎ ಭಾಗೀದಾರ ಪಕ್ಷ ಜೆಡಿಎಸ್ ಜೊತೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಕಟಿಸಿದರು.

ಕಲಾಪವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯಪಾಲರಿಗೆ ಇಂದು ದೂರು ಸಲ್ಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಇ.ಡಿ ವಿರುದ್ಧ ಧರಣಿ ನಡೆಸಿದ್ದಲ್ಲದೆ, ಇ.ಡಿ ವಿರುದ್ಧ ಎಫ್‍ಐಆರ್ ದಾಖಲಿಸಿ ಬೆದರಿಸುವ ತಂತ್ರಗಾರಿಕೆ ಮಾಡಿದ್ದಾರೆ. ರಾಜ್ಯ ಹೈಕೋರ್ಟ್, ಇ.ಡಿ. ವಿರುದ್ಧ ಮಾಡಿದ ಎಫ್‍ಐಆರ್‍ಗೆ ತಡೆಯಾಜ್ಞೆ ಕೊಟ್ಟಿದೆ ಎಂದು ನುಡಿದರು.

ವಾಲ್ಮೀಕಿ ಹಗರಣ, ಎಲ್ಲಿ ತಮ್ಮ ಬುಡಕ್ಕೆ ಬರಲಿದೆಯೋ ಎಂದು ಮುಖ್ಯಮಂತ್ರಿಗಳು ಹೆದರಿಕೊಂಡಿದ್ದಾರೆ. ಮೂಡ ಹಗರಣದಲ್ಲಿ ಸಿದ್ದರಾಮಯ್ಯನವರು ವಿಸ್ತøತ ಚರ್ಚೆ ನಡೆಸಿ ವಿಪಕ್ಷಕ್ಕೆ ಸವಾಲು ಹಾಕಲಿದ್ದಾರೆ ಎಂದು ನಿರೀಕ್ಷೆಯಲಿದ್ದೆವು. ಆದರೆ, ಮುಖ್ಯಮಂತ್ರಿಗಳು ಪಲಾಯನವಾದ ಮಾಡಿದ್ದಾರೆ; ಚರ್ಚೆಯಿಂದ ಓಡಿ ಹೋಗುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.

ಇವತ್ತು ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಮೂಡ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಹಗರಣವನ್ನು ಸಿಬಿಐ ತನಿಖೆಗೆ ಕೊಡಬೇಕು; ಮಾನ್ಯ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂಬ ಒತ್ತಾಯವನ್ನು ರಾಜ್ಯಪಾಲರ ಗಮನಕ್ಕೂ ತಂದಿದ್ದೇವೆ ಎಂದು ವಿವರಿಸಿದರು.

ರಾಜ್ಯಪಾಲರು ನಿನ್ನೆ ಮುಖ್ಯಮಂತ್ರಿಗಳನ್ನು ಕರೆದು ಚರ್ಚೆ ಮಾಡಿದ್ದಾರೆ. ಮೂಡ ಹಗರಣದ ಕುರಿತು ಕೆಲವು ವಿವರಣೆಯನ್ನೂ ಮುಖ್ಯಮಂತ್ರಿಗಳಿಗೆ ಕೇಳಿದ್ದಾರೆ. ನಾವು ಕಾದು ನೋಡಲಿದ್ದೇವೆ ಎಂದು ಹೇಳಿದರು.

ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಈ ಸರಕಾರವು ಬೃಹತ್ ಹಗರಣಗಳಲ್ಲಿ ಪಾಲ್ಗೊಂಡಿರುವುದು ಜಗಜ್ಜಾಹೀರಾಗಿದೆ. ಇತಿಹಾಸದಲ್ಲಿ ಯಾವುದೇ ಸದನದಲ್ಲೂ ಆಡಳಿತ ಪಕ್ಷಕ್ಕೆ ಈ ರೀತಿಯ ಅವಮಾನ ಆಗಿಲ್ಲ. ಮುಖ್ಯಮಂತ್ರಿಗಳೇ ಲೂಟಿ ಮಾಡಿದ 2 ಹಗರಣಗಳು ಚರ್ಚೆಗೆ ಬಂದಿವೆ ಎಂದರು.

3ರಿಂದ 4 ಸಾವಿರ ಕೋಟಿಯ ಮೂಡ ಹಗರಣ, 187 ಕೋಟಿಯ ವಾಲ್ಮೀಕಿ ನಿಗಮದ ಹಗರಣಗಳು ನಡೆದಿವೆ. ಸಿದ್ದರಾಮಯ್ಯನವರು ಹಿಂದೆ ಡಿಸಿಎಂ ಆಗಿದ್ದಾಗ ಮೂಡ ಹಗರಣ ಆರಂಭವಾಗಿತ್ತು. ಸಿಎಂ ಪತ್ನಿಗೆ 14 ನಿವೇಶನ, ಇವರ ಬೆಂಬಲಿಗರಿಗೆ ನೂರಾರು ನಿವೇಶನ ಹಂಚಿ ಲೂಟಿ ಮಾಡಿದ್ದಾರೆ ಎಂದು ಟೀಕಿಸಿದರು.

ಸಂವಿಧಾನ ಕಾಪಾಡುವುದಾಗಿ, ರಕ್ಷಿಸುವುದಾಗಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ಸಂವಿಧಾನದ ಭಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸದನದಲ್ಲಿ ನಮಗೆ ಮಾತನಾಡಲು ಅವಕಾಶ ನೀಡಿಲ್ಲ. ಸ್ಪೀಕರ್ ಕೂಡ ಕಾಂಗ್ರೆಸ್ ಕಡೆ ವಾಲಿದ್ದಾರೆ ಎಂದು ದೂರಿದರು. ಮುಖ್ಯಮಂತ್ರಿಗಳು ಒಂದು ಕ್ಷಣವೂ ಆ ಸ್ಥಾನದಲ್ಲಿರುವ ನೈತಿಕತೆಯನ್ನು ಕಳಕೊಂಡಿದ್ದಾರೆ. ಅವರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ದೇವೆ. ಅದೇರೀತಿ ಮನವಿಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮಾತನಾಡಿ, ಕಾನೂನಿನಡಿ ಎಸ್.ಸಿ ಜಮೀನನ್ನು ಕೊಂಡುಕೊಳ್ಳುವುದು ತಪ್ಪು. ಅಂಥ ತಪ್ಪನ್ನು ಮಾಡಿದ್ದಾರೆ. ತಪ್ಪು ಮಾಡಿದ್ದು ಗೊತ್ತಿದ್ದ ಕಾರಣ ಸದನದಲ್ಲಿ ಉತ್ತರಿಸದೆ, ದಾಖಲೆ ಮಂಡನೆಗೆ ಅವಕಾಶ ಕೊಡದೆ, ಹೊರಗಡೆ ಉತ್ತರ ಕೊಟ್ಟಿದ್ದಾರೆ ಎಂದು ಟೀಕಿಸಿದರು.

ಪ್ರಜಾಪ್ರಭುತ್ವದಲ್ಲಿ ಸದನಕ್ಕಿಂತ ದೊಡ್ಡ ವೇದಿಕೆ ಯಾವುದಿದೆ ಹೇಳಿ ಎಂದು ಕೇಳಿದರು. ಸದನದಲ್ಲಿ ದಾಖಲೆ ಕೊಟ್ಟು ಆರೋಪ ಮಾಡಬೇಕಾಗುತ್ತದೆ. ನಾವು ದಾಖಲೆ ಸಿದ್ಧಪಡಿಸಿ ಬಂದಿದ್ದೆವು ಎಂದು ತಿಳಿಸಿದರು. ಸಿಎಂ ಅವರು ನಿರಪರಾಧಿ ಆಗಿದ್ದರೆ ಸದನದಲ್ಲಿ ಉತ್ತರ ಕೊಡಲು ಅವಕಾಶವಿತ್ತು ಎಂದು ಹೇಳಿದರು. ಅಲ್ಲಿ ಪಲಾಯನ ಮಾಡಿದ್ದು, ಸದನಕ್ಕೆ ಅವರು ಗೌರವ ಕೊಡುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಿದರು.

ರಾಜ್ಯ ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ- ಜೆಡಿಎಸ್ ಪ್ರಮುಖರು ಇದ್ದರು.

Leave a Reply

Your email address will not be published. Required fields are marked *

error: Content is protected !!