ಅತ್ಯುತ್ತಮ ಕವಿತೆ ರಚಿಸಲು ಕನ್ನಡದ ಆಳವಾದ ಅಧ್ಯಯನ ಅಗತ್ಯ : ಜಿಲ್ಲಾಧ್ಯಕ್ಷ ಶರಣೇಗೌಡ
ಕರುನಾಡ ಬೆಳಗು ಸುದ್ದಿ
ಕುಷ್ಟಗಿ, 24- ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದು ಕನ್ನಡದ ಸಾಹಿತ್ಯವನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಯುವ ಕವಿಗಳು ಉತ್ತಮವಾದ ಕವಿತೆಗಳನ್ನು ರಚನೆ ಮಾಡಲು ಸಾಧ್ಯವಾಗುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೋಲಿಸ್ ಪಾಟೀಲ ಅವರು ಹೇಳಿದರು.
ತಾಲೂಕಿನ ಹಿರೇಮನ್ನಾಪುರ ಗ್ರಾಮದ ಗವಿಶಿದ್ದೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಹಿರೇಮನ್ನಾಪೂರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಡೆದ ಕರ್ನಾಟಕ ಕನ್ನಡ ಸಂಭ್ರಮ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಕನ್ನಡ ಭಾಷಾ ಸಾಹಿತ್ಯಕ್ಕೆ ಅಗಾಧವಾಗಿ ಶಕ್ತಿ ಇದೆ. ನಮ್ಮ ಅನೇಕ ಹಿರಿಯ ಕವಿಗಳು ರಚಿಸಿದ ಹಾಗೂ ಕನ್ನಡದ ಕುರಿತು ಇರುವ ಸಾಹಿತ್ಯವನ್ನು ಅಧ್ಯಯನ ಮಾಡಿ ಮೈಗೂಡಿಸಿಕೊಂಡಾಗ ಮಾತ್ರ ಕನ್ನಡದ ಕಂಪು ಹರಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಕನ್ನಡಪರ ಕಾರ್ಯಕ್ರಮಗಳಾದ ಕವಿಗೋಷ್ಟಿ, ದತ್ತಿ ಉಪನ್ಯಾಸಗಳು, ಸಾಹಿತ್ಯ ಸಮ್ಮೇಳನಗಳದಂತಹ ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ಸಾಹಿತಿಗಳನ್ನು ಗುರುತಿಸುವಂತಹ ಕೆಲಸ ಮಾಡುತ್ತಿದೆ ಎಂದರು.
ಹಿರಿಯ ಸಾಹಿತಿ ಹನಮಂತಪ್ಪ ಈಟಿಯವರ ಮಾತನಾಡಿ ಕವಿಗಳು ರಚನೆ ಮಾಡುವಂತಹ ಕವಿತೆಗಳು ಕವನಗಳು ಜನ ಸಾಮಾನ್ಯರಿಗೆ ತಲುಪಬೇಕು. ಸಮಾಜದಲ್ಲಿರುವ ಪಿಡುಗುಗಳನ್ನು ಓಡಿಸುವಂತಹ ಕೆಲಸವನ್ನು ಕವನಗಳು ಕವಿತೆಗಳು ಮಾಡಬೇಕು ಅಂದಾಗ ಮಾತ್ರ ಕವಿಗೂ ಕವಿತೆಗೂ ಒಂದು ಗೌರವ ಸಿಗುತ್ತದೆ ಎಂದರು.
ಜಿಪA ಮಾಜಿ ಸದಸ್ಯ ಹನಮೇಶ ನಾಯಕ ಮಾತನಾಡಿ ನಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಕೊಡಿಸಬೇಕು ಅಂದಾಗ ಮಾತ್ರ ನಮ್ಮ ಕನ್ನಡ ಉಳಿಯಲು ಹಾಗೂ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಕೇಂದ್ರ ಕಸಾಪ ಸಂಘ ಸಂಸ್ಥೆ ಪ್ರತಿನಿಧಿ ನಬಿಸಾಬ ಕುಷ್ಟಗಿ ಮಾತನಾಡಿ ಒಂದು ಸಮುದಾಯದ ವತಿಯಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಇರುವ ಅಭಿರುಚಿಯು ಕನ್ನಡದ ಕಾರ್ಯಕ್ರಮಗಳಲ್ಲಿ ಕಾಣುತ್ತಿಲ್ಲವಾಗಿದೆ ಇದು ನಮ್ಮ ದುರ್ಧೈವವಾಗಿದ್ದು ಸರಕಾರವೂ ಕನ್ನಡಪರ ಕಾರ್ಯಚಟುವಟಿಕೆಗಳಿಗೆ ಹಾಗೂ ಕಲೆ ಸಂಸ್ಕೃತಿಯ ಚಟುವಟಿಕೆಗಳನ್ನು ಮಾಡುವಂತಹ ಸಂಘ ಸಂಸ್ಥೆಗಳಿಗೆ ಹಾಗೂ ಕಲಾವಿದರಿಗೆ ಸಮರ್ಪಕವಾದ ಅನುದಾನವನ್ನು ನೀಡುವ ಮೂಲಕ ಕನ್ನಡವನ್ನು ಹಾಗೂ ಕನ್ನಡಪರ ಕಾರ್ಯಕ್ರಮಗಳ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದರು.
ಪುಸ್ತಕಗಳ ಬಿಡುಗಡೆ : ವಾಲ್ಮೀಕಪ್ಪ ಯಕ್ಕರನಾಳ ಅವರು ರಚಿಸಿದ ‘ಕಟ್ಟೋಣ ಕನ್ನಡ ಕಂಕಣ’ ಎಂಬ ಕೃತಿಯನ್ನು ಹಾಗೂ ಹಿರಿಯ ಸಾಹಿತಿ ಹನಮಂತಪ್ಪ ಈಟಿ ಯವರು ರಚಿಸಿದ ‘ಕಾಮನಬಿಲ್ಲು’ ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಅಕ್ಕಮಹಾದೇವಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರಯ್ಯ ಹಿರೇಮಠ, ಬುಡ್ನೇಸಾಬ ಕಲಾದಗಿ, ವಾಲ್ಮೀಕಪ್ಪ ಯಕ್ಕರನಾಳ, ರವೀಂದ್ರ ಬಾಕಳೆ, ಮಹೇಶ ಮನ್ನಾಪುರ, ಮಹಿಬೂಬ, ಚೈತ್ರಾ ಚಿತ್ರಗಾರ, ಹುಸೇನಮ್ಮ ಗುಡದೂರು, ಕಸಾಪ ತಾಲೂಕಾಧ್ಯಕ್ಷ ವಿರೇಶ ಬಂಗಾರಶೆಟ್ಟರ, ಬಾಲದಂಡಪ್ಪ ತಳವಾರ, ಕೆ ಹುಸೇನಸಾಬ, ಎಂ.ಎA.ಗೊಣ್ಣಾಗರ, ನಿಂಗಪ್ಪ ಸಜ್ಜನ, ಲೆಂಕಪ್ಪ ವಾಲೀಕಾರ, ಮಂಜುನಾಥ ಗುಳೇದಗುಡ್ಡ, ತಾಜುದ್ದಿನ ದಳಪತಿ, ರಾಮೇಶ್ವರ ಡಾಣಿ, ವಿ.ಎಸ್.ಕಾಡಗಿಮಠ, ಎಸ್.ಜಿ.ಕಡೆಮನಿ, ಮಹೇಶ.ಜಿ.ಎಚ್, ಶರಣಪ್ಪ ಲೈನದ್, ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರು, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು. ನಂತರ ಕವಿಗಳು ಕವಿತೆಯನ್ನು ವಾಚನವನ್ನು ಮಾಡಿದರು.