1

6 ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಅಭಿಯಾನ
ಜಾನುವಾರುಗಳಿಗೆ ಕಡ್ಡಾಯ ಲಸಿಕೆ ಹಾಕಿಸಲು ಜಾಗೃತಿ ಮೂಡಿಸಿ : ಸಿಇಓ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 16- ಜಾನುವಾರುಗಳಿಗೆ ಕಡ್ಡಾಯ ಲಸಿಕೆ ಹಾಕಿಸಲು ರೈತರಿಗೆ ಹಾಗೂ ಜಾನುವಾರುಗಳ ಮಾಲಿಕರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಪಶು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ (ಎನ್‌ಎಡಿಸಿಪಿ) ಕಾರ್ಯಕ್ರಮದಡಿ ೬ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಅಭಿಯಾನದ ಪೂರ್ವ ಸಿದ್ಧತೆಗಳ ಪರಿಶೀಲನೆಯ ಕುರಿತು ತಮ್ಮ ಕಚೇರಿಯಲ್ಲಿ ಅಕ್ಟೋಬರ್ ೧೬ರಂದು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಕ್ಟೋಬರ್ ೨೧ ರಿಂದ ನವೆಂಬರ್ ೨೦ರವರೆಗೆ ನಡೆಯುವ ೬ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಅಭಿಯಾನದ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಪ್ರಚಾರ ಕೈಗೊಳ್ಳಿ. ಲಸಿಕೆ ಮತ್ತು ಸಿರಿಂಜ್-ನೀಡಲ್ಸ್ಗಳ ಶೇಖರಣೆ, ಅಗತ್ಯ ಲಸಿಕಾದಾರರ ನೇಮಕ ಮಾಡಿಕೊಳ್ಳಬೇಕು. ಲಸಿಕಾ ಕಾರ್ಯಕ್ರಮದ ಅವಧಿ ಮತ್ತು ಕಾರ್ಯಕ್ರಮದ ಶೆಡ್ಯೂಲ್ ರಚನೆ ಮಾಡಿಕೊಳ್ಳಬೇಕು. ಗ್ರ‍್ರಾಮ ಪಂಚಾಯತ್‌ವಾರು ಲಭ್ಯವಿರುವ ಪಶು-ಸಖಿಯರ ಮೂಲಕ ಜಾನುವಾರು ಹೊಂದಿರುವ ರೈತರ ಮನೆ ಮನೆ ಭೇಟಿ ಮೂಲಕ ಪ್ರಚಾರ ಕೈಗೊಳ್ಳಬೇಕು ಹಾಗೂ ಲಸಿಕೆ ಹಾಕುವ ಬಗ್ಗೆ ಪಶು-ಸಖಿಯರಿಗೆ ತರಬೇತಿ ನೀಡಬೇಕು. ಗ್ರಾಮಗಳಲ್ಲಿ ಡಂಗುರ ಸಾರಿಸಲು ಕ್ರಮ ಕೈಗೊಳ್ಳಿ. ಪ್ರಚಾರದ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಲಸಿಕಾ ಅಭಿಯಾನದ ಕುರಿತು ಮಾಹಿತಿ, ಜಾಗೃತಿ ಮೂಡಿಸಬೇಕು. ಲಸಿಕಾ ಕಾರ್ಯಕ್ರಮದ ದೈನಂದಿನ ಆನ್‌ಲೈನ್ ವರದಿಯನ್ನು ಪೋರ್ಟಲ್‌ನಲ್ಲಿ ದಾಖಲಿಸಿ. ಜಾನುವಾರುಗಳಿಗೆ ಕಾಲು-ಬಾಯಿ ಲಸಿಕೆ ಹಾಕಲು ಲಸಿಕಾದಾರರಿಗೆ ಪ್ರೋತ್ಸಾಹಧನವನ್ನು ನಿಯಮಾನುಸರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರಾದ ಡಾ ಪಿ.ಎಂ. ಮಲ್ಲಯ್ಯ ಅವರು ಮಾತನಾಡಿ, ಕಾಲು-ಬಾಯಿ ಜ್ವರ ರೋಗವು ದನ, ಎಮ್ಮೆ, ಹಂದಿ, ಜಿಂಕೆ ಮತ್ತು ಇತರೆ ಸೀಳು ಗೊರಸಿನ ರಾಸುಗಳಲ್ಲಿ ಪಿಕಾರ್ನೋ ವೈರಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದೆ. ಈ ರೋಗವು ಅಂಟು ಜಾಡ್ಯವಾಗಿದ್ದು, ರೋಗಗ್ರಸ್ತ ರಾಸುವಿನ ಸಂಪರ್ಕ, ಆಹಾರ, ಗಾಳಿ ಮತ್ತು ನೀರಿನ ಮೂಲಕ ರಾಸುವಿನಿಂದ ರಾಸುವಿಗೆ ಹರಡುತ್ತದೆ. ಕಾಲು-ಬಾಯಿ ಜ್ವರದ ರೋಗೋದ್ರೇಕಗಳಲ್ಲಿ ಕೆಲವೊಮ್ಮೆ ಜಾನುವಾರುಗಳು ಮರಣವನ್ನಪ್ಪುತ್ತವೆ. ರೋಗದಿಂದ ಚೇತರಿಸಿಕೊಂಡ ರಾಸುಗಳು ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುವುದಲ್ಲದೆ, ಹಸು-ಎಮ್ಮೆಗಳಲ್ಲಿ ಗರ್ಭಕಟ್ಟುವ ತೊಂದರೆಗಳು ಉಂಟಾಗುತ್ತವೆ. ಗರ್ಭಪಾತ ಉಂಟಾಗುವ ಸಂಭವವಿರುತ್ತದೆ. ಹೋರಿ-ಎತ್ತುಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕ್ಷೀಣೀಸುತ್ತದೆ. ಇದರಿಂದ ರೈತರಿಗೆ ಆರ್ಥಿಕ ನಷ್ಠ ಉಂಟಾಗುತ್ತದೆ ಎಂದರು.

ಕಾಲು-ಬಾಯಿ ಜ್ವರದ ವಿರುದ್ದ ನಿಯಮಿತವಾಗಿ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಈ ರೋಗವನ್ನು ತಹಬಂದಿಗೆ ತರಬಹುದಾಗಿದ್ದು, ಈ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಯೋಜನೆಯಡಿ ರಾಜ್ಯಾದ್ಯಂತ ೬ನೇ ಸುತ್ತಿನ ಕಾಲುಬಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮವನ್ನು ಅಕ್ಟೋಬರ್ ೨೧ ರಿಂದ ನವೆಂಬರ್ ೨೦ರವರೆಗೆ (೩೦ ದಿನಗಳು) ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ವಾಸ್ತವವಾಗಿ ಲಭ್ಯವಿರುವ ೨,೬೯,೨೪೭ ಜಾನುವಾರುಗಳಿಗೆ (ದನ&ಎಮ್ಮೆಗಳು) ಲಸಿಕೆ ಹಾಕಲು ಗುರಿ ಹೊಂದಲಾಗಿದೆ. ಜಾನುವಾರುಗಳಿಗೆ ಕಾಲು-ಬಾಯಿ ಲಸಿಕೆ ಹಾಕಲು ಲಸಿಕಾದಾರರಿಗೆ ಇಲಾಖೆಯಿಂದ ಪ್ರತಿ ಜಾನುವಾರಿಗೆ ರೂ.೫ ರಂತೆ ಪ್ರೋತ್ಸಾಹಧನ ನಿಗಧಿಪಡಿಸಲಾಗಿದ್ದು, ಕೆ.ಎಂ.ಎಫ್ ವತಿಯಿಂದ ಪ್ರತಿ ಜಾನುವಾರಿಗೆ ರೂ.೧.೨೫ ರಂತೆ ಹೆಚ್ಚುವರಿಯಾಗಿ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಟಿ.ಲಿಂಗರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಗಂಗಪ್ಪ, ಕೆ.ಎಂ.ಎಫ್ ವ್ಯವಸ್ಥಾಪಕರಾದ ಡಾ ಗಂಗಾಧರ ಸೇರಿದಂತೆ ವಿವಿಧ ತಾಲ್ಲೂಗಳ ಪಶು ವೈದ್ಯಾಧಿಕಾರಿಗಳು, ಪಶು ಇಲಾಖೆಯ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!