
ಗಂಗಾ ಕಲ್ಯಾಣ ಯೋಜನೆಯಿಂದ ಸಂಬಂಧಿಗಳಲ್ಲಿ ಕಲಹ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ಕನಕಗಿರಿ ತಾಲ್ಲೂಕಿನ ಹುಲಿಹೈದರ ಹೋಬಳಿಯ ಬಸರಿಹಾಳ ಗ್ರಾಮದ ನಮ್ಮ ಹೊಲಕ್ಕೆ ಗಂಗಾ ಕಲ್ಯಾಣ ಯೋಜನೆ ಮಂಜೂರಾಗಿದ್ದು, ಕಾನೂನು ಪ್ರಕಾರ ವಿದ್ಯುತ್ ಸಂಪರ್ಕ ಪಡೆದಿದ್ದೇವೆ. ಇದರಿಂದಾಗಿ ನಮ್ಮ ತಂದೆ ಪವಾಡೆಪ್ಪನ ಮೇಲೆ ನಮ್ಮ ಸಂಬಂಧಿಗಳಾದ ಸೋಮಪ್ಪ ಸೇರಿ ಕುಟುಂಬದ ನಾಲ್ವರು ಹಲ್ಲೆ ಮಾಡಿದ್ದು, ಇವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ತಿಂಗಳಾದರೂ ಕೂಡಾ ಆರೋಪಿಗಳನ್ನು ಬಂಧಿಲ್ಲ. ಹಾಗಾಗಿ ಆರೋಪಿಗಳನ್ನು ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಹಲ್ಲೆಗೊಳಗಾದ ವ್ಯಕ್ತಿ ಪವಾಡೆಪ್ಪನ ಪುತ್ರ ಕೃಷ್ಣಪ್ಪ ನಾಯಕ್ ಹೇಳಿದರು.
ನಗರದ ಮೀಡಿಯಾ ಕ್ಲಬ್ ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಮ್ಮ ತಂದೆ ಪವಾಡೆಪ್ಪನ ಮೇಲೆ ಸೋಮಪ್ಪ ಕುಟುಂಬದವರು ಹಲ್ಲೆ ಮಾಡಿದ್ದು, ಇದರಿಂದಾಗಿ ಕನಕಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳಿಗೆ ಪೆಟ್ಟು ಬಿದ್ದಿದ್ದು, ಇವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣಕ್ಕೆ ಗಂಗಾವತಿಗೆ ಕರೆದುಕೊಂಡು ಬಂದು, ಖಾಸಗಿ ಆಸ್ಪತ್ರೆಗೆ ದಾಖಲಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಈವರೆಗೂ ಘಟನಾಸ್ಥಳಕ್ಕೆ ಪಿಎಸ್ಐ ಆಗಮಿಸಿ, ಪರಿಶೀಲನೆ ಮಾಡಿಲ್ಲ. ಅಲ್ಲದೇ ಆರೋಪಿಗಳನ್ನು ಬಂಧಿಸಿಲ್ಲ ಎಂದು ಅಸಮಾಧಾನ ತೋಡಿಕೊಂಡರು.
ನಾಲ್ವರು ಆರೋಪಿಗಳು ನಮ್ಮ ಗ್ರಾಮದಲ್ಲಿಯೇ ಅಡ್ಡಾಡುತ್ತಿದ್ದಾರೆ. ಸೋಮಪ್ಪ ಮತ್ತು ಕುಟುಂಬದವರು ಕಾಂಗ್ರೆಸ್ ಪಕ್ಷದವರಾಗಿದ್ದು, ನಾವು ಬಿಜೆಪಿ ಪಕ್ಷದವರಾಗಿದ್ದೇವೆ. ಹಾಗಾಗಿ ಆರೋಪಿಗಳು ರಾಜಾರೋಷವಾಗಿ ನಮ್ಮ ಹೊಲಕ್ಕೆ ಬಂದು, ನೀವು ಎಫ್ಐಆರ್ ದಾಖಲಿಸಿದರೂ, ನಮ್ಮನ್ನು ಏನೂ ಮಾಡಲಾಗುವುದಿಲ್ಲ. ನಮ್ಮ ಹಿಂದೆ ಅಣ್ಣ(ಹನುಮೇಶ ನಾಯಕ್) ಇದ್ದಾನೆ. ನೀವು ಏನೂ ಮಾಡಲಾಗುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಹನುಮೇಶ ನಾಯಕ್ ನಿಂದ ಪಿಎಸ್ಐ ಮೇಲೆ ಒತ್ತಡ ಹಾಕಿಸಿರಬಹುದು. ಈ ಹಿನ್ನಲೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.
ಪವಾಡೆಪ್ಪನ ಸಹೋದರ ಮಾರುತಿ ನಾಯಕ, ಲಕ್ಷ್ಮಣ ನಾಯಕ, ನಾಗಪ್ಪ ನಾಯಕ ಇದ್ದರು.