
ಸಹಕಾರ ಸಂಘಗಳಿಗೆ ತರಬೇತಿ ಅವಶ್ಯ : ವಿಶ್ವನಾಥ ಪಾಟೀಲ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 5- ಸಹಕಾರ ಸಂಘಗಳಿಗೆ ತರಬೇತಿಯು ಒಂದು ನಿರಂತರ ಪ್ರಕ್ರಿಯೆಯಾಗಿದೆ. ಇಂಥಹ ನಿರಂತರತೆ ಸಹಕಾರ ಕ್ಷೇತ್ರದಲ್ಲಿ ಅಳವಡಿಸಿಕೊಂಡು ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಉತ್ತಮ ತರಬೇತಿಗಳನ್ನು ಜಿಲ್ಲೆಯ ಸಹಕಾರಿಗಳಿಗೆ ನೀಡುತ್ತಾ ಬರುತ್ತಿದೆ ಸಹಕಾರ ಸಂಘಗಳು ತರಬೇತಿಯನ್ನು ಪಡೆಯುವುದು ಅವಶ್ಯಕ ಎಂದು ರಾಯಚೂರು ಆರ್‌ಕೆಡಿಸಿಸಿ ಬ್ಯಾಂಕೆ ಅಧ್ಯಕ್ಷ ವಿಶ್ವನಾಥ ಪಾಟೀಲ್ ಹೇಳಿದರು.
ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಹಾಗೂ ಸಹಕಾರ ಇಲಾಖೆ, ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಚುನಾವಣೆ ಜರುಗುವ ಸಹಕಾರ ಸಂಘಗಳ ರಿಟರ್ನಿಂಗ್ ಅಧಿಕಾರಿಗಳು, ಸಹಾಯಕ ರಿಟರ್ನಿಂಗ್ ಅಧಿಕಾರಿಗಳು, ಪರಿಶೀಲನಾ ಅಧಿಕಾರಿಗಳು ಮತ್ತು ಮುಖ್ಯಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ರಾಜ್ಯ ಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಾರದರ್ಶಕ ಸಹಕಾರ ಸಂಘಗಳ ಚುನಾವಣೆಗೆ ತರಬೇತಿ ಅವಶ್ಯಕ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಶೇಖರಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕೊಪ್ಪಳದ ಜಿಲ್ಲಾ ಸಹಕಾರ ಯೂನಿಯನ್ ಕಾಲ-ಕಾಲಕ್ಕೆ ಸಹಕಾರ ಸಂಘಗಳ ಕಾಯ್ದೆಯಲ್ಲಿ ಬದಲಾವಣೆಯಾದ ವಿಷಯಗಳ ಕುರಿತು ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಹಾಗೂ ಆಡಳಿತ ಮಂಡಳಿಗೆ ಪರಿಣಾಮಕಾರಿ ತರಬೇತಿಗಳನ್ನು ಹಮ್ಮಿಕೊಳ್ಳುತ್ತಾ ಜಿಲ್ಲೆಯಲ್ಲಿ ಸಹಕಾರ ಚಳುವಳಿಯನ್ನು ಬಲಪಡಿಸುತ್ತಾ ಬಂದಿದೆ. ಜಿಲ್ಲೆಯ ಸಹಕಾರಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿನಂತಿಸಿಕೊ0ಡರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಸಮನ್ವಯಾಧಿಕಾರಿಗಳು ಹಾಗೂ ಸಹಕಾರ ಶಿಕ್ಷಣಾಧಿಕಾರಿ ಶರಣಬಸಪ್ಪ ಕಾಟ್ರಳ್ಳಿ ಮಾತನಾಡುತ್ತಾ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರದ ಮೂಲಕ ರಾಜ್ಯದ ೪೭ ಸಾವಿರ ಸಹಕಾರ ಸಂಘಗಳಿಗೆ ಮಾತೃ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಚುನಾವಣೆ ಜರುಗಿಸಲು ಸಹಕಾರ ಸಂಘಗಳ ಕಾಯ್ದೆ ಹಾಗೂ ತಿದ್ದುಪಡಿ, ಚುನಾವಣೆಯಲ್ಲಿ ಚುನಾವಣಾ ಪೂರ್ವ ಸಿದ್ಧತೆ ಕುರಿತು (ಮತದಾರರ ಪಟ್ಟಿ ತಯಾರಿಸುವ ಕುರಿತು) ಹಾಗೂ ಚುನಾವಣೆಯಲ್ಲಿ ರಿಟರ್ನಿಂಗ್ ಅಧಿಕಾರಿ, ಸಹಾಯಕ ರಿಟರ್ನಿಂಗ್ ಅಧಿಕಾರಿ, ಪರಿಶೀಲನಾ ಅಧಿಕಾರಿ ಮತ್ತು ಮುಖ್ಯಕಾರ್ಯನಿರ್ವಾಹಕರ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ನಿವೃತ್ತ ಅಪರ ನಿಬಂಧಕರಾದ ಐ.ಎಸ್.ಗಿರಡ್ಡಿ ಹಾಗೂ ಚುನಾವಣಾ ಜರುಗಿಸುವ ಪ್ರಕ್ರಿಯೆಗಳ ಕುರಿತು ಉಪನಿಬಂಧಕರಾದ ದಸ್ತಗೀರ್ ಅಲಿ ಇವರುಗಳು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಆರ್‌ಕೆಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಶಿವಶಂಕರಗೌಡ ಪಾಟೀಲ ಕಡೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಉಪಾದ್ಯಕ್ಷ ಹಾಲಯ್ಯ ವಿ.ಹುಡೇಜಾಲಿ, ನಿರ್ದೇಶಕಿ ಶ್ರೀಮತಿ ಶಕುಂತಲಾ ಹೆಚ್.ಹುಡೇಜಾಲಿ, ತೋಟಪ್ಪ ಹೆಚ್. ಕಾಮನೂರು, ದಾದಾಪೀರ್ ಗೋನೆಗೊಂಡಲ, ಮಹಾಂತೇಶ ಸಜ್ಜನ್, ವೆಂಕಟೇಶ ಶೆಟ್ಟರ್, ರಾಜೀವ್ ಮಾದಿನೂರು, ಭೀಮರಡ್ಡಿ ಶ್ಯಾಡ್ಲಗೇರಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸಜ್ಜನರ ಪ್ರಕಾಶ, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ, ಅಕ್ಷಯ್ ಕುಮಾರ, ಜಿಲ್ಲಾ ಸಹಕಾರ ಶಿಕ್ಷಕಿ ಶ್ರೀಮತಿ ರಾಜ್ಮಾ, ಯೂನಿಯನ್ ಸಿಬ್ಬಂದಿ ಗವಿಸಿದ್ದಯ್ಯ ಎಸ್.ಹಿರೇಮಠ, ಮಲ್ಲಿಕಾರ್ಜುನಯ್ಯ ಮತ್ತು ಹನಮೇಶ ಹಾಗೂ ಇತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಯೂನಿಯನ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಕುಮಾರ ಇವರು ಸ್ವಾಗತಿಸಿದರು, ಮಾಜಿ ನಿರ್ದೇಶಕ ಗವಿಸಿದ್ದೇಶ ಹುಡೇಜಾಲಿ ನಿರೂಪಿಸಿದರು. ಕೊನೆಯಲ್ಲಿ ಕೆ.ಐ.ಸಿ.ಎಂ. ಕಲಬುರಗಿಯ ಉಪನ್ಯಾಸಕ ರಾಜೇಶ ಯಾವಗಲ್ ವಂದಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ಒಟ್ಟು ೧೧೭ ಶಿಬಿರಾರ್ಥಿಗಳು ಭಾಗವಹಿಸಿದ್ದರು.