WhatsApp Image 2024-08-06 at 6.23.15 PM

ಪರಶುರಾಮನ ಸಾವಿಗೆ ನ್ಯಾಯ ಸಿಗಬೇಕು : ಚಲುವಾದಿ ನಾರಾಯಣಸ್ವಾಮಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 6- ಯಾದಗಿರಿ ಪಿಎಸ್ಐ ಪರಶುರಾಮ ಸಾವು ಪ್ರಕರಣವನ್ನು ಬಿಜೆಪಿ ರಾಜಕೀಯ ಅಸ್ತ್ರವಾಗಿಸಿಕೊಂಡಿದ್ದು ಬಿಜೆಪಿ ಮುಕಂಡ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಮಂಗಳವಾರ ಮೃತನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮಂಗಳವಾರದಂದು ಸ್ಥಳೀಯ ನಾಯಕರೊಂದಿಗೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕು ಸೋಮನಾಳ ಗ್ರಾಮದ ಮೃತ ಪರಶುರಾಮ ಮನೆಗೆ ಭೇಟಿ ನೀಡಿದರು. ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಪೊಲೀಸ್ ಮಹಾಸಭಾದ ಅಧ್ಯಕ್ಷ ಶಶಿಧರ, ಮಾಜಿ ಶಾಸಕರಾದ ಬಸವರಾಜ ದಡೆಸುಗೂರ, ಪರಣ್ಣ ಮುನವಳ್ಳಿ ಮತ್ತು ಡಾ.ಬಸವರಾಜ ಕ್ಯಾವಟರ್ ಜೊತೆಗೆ ಆಗಮಿಸಿ, ಪರಶುರಾಮ ತಂದೆ- ತಾಯಿ ಹಾಗೂ ಪತ್ನಿಯೊಂದಿಗೆ ಸುಮಾರು 1 ಗಂಟೆ ಮಾತನಾಡಿ, ಮಾಹಿತಿ ಪಡೆದರು.

ಈ ಸಾವಿಗೆ ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇವೆ. ನಿಮ್ಮ ಜೊತೆಗೆ ನಾನು ಯಾವತ್ತೂ ಇರುತ್ತೇನೆ ಎಂದು ಭರವಸೆ ನೀಡಿದರು. ಜೊತೆಗೆ ಪರಶುರಾಮ ಪತ್ನಿ ಶ್ವೇತಾ ಅವರಿಗೆ ವಿಧಾನಪರಿಷತ್ ಸದಸ್ಯರ ಒಂದು ತಿಂಗಳ ವೇತನದ ಚೆಕ್ ಅನ್ನು ವೈಯಕ್ತಿಕ ಪರಿಹಾರವಾಗಿ ನೀಡಿದರು. ಐದನೇ ದಿನದ ಕಾರ್ಯದ ಹಿನ್ನೆಲೆ ಪರಶುರಾಮ ಪತ್ನಿ ಶ್ವೇತಾ ಕೂಡ ಸೋಮನಾಳ ಗ್ರಾಮಕ್ಕೆ ಬಂದಿದ್ದರು.

ಕಳೆದೆರಡು ದಿನಗಳ ಹಿಂದೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಪರಶುರಾಮ ಮನೆಗೆ ಭೇಟಿ ನೀಡಿದ್ದರು. ಈ ಹಿನ್ನೆಲೆ ಗೃಹ ಸಚಿವ ಜಿ.ಪರಮೇಶ್ವರ ಸೋಮನಾಳ ಗ್ರಾಮಕ್ಕೆ ಬರುವ ಪ್ರವಾಸ ಪಟ್ಟಿ ಸಿದ್ಧಗೊಂಡಿತ್ತು. ಈ ಗ್ಯಾಪ್ ನಲ್ಲಿ ಸೋಮವಾರ ಚಲುವಾದಿ ನಾರಾಯಣಸ್ವಾಮಿ ಪರಶುರಾಮ ಮನೆಗೆ ಭೇಟಿ ನೀಡಿ, ಗೃಹ ಸಚಿವರ ಭೇಟಿಯನ್ನು ವಿರೋಧಿಸಿದ್ದಾರೆ.

ಪಿಎಸ್ಐ ಪರಶುರಾಮ ಸಾವಿಗೆ ಕಾರಣರಾದ ಶಾಸಕ ಚನ್ನರೆಡ್ಡಿ ಮತ್ತು ಮಗ ಪಂಪನಗೌಡರನ್ನು ಬಂಧಿಸಬೇಕು. ಆರೋಪಿಗಳ ಬಂಧನವಾಗದಿದ್ದರೆ ಅವರು ಇಲ್ಲಿಗೆ ಬರುವುದು ಬೇಡ ಎಂದಿದ್ದಾರೆ. ವಿಧಾನಪರಿಷತ್ ವಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಅವರ ಹೇಳಿಕೆಯನ್ನು ಪರಶುರಾಮ ಕುಟುಂಬ ಕೂಡ ಬೆಂಬಲಿಸಿದ್ದು, ಗೃಹ ಸಚಿವರ ಭೇಟಿಗೆ ವಿರೋಧಿಸಿದೆ. ಜೊತೆಗೆ ನಾರಾಯಣಸ್ವಾಮಿ ಅವರ ಮಾತುಗಳನ್ನು ಅನುಮೋದಿಸಿದೆ.

ಈ ವೇಳೆ ಮಾತನಾಡಿದ ಚಲುವಾದಿ ನಾರಾಯಣಸ್ವಾಮಿ, ಪಿಎಸ್ಐ ಸಾವಿನ ಹಿನ್ನೆಲೆ ಯಾದಗಿರಿ ಪಿಎಸ್ಐ ಮತ್ತವರ ಮಗನ ವಿರುದ್ಧ ಎಫ್ಐಆರ್ ಆಗಿದ್ದು, ಕೂಡಲೇ ಇಬ್ಬರನ್ನೂ ಸರಕಾರ ಬಂಧಿಸಬೇಕು. ಇಲ್ಲವಾದರೆ ಗೃಹ ಸಚಿವ ಜಿ.ಪರಮೇಶ್ವರ ಪರಶುರಾಮ ಅವರ ಮನೆಗೆ ಭೇಟಿ ನೀಡಬಾರದು. ಸರಕಾರ ಪರಿಹಾರ ನೀಡುವ ಕೆಲಸ ನಂತರ ಮಾಡಲಿ. ಅದಕ್ಕೂ ಮೊದಲು ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಪರಶುರಾಮ ಪತ್ನಿ ದೂರು ಆಧರಿಸಿ ಕೂಡಲೇ ಎಫ್ಐಆರ್ ಮಾಡಿಲ್ಲ. ಪರಶುರಾಮ ಪರ ದಲಿತ ಸಂಘಟನೆ, ಆತನ ಸ್ನೇಹಿತರು ರಸ್ತೆ ಬಂದ್ ಮಾಡಿದ್ದರಿಂದ ಎಫ್ ಐಆರ್ ಆಗಿದೆ. ಎಫ್ಐಆರ್ ಮಾಡಿದ ಒಂದು ಗಂಟೆಗೆ ಆರೋಪಿಗಳನ್ನು ಅರೆಸ್ಟ್ ಮಾಡಬೇಕಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಕೊಲೆಗಡುಕ ಶಾಸಕ ಚನ್ನಾರೆಡ್ಡಿ ಅವರನ್ನು ಪಕ್ಕದಲ್ಲಿ ಕೂಡಿಸಿಕೊಂಡು, ಪರಶುರಾಮ ತಂದೆಗೆ ಕರೆ ಮಾಡಿದ್ದಾರೆ. ಹೇಳುವುದು ಮಾತ್ರ ಅಹಿಂದ. ಆದರೆ, ಈ ಕಾಂಗ್ರೆಸ್ ಸರಕಾರದಲ್ಲಿ ಎಸ್ಸಿ/ಎಸ್ಟಿ ಅಧಿಕಾರಿಗಳ ಮಾರಣಹೋಮ ನಡೆಯುತ್ತಿದೆ. ಈ ಮಾರಣ ಹೋಮಕ್ಕೆ ನನ್ನ ಸಹೋದರ ಪರಶುರಾಮ ಬಲಿ ಆಗಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಶುರಾಮ ತುಂಬಾ ವರ್ಷದಿಂದ ನನ್ನ ಸಹೋದರನಂತೆ ಸಂಪರ್ಕದಲ್ಲಿದ್ದ. ಆತನ ಸಾವಿಗೆ ನ್ಯಾಯ ಸಿಗಬೇಕು. ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿ, ಗಾಲ್ಫ ಮೈದಾನದಲ್ಲಿ ಹುಲ್ಲಿಗೆ ನೀರು ಹಾಕುವುದನ್ನು ನೋಡಿದ್ದೇನೆ. ಆತನ ಮೇಲೆ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಜಾತಿ ಕಾರಣಕ್ಕೆ ಶಾಸಕ ಚೆನ್ನಾರಡ್ಡಿ ವರ್ಗಾವಣೆ ಮಾಡಿಸಿ, ಸಾವಿಗೆ ಕಾರಣ ಆಗಿರುವುದು, ಈ ಸಮಾಜ ತಲೆ ತಗ್ಗಿಸುವ ವಿಚಾರ. ಹೃದಯಾಘಾತ ಎಂದು ಗೃಹ ಸಚಿವರು ಹೇಳಿದ್ದಾರೆ. ಆದರೆ, ನಮಗೆ ಅನುಮಾನ ಇದ್ದು, ಸಿಬಿಐ ತನಿಖೆಗೆ ಒಪ್ಪಿಸಬೇಕು. ಇಲ್ಲವಾದರೆ ದಲಿತ ಸಂಘಟನೆಗಳು ಬೀದಿಗೆ ಇಳಿದು ನ್ಯಾಯ ಪಡೆಯಬೇಕು.

– ಚಲುವಾದಿ ನಾರಾಯಣಸ್ವಾಮಿ,
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ

Leave a Reply

Your email address will not be published. Required fields are marked *

error: Content is protected !!