
ಮತದಾನ ಬಹಿಷ್ಕರಿಸಿದವರ ಮನವೊಲಿಸಿದ ಕಾಂಗ್ರೆಸ್ ಮುಖಂಡರು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 9- ಇದೇ ನವೆಂಬರ್ ೧೩ ರಂದು ನಡೆಯಲಿರುವ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದ ನಾನೂರಕ್ಕೂ ಹೆಚ್ಚು ಮತದಾರರನ್ನು ಅಲೆಮಾರಿ ಸಮುದಾಯದ ಮುಖಂಡರು ಮನವೊಲಿಸುವ ಮೂಲಕ ಮತದಾನ ಮಾಡುವಂತೆ ಕೋರಿದ್ದಾರೆ.
ಚೋರನೂರು ಗ್ರಾಮದಲ್ಲಿ ಸುಡುಗಾಡು ಸಿದ್ಧ ಸಮುದಾಯ ಸೇರಿದಂತೆ ಇತರೆ ಅಲೆಮಾರಿ ಸಮುದಾಯದ ೨೦೦ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಕಳೆದ ಹಲವಾರು ವರ್ಷಗಳಿಂದ ತಮಗೆ ಸರ್ಕಾರದ ಸೌಲಭ್ಯಗಳು ಲಭಿಸುತ್ತಿಲ್ಲ. ಮುಖ್ಯವಾಗಿ ಸೂರು, ನಿವೇಶನ ಸೇರಿದಂತೆ ನಾಗರಿಕ ಸೌಲಭ್ಯಗಳು ಸಿಗದೇ ಇರುವ ಕಾರಣ ಈ ಬಾರಿಯ ಉಪ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿರುವುದಾಗಿ ಹೇಳಿದ್ದರು.
ಚೋರನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಬನ್ನಿಹಟ್ಟಿ ಮತ್ತು ಸೋಮಲಾಪುರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಇ.ತುಕಾರಾಂ ಪರವಾಗಿ ಮತ ಯಾಚನೆ ಕಾರ್ಯಕ್ರಮ ಹಮ್ಮಿಕಕೊಂಡಿದ್ದ ವೇಳೆ ಮತದಾನ ಬಹಿಷ್ಕರಿಸುವ ವಿಚಾರ ಗಮನಕ್ಕೆ ಬಂದಿದೆ ಹೀಗಾಗಿ ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ, ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಶಿವಕುಮಾರ್ ವೈ ಮತ್ತು ಕರ್ನಾಟಕ ರಾಜ್ಯ ಚಲುವಾದಿ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಸಿ.ಆನಂದ್ ಕುಮಾರ್ ಅವರು ಜಂಟಿಯಾಗಿ ಸ್ಥಳೀಯ ಜನರಲ್ಲಿ ಮತದಾನದ ಮಹತ್ವದ ಬಗ್ಗೆ ವಿವರಿಸಿ ತಪ್ಪದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸುವಂತೆ ಮನವಿ ಮಾಡಿದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಯೊಬ್ಬರಿಗೂ ಸಂವಿಧಾನದ ಹಕ್ಕು ಪಡೆಯುವಂತೆ ಸೂಚಿಸಿದ್ದಾರೆ. ಮತದಾನ ಎನ್ನುವುದು ಅತ್ಯಂತ ಪ್ರಮುಖವಾದ ಘಟ್ಟ ತಮಗಿಷ್ಟವಾದ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಮ್ಮ ಕೆಲಸ, ಕಾರ್ಯಗಳನ್ನು ಸಾಧಿಸಿಕೊಳ್ಳಬಹುದು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದಲಿತರ, ಶೋಷಿತರ, ದಮನಿತರ ಮತ್ತು ಸಣ್ಣ ಸಣ್ಣ ಅಲೆಮಾರಿ ಜನಾಂಗಗಳ ಅಭಿವೃದ್ಧಿಯನ್ನು ಬಯಸಿದ್ದಾರೆ. ಇದಕ್ಕಾಗಿ ಸಾಕಷ್ಟು ಅನುದಾನ ಕ್ರೋಢೀಕರಿಸಿದ್ದಾರೆ.