7

ಭತ್ತ ಕಟಾವಿಗೆ ಹೆಚ್ಚಿನ ದರ ಪಡೆದರೆ ಕಠಿಣ ಕ್ರಮ : ಡಿಸಿ ಮಿಶ್ರಾ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 29- ಜಿಲ್ಲೆಯಲ್ಲಿ ಭತ್ತ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ಗರಿಷ್ಠ ರೂ.೨,೩೦೦ ಮೀರದಂತೆ ಬಾಡಿಗೆಯನ್ನು ನಿಗದಿಪಡಿಸಲಾಗಿದ್ದು, ಹೆಚ್ಚಿನ ದರ ಪಡೆಯಲು ಮುಂದಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ೯೧,೨೨೫ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಯ ಕ್ಷೇತ್ರ ಆವರಿಸಿದ್ದು, ಈಗಾಗಲೇ ಹಲವು ಕಡೆ ಕಟಾವು ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಶೇ.೯೫ ರಷ್ಟು ರೈತರು ಭತ್ತದ ಬೆಳೆಯನ್ನು ಭತ್ತ ಕಟಾವು ಯಂತ್ರಗಳ ಮೂಲಕ ಕಟಾವು ಮಾಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಬೆಳೆದ ಭತ್ತಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲದ ಕಾರಣ ಹಾಗೂ ಅಕಾಲಿಕ ಮಳೆಯಿಂದ ರೈತರು ಸಂಕಷ್ಟದಲ್ಲಿರುವ ಪ್ರಯುಕ್ತ ಜಿಲ್ಲೆಯಲ್ಲಿ ಭತ್ತ ಬೆಳೆದ ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ.

ಕಂಪ್ಲಿ ಮತ್ತು ಸಿರುಗುಪ್ಪ ತಾಲ್ಲೂಕುಗಳಲ್ಲಿ ಖಾಸಗಿ ಭತ್ತ ಕಟಾವು ಯಂತ್ರಗಳ ಮಾಲೀಕರು ರೈತರಿಂದ ಪ್ರತಿ ಗಂಟೆಗೆ ರೂ.೨,೫೦೦ ರಿಂದ ರೂ.೩,೦೦೦ ಗಳವರೆಗೆ ಬಾಡಿಗೆ ಹಣ ವಸೂಲಿ ಮಾಡುತ್ತಿರುವ ಬಗ್ಗೆ ರೈತರಿಂದ ದೂರುಗಳು ಕೇಳಿ ಬಂದಿರುತ್ತವೆ.

ಈಗಾಗಲೇ ರೈತ ಮುಖಂಡರು ಮತ್ತು ಭತ್ತ ಕಟಾವು ಯಂತ್ರದ ಮಾಲೀಕರೊಂದಿಗೆ ಸಭೆ ನಡೆಸಿದ್ದು, ಅಂದಾಜು ರೂ.೨೩೦೦ ಗಳಿಗೆ ದರ ನಿಗದಿಪಡಿಸಿ ಕೊಡಲು ಕೋರಿರುತ್ತಾರೆ.

ಹಾಗಾಗಿ ಜಿಲ್ಲೆಯಲ್ಲಿರುವ ಭತ್ತ ಕಟಾವು ಯಂತ್ರದ ಮಾಲೀಕರು ರೂ.೨,೩೦೦ ದರಕ್ಕೆ ಮೀರದಂತೆ ಭತ್ತ ಕಟಾವು ಮಾಡಬೇಕು. ತಪ್ಪಿದ್ದಲ್ಲಿ ಭತ್ತ ಕಟಾವು ಯಂತ್ರದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!