5

ಮಕ್ಕಳ ಬೆಳವಣಿಗೆ ಯೋಜನೆ ಕೂಸಿನ ಮನೆ ಆರೈಕೆದಾರರ ಜವಾಬ್ದಾರಿ ಬಹಳ ಮುಖ್ಯ : ಬೆಟ್ಟದಪ್ಪ ಮಾಳೆಕೊಪ್ಪ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 19- ಪ್ರತಿ ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ ದುಡಿದು ಜೀವನ ನಿರ್ವಹಣೆ ಮಾಡುವ ಗ್ರಾಮೀಣ ಭಾಗದ ಕೂಲಿ ಕಾರ್ಮಿಕ ಮಹಿಳೆಯರ ಮಕ್ಕಳನ್ನು ಲಾಲನೆ, ಪಾಲನೆ-ಪೋಷಣೆ ಮಾಡಲು ಸರ್ಕಾರ ಜಾರಿಗೆ ತಂದ ಕೂಸಿನ ಮನೆ ಯೋಜನೆಯ ಯಶಸ್ವಿಗೆ ಮಕ್ಕಳ ಆರೈಕೆದಾರರ ಜವಾಬ್ದಾರಿ ಮುಖ್ಯವಾಗಿದೆ ಎಂದು ಸಿಡಿಪಿಓ ಬೆಟದಪ್ಪ ಮಾಳೇಕೊಪ್ಪ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತಿ ಆವರಣದ ಸಾಮರ್ಥ್ಯ ಸೌಧದಲ್ಲಿ ಯಲಬುರ್ಗಾ ಕುಕನೂರ ಅವಳಿ ತಾಲೂಕು ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ಕೂಸಿನ ಮನೆಯ ಮಕ್ಕಳ ಆರೈಕೆ ಮಾಡುವ ಕುರಿತು ಆರೈಕೆದಾರಿಗೆ ಆಯೋಜಿಸಿದ ೭ ದಿನಗಳ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೂಸಿನ ಮನೆಗಳಲ್ಲಿ ಕೆಲಸ ಮಾಡುವ ತಾವುಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಮಕ್ಕಳ ಅಪೌಷ್ಟಿಕತೆ ಬಗ್ಗೆ ಮಾಹಿತಿ ತಿಳಿದರೆ ತಕ್ಷಣವೆ ಪಾಲಕರಿಗೆ ಮಾಹಿತಿ ನೀಡಬೇಕು. ತಮಗೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಬಾಯಿಸಬೇಕು ಎಂದರು.

ತಾಪA ಸಹಾಯಕ ನಿರ್ದೇಶಕರಾದ ಫಕೀರಪ್ಪ ಕಟ್ಟಿಮನಿ ಮಾತನಾಡಿ, ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕ ಮೂರು ವರ್ಷದೊಳಗಿನ ಮಕ್ಕಳನ್ನು ಆರೈಕೆ ಮಾಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸರ್ಕಾರ ಕೂಸಿನ ಮನೆ ಎಂಬ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆ ಸಮರ್ಪಕವಾಗಿ ಅನುಷ್ಟಾನ ಮಾಡುವ ಮೂಲಕ ಮಕ್ಕಳ ಬೌದ್ಧಿಕ, ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸಮಗ್ರ ಬೆಳವಣಿಗೆ ನೋಡಿಕೊಳ್ಳುವುದು ಆರೈಕೆದಾರರ ಜವಾಬ್ದಾರಿ ಎಂದರು.

ಕೂಸಿನ ಮನೆಗೆ ಬರುವ ಮಕ್ಕಳಲ್ಲಿ ಯಾವುದೇ ತಾರತಮ್ಯ ಮಾಡದೆ ಎಲ್ಲರೂ ಒಂದೇ ಎಂಬ ಸಮಾನ ಮನೋಭಾವನೆಯಿಂದ ಆರೈಕೆ ಮಾಡುವ ಜವಾಬ್ದಾರಿ ಕೂಸಿನ ಮನೆಯ ಆರೈಕೆದಾರರ ಮೇಲಿದೆ. ಕೂಸಿನ ಮನೆಗಳು ಗ್ರಾಮೀಣ ಭಾಗದ ಕೂಲಿ ಕಾರ್ಮಿಕ ತಾಯಂದಿರಿಗೆ ವರದಾನವಾಗಬೇಕು ಎಂದು ಹೇಳಿದರು.

ಕೂಸಿನ ಮನೆಯಲ್ಲಿ ಮಕ್ಕಳನ್ನು ಆರೈಕೆ ಮಾಡುವದನ್ನು ನೋಡಿದ ತಾಯಂದಿರು ಖುಷಿ ಪಡುವಂತಿರಬೇಕು. ತಾಯಂದಿರು ತಮ್ಮ ಮಕ್ಕಳನ್ನು ನಿರ್ಭೀತಿಯಿಂದ ಕೂಸಿನ ಮನೆಯಲ್ಲಿ ತಂದು ಬಿಡುವ ವಾತಾವರಣ ಸೃಷ್ಟಿಯಾಗಬೇಕು. ಆ ನಿಟ್ಟಿನಲ್ಲಿ ಆರೈಕೆದಾರರು ತರಬೇತಿಯಲ್ಲಿ ಪಡೆದ ಅನುಭವದ ಮೇಲೆ ಮಕ್ಕಳ ಪೋಷಣೆಯ ಕೆಲಸ ಮಾಡಬೇಕು. ಮಕ್ಕಳ ಪ್ರಾರಂಭಿಕ ಬೆಳವಣಿಗೆಗೆ ಪೌಷ್ಠಿಕ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೆ, ಮಕ್ಕಳ ಬೆಳವಣಿಗೆಗೆ ಉತ್ತಮ ವಾತಾವರಣ ರೂಪಿಸಲಿದ್ದು, ಗ್ರಾಮೀಣ ಮಹಿಳಾ ಕೂಲಿ ಕಾರ್ಮಿಕರ ಮಕ್ಕಳ ಆರೈಕೆಯಾಗಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ೭ ದಿನಗಳ ತರಬೇತಿ ಪಡೆದ ಮಕ್ಕಳ ಆರೈಕೆದಾರರಿಗೆ ಪ್ರಮಾಣಪತ್ರ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಮೊಬೈಲ್ ಕ್ರೆಚ್ಛಸ್ ಸಂಸ್ಥೆ ಬೆಂಗಳೂರು ತರಬೇತುದಾರ ಜಗದೀಶ್, ಶಶಿಕುಮಾರ, ವಿಶ್ವನಾಥ, ರಾಜಶೇಖರ್, ರಜನಿ, ವಿಜಯಲಕ್ಷ್ಮಿ, ಹಾಗೂ ಅಂಗನವಾಡಿ ಹಿರಿಯ ಮೇಲ್ವಿಚಾರಕರು, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಲಕ್ಷ್ಮಣ ಕೆರಳ್ಳಿ, ವಿಷಯ ನಿರ್ವಾಹಕ ಬಸವರಾಜ ಮಾಲಿ ಪಾಟೀಲ್ ಹಾಗೂ ಯಲಬುರ್ಗಾ ಕುಕನೂರ ತಾಲೂಕಿನ ಮಕ್ಕಳ ಆರೈಕೆದಾರರು ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!